ನೀರಾವರಿಗೆ ಅನುದಾನ ತರದಿದ್ದರೆ ರಾಜಕೀಯ ನಿವೃತ್ತಿ: ಎಚ್‌ಡಿಕೆ

KannadaprabhaNewsNetwork |  
Published : Apr 05, 2024, 01:01 AM ISTUpdated : Apr 05, 2024, 07:36 AM IST
೪ಕೆಎಂಎನ್‌ಡಿ-೧ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಜೆಡಿಎಸ್-ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೋವಾ ಸಿಎಂ ಪ್ರಮೋದ್ ಸಾವಂತ್ ಕೈಎತ್ತಿ ಒಗ್ಗಟ್ಟು ಪ್ರದರ್ಶಿಸಿದರು. | Kannada Prabha

ಸಾರಾಂಶ

ನನ್ನನ್ನು ನಂಬಿರುವ ಜನರಿಗೆ ನಾನು ಎಂದಿಗೂ ದ್ರೋಹ ಬಗೆಯುವುದಿಲ್ಲ. ನಿಮಗೆ ದ್ರೋಹ ಬಗೆದರೆ ದೇವರಿಗೆ ದ್ರೋಹ ಬಗೆದಂತೆ. ನನಗೆ ಆಶೀರ್ವಾದ ಮಾಡಿ ಕಳುಹಿಸಿ 

  ಮಂಡ್ಯ :  ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ತರದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಗುರುವಾರ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಲೋಕಸಭೆ ಚುನಾವಣೆ ಸಂಬಂಧ ಜೆಡಿಎಸ್-ಬಿಜೆಪಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ನಾಡಿನ ನೀರಾವರಿ ಯೋಜನೆಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಸಮರ್ಥವಾಗಿ ದನಿಯೆತ್ತಬೇಕಿದೆ. ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯದ ಕಾವೇರಿ ಕಣಿವೆ ಜನರಿಗೆ ಶಾಶ್ವತ ಪರಿಹಾರ ದೊರಕಿಸಬೇಕಿದೆ. ಅದಕ್ಕಾಗಿ ದೇವೇಗೌಡರ ಮಾದರಿಯಲ್ಲಿ ರೈತರಿಗೆ ಧ್ವನಿಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತೆ ಕೋರಲು ನಿಮ್ಮ ಮುಂದೆ ನಿಂತಿರುವುದಾಗಿ ಹೇಳಿದರು.

ನಂಬಿದವರಿಗೆ ದ್ರೋಹ ಮಾಡಲಾರೆ:

ನನ್ನನ್ನು ನಂಬಿರುವ ಜನರಿಗೆ ನಾನು ಎಂದಿಗೂ ದ್ರೋಹ ಬಗೆಯುವುದಿಲ್ಲ. ನಿಮಗೆ ದ್ರೋಹ ಬಗೆದರೆ ದೇವರಿಗೆ ದ್ರೋಹ ಬಗೆದಂತೆ. ನನಗೆ ಆಶೀರ್ವಾದ ಮಾಡಿ ಕಳುಹಿಸಿ. ಪಂಚರತ್ನ ಯೋಜನೆಗಳ ಜಾರಿಗಾಗಿ ಒಂದು ಅವಕಾಶ ಕೇಳಿದ್ದೆ. ನಾಡಿನ ಜನ ಇನ್ನೂ ನನ್ನನ್ನು ಸಂಪೂರ್ಣವಾಗಿ ನಂಬಲಿಲ್ಲ. ಈಗ ಮತ್ತೆ ಮೋದಿ ಪ್ರಧಾನಿ ಆಗುತ್ತಾರೆ. ರೈತರ ಪರ ದನಿಯಾಗಿ ಕೆಲಸ ಮಾಡುತ್ತೇನೆ.

ನಾನು ಯಾವುದೇ ಶಿಕ್ಷಣ ಸಂಸ್ಥೆ ಕಟ್ಟಿಲ್ಲ, ದೊಡ್ಡ ಕಟ್ಟಡ ಕಟ್ಟಿ ಹಣ ಸಂಪಾದಿಸುತ್ತಿಲ್ಲ. ಚೆನ್ನಾಂಬಿಕೆ ಸಂಸ್ಥೆ ಕಟ್ಟಿ ದುಡಿದು ಕೇತಗಾನಹಳ್ಳಿಯಲ್ಲಿ ಭೂಮಿ ಖರೀದಿ ಮಾಡಿದ್ದೇನೆ, ಭ್ರಷ್ಟಾಚಾರ ಮಾಡಿ ಹಣ ಸಂಪಾದಿಸಿಲ್ಲ. ಆ ದುರ್ಬುದ್ಧಿಯೂ ನನ್ನಲ್ಲಿಲ್ಲ. ಜನರ ಹಿತರಕ್ಷಣೆಗಾಗಿ ಲಾಟರಿ ನಿಷೇಧ ಮಾಡಿದ್ದೆ, ಸಾರಾಯಿ ನಿಷೇಧ ಮಾಡಿದ್ದೆ. ನಾನು ಆ ರೀತಿ ಪಾಪದ ಹಣ ಸಂಪಾದಿಸಲು ಎಂದಿಗೂ ಮುಂದಾಗಿಲ್ಲ ಎಂದು ಹೇಳಿದರು.

ಜನರ ಮೇಲೆ ಸಾಲದ ಹೊರೆ:

ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಗ್ಯಾರಂಟಿಗಳ ಜಾರಿಗೆ ಮಾಡಿರುವ ಸಾಲದ ಹೊರೆಯನ್ನು ಯಾರ ತಲೆಗೆ ಕಟ್ಟುತ್ತೀರಾ?. ಐದು ಕೆಜಿ ಅಕ್ಕಿಯನ್ನು ಮೋದಿ ಸರ್ಕಾರ ಕೊಡುತ್ತಿದೆ. ಉಳಿದ ಐದು ಕೆಜಿ ಅಕ್ಕಿಗೆ ೧೭೦ ರು. ಕೊಡುತ್ತಿರುವುದಾಗಿ ಹೇಳುತ್ತಿದ್ದೀರಿ. ಅದು ಎಷ್ಟು ಜನರಿಗೆ ಸಿಗುತ್ತಿದೆಯೋ ಗೊತ್ತಿಲ್ಲ. ಬೆಳಿಗ್ಗೆ ಆರು ಗಂಟೆಯಿಂದ ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತಿದೆ. ಮದ್ಯದ ಬೆಲೆ ಹೆಚ್ಚು ಮಾಡಿ ಜನರಿಂದಲೇ ವಸೂಲಿ ಮಾಡುತ್ತಿದ್ದಾರೆ. ನನ್ನ ಮೇಲೆ ಭರವಸೆ ಇಡಿ. ಕೇಂದ್ರದಿಂದ ಒಳ್ಳೆಯ ಕಾರ್ಯಕ್ರಮಗಳನ್ನು ತರುತ್ತೇನೆ. ಈ ಬಾರಿ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ನಾನು ಮಾತಾಡುವುದಿಲ್ಲ. ಅವರು ಯಾವ ರೀತಿ ಹಣ ಖರ್ಚು ಮಾಡಲು ಮುಂದಾಗಿದ್ದಾರೋ ಅದರ ಬಗ್ಗೆಯೂ ಚರ್ಚೆ ಮಾಡುವುದಿಲ್ಲ. ಮುಸಲ್ಮಾನರು, ದಲಿತರು ಒಳ್ಳೆಯ ತೀರ್ಮಾನ ಮಾಡಿ. ನಿಮ್ಮ ಋಣವನ್ನು ಪ್ರಾಮಾಣಿಕವಾಗಿ ತೀರಿಸುತ್ತೇನೆ ಎಂದು ಭರವಸೆ ನೀಡಿದರು.

ಸಮಾವೇಶದಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಸಾ.ರಾ. ಮಹೇಶ್, ಕೆ.ಸಿ. ನಾರಾಯಣಗೌಡ, ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ. ಸುರೇಶ್‌ಗೌಡ, ಡಾ.ಕೆ. ಅನ್ನದಾನಿ, ಕೆ. ಟಿ. ಶ್ರೀಕಂಠೇಗೌಡ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್, ಜೆಡಿಎಸ್ ಮುಖಂಡ ಬಿ.ಆರ್. ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಇಂದ್ರೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ. ಉಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ ಸೇರಿ ಇತರರಿದ್ದರು.

ಮೈತ್ರಿ ವೈಯಕ್ತಿಕ ಲಾಭಕ್ಕಲ್ಲ: ನಾನು ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಂಸತ್ ಸದಸ್ಯರಿಗೆ ದನಿ ತುಂಬುವ ಸಲುವಾಗಿ ಮೈತ್ರಿ ಮಾಡಿಕೊಂಡಿದ್ದೇನೆ. ೨೮ ಸ್ಥಾನಗಳಲ್ಲಿ ಮೈತ್ರಿ ಪಕ್ಷಕ್ಕೆ ಗೆಲ್ಲಿಸಿಕೊಟ್ಟರೆ ರಾಜ್ಯದ ನೀರಾವರಿ ಯೋಜನೆಗಳಿಗೆ ನ್ಯಾಯ ಒದಗಿಸಲು, ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ನಮ್ಮ ರೈತರ ಬೆಳೆಗಳು ಒಣಗಲು ಬಿಟ್ಟು ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಕಬ್ಬಿಗೆ ನೀರು ಕೊಡಲು ನಿಮಗೆ ಯೋಗ್ಯತೆ ಇಲ್ಲ. ನಮ್ಮ ನೀರು ನಮ್ಮ ಹಕ್ಕು ಅಂತೆಲ್ಲಾ ಘೋಷಣೆ ಕೂಗುತ್ತೀರಿ, ಪಾದಯಾತ್ರೆ ಮಾಡುತ್ತೀರಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಯಿತು. ನಮ್ಮ ನೀರು-ನಮ್ಮ ಹಕ್ಕಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ನನ್ನ-ಗೌಡರ ಕೊಡುಗೆ ಜನರಿಗೆ ಗೊತ್ತಿದೆ: ಕಾಂಗ್ರೆಸ್‌ನವರು ಮಂಡ್ಯ ಜಿಲ್ಲೆಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ರಾಜಕೀಯ ಭಿನ್ನಾಭಿಪ್ರಾಯದಿಂದ ಬಿಟ್ಟುಹೋದವರೂ ನಮ್ಮ ಕೊಡುಗೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ನಮ್ಮ ಕೊಡುಗೆ ಏನೆಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ಲೋಕೋಪಯೋಗಿ ಇಲಾಖೆ ಕಟ್ಟಡ, ಮೆಡಿಕಲ್ ಕಾಲೇಜು, ಶಾಲಾ-ಕಾಲೇಜು, ವಿದ್ಯುತ್ ಇಲಾಖೆಗೆ ಕೊಟ್ಟ ಕೊಡುಗೆಗಳು ಸಾಕಷ್ಟಿವೆ. ೨೦೧೮ರಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಮಾತು ಕೊಟ್ಟಿದ್ದೆ. ಆದರೆ, ಸಂಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ನಾನು ಮುಖ್ಯಮಂತ್ರಿ ಆಗೋಲ್ಲ ಎಂದರೂ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿದರು. ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರೆಸುವಂತೆ ಹಠ ಹಿಡಿದರು. ಅದರ ನಡುವೆಯೂ ರೈತರ ಸಾಲಮನ್ನಾ ಮಾಡಲೇಬೇಕೆಂಬ ಹಠಕ್ಕೆ ಬಿದ್ದು ಮಾಡಿದೆ. ಇವತ್ತು ಪ್ರತಿದಿನ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕಾಂಗ್ರೆಸ್‌ನವರು ಕೇಳುತ್ತಿದ್ದಾರೆ. ಅವತ್ತು ನಾನು ಸಾಲಮನ್ನಾ ಮಾಡಿದಾಗ ಕೇಂದ್ರದ ಮುಂದೆ ಭಿಕ್ಷೆ ಬೇಡಲಿಲ್ಲ. ಜನರ ತೆರಿಗೆ ಹಣದಲ್ಲೇ ಕಾರ್ಯಕ್ರಮ ಮಾಡಿದ್ದೆ ಎಂದು ಕಾಂಗ್ರೆಸ್‌ನವರನ್ನು ತರಾಟೆ ತೆಗೆದುಕೊಂಡರು.

ರಾಮನಗರಕ್ಕೆ ಡಿ.ಕೆ.ಶಿವಕುಮಾರ್ ಕೊಡುಗೆ ಏನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ನಾನು ಬರುವುದಕ್ಕೆ ಮುನ್ನ ರಾಮನಗರ ಹೇಗಿತ್ತು, ಈಗ ಹೇಗಿದೆ ಎಂಬ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇದು ಹೊಸ ತೆರಿಗೆ ಹಾಕದಜನಹಿತ ಬಜೆಟ್‌: ಅಶೋಕ್‌
ಅರವಿಂದ್‌ ಲಿಂಬಾವಳಿ ಅದ್ಧೂರಿ ಹುಟ್ಟುಹಬ್ಬ