
ಮಡಿಕೇರಿ: ಪೆಟ್ರೋಲ್ ಬಂಕ್ ನಲ್ಲಿ ಬಿದ್ದು ಸಿಕ್ಕಿದ್ದ 2 ಲಕ್ಷ ರು. ಮೌಲ್ಯದ ಚಿನ್ನದ ಬ್ರೆಸ್ ಲೆಟ್ ನ್ನು ಅಲ್ಲಿನ ಸಿಬ್ಬಂದಿ ಮಾಲೀಕರಿಗೆ ಮರಳಿ ನೀಡಿ ಮಾದರಿಯಾಗಿದ್ದಾರೆ. ಸುಂಟಿಕೊಪ್ಪದ ಟಿ.ಎಂ.ಬಸವರಾಜು ಪತ್ನಿಯೊಂದಿಗೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಂದಭ೯ ಕೊಡಗರಹಳ್ಳಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ವಾಹನಕ್ಕೆ ಇಂಧನ ಹಾಕಿಸಿಕೊಂಡರು. ಈ ಸಂದರ್ಭ ಆಕಸ್ಮಿಕವಾಗಿ ಬ್ರೇಸ್ ಲೆಟ್ ಅಲ್ಲಿ ಬಿದ್ದು ಹೋಗಿತ್ತು. ಕೊಣನೂರು ಬಳಿ ಕೈಯಲ್ಲಿದ್ದ ಬ್ರೆಸ್ ಲೆಟ್ ಕಾಣೆಯಾಗಿರುವುದು ಬಸವರಾಜು ಗಮನಕ್ಕೆ ಬಂದು ವಾಪಾಸ್ ಹಿಂದಿರುಗಿ ತಾವು ವಾಹನ ನಿಲ್ಲಿಸಿದ್ದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಪೆಟ್ರೋಲ್ ಬಂಕ್ ನ ಸಿಬ್ಬಂದಿ ರಾಧ ಎಂಬಾಕೆ ಬ್ರೆಸ್ ಲೆಟ್ ನ್ನು ಸುರಕ್ಷಿತವಾಗಿ ಮಾಲೀಕರಿಗೆ ನೀಡಿದ್ದು ಗೊತ್ತಾಯಿತು. ಮಾಲೀಕರಿಂದ ಬ್ರೆಸ್ ಲೆಟ್ ಹಿಂದಿರುಗಿ ಪಡೆದ ಬಸವರಾಜು ಸಿಬ್ಬಂದಿ ರಾಧಾ ಅವರ ಪ್ರಾಮಾಣಿಕತೆ ಪ್ರಶಂಸಿಸಿದರು. 17 ಗ್ರಾಮ್ ಮೌಲ್ಯದ ಚಿನ್ನದ ಬ್ರೆಸ್ ಲೆಟ್ ನ್ನು ಸುರಕ್ಷಿತವಾಗಿ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ರಾಧಾ ಸಮಾಜದ ಎಲ್ಲರಿಗೂ ಮಾದರಿಯಾಗಿದ್ದು ಸೂಕ್ತ ಬಹುಮಾನ ನೀಡುವುದಾಗಿಯೂ ಬಸವರಾಜು ತಿಳಿಸಿದ್ದಾರೆ.