ಕನ್ನಡಪ್ರಭ ವಾರ್ತೆ ಮಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಇದ್ದ ರೀತಿ ಇಲ್ಲ. ಈಗ 10-12 ಸೈಟ್ ಯಾಕೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿ ಎಲ್ಲವನ್ನೂ ಸರೆಂಡರ್ ಮಾಡಿ ಆಗಿರುವ ತಪ್ಪಿಗೆ ಅವರು ರಾಜೀನಾಮೆ ನೀಡಿ ಆರಾಮವಾಗಿ ಇದ್ದರೆ ಒಳ್ಳೆಯದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಮಂಗಳೂರಲ್ಲಿ ಬುಧವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹಳೆಯ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ನಮ್ಮ ಜತೆಯಲ್ಲಿದ್ದ ಸಿದ್ದರಾಮಯ್ಯ ಇಂದು ಇಲ್ಲ. 10-12 ಸೈಟ್‌ಗಾಗಿ ಅವರು ಈ ಮಟ್ಟಕ್ಕೆ ಯೋಚನೆ ಮಾಡುತ್ತಾರೆ ಎಂಬುದು ನನಗಂತೂ ಗೊತ್ತಿರಲಿಲ್ಲ. ಇದು ಆಗಬಾರದಿತ್ತು. ನಾವೆಲ್ಲ ಜೊತೆಯಲ್ಲಿ ಬೆಳೆದವರು. ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅಂತಹವರು ಯಾವುದೋ ಒಂದು ಸಣ್ಣ ವಿಚಾರದಲ್ಲಿ ತನ್ನತನವನ್ನು ಪರೀಕ್ಷೆಗೆ ಇಟ್ಟುಬಿಟ್ಟರಲ್ಲ ಎಂಬ ನೋವಿದೆ. ಮೂಡಾ ಹಗರಣವನ್ನು ಸಿಎಂ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಒಳ್ಳೆಯದಲ್ಲ, ಇಂಥವರು ಸಮರ್ಥನೆ ಮಾಡಿಕೊಳ್ಳಲೂ ಬಾರದು. ತಪ್ಪನ್ನು ಒಪ್ಪಿಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.ವಾಲ್ಮೀಕಿ ಹಗರಣ ಹಾಗೂ ಮೂಡಾ ಹಗರಣ ಎರಡರಲ್ಲೂ ಸಿದ್ದರಾಮಯ್ಯವರಿಗೆ ವಿಷಯ ತಿಳಿದಿದೆ. ವಿಷಯ ತಿಳಿದ ಮೇಲೂ ಯಾವ ರೀತಿ ನೈತಿಕ ಹೊಣೆ ಹೊರಬೇಕು ಎಂಬುದನ್ನು ಸಿದ್ದರಾಮಯ್ಯ ಅವರೇ ತೀರ್ಮಾನ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನಿನ ಕುಣಿಕೆ ಯಾವ ರೀತಿಯಲ್ಲಿ ಸುತ್ತಿಕೊಳ್ಳಲಿದೆ ಎಂಬುದನ್ನು ನೋಡೋಣ ಎಂದರು.
ವಾಸ್ತವಾಂಶ ಯಾರು ಏನು ಮುಚ್ಚಿ ಹಾಕಲು ಆಗುವುದಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ ಎಂದು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಬೇರೆಯವರ ಬಗ್ಗೆ ಹೇಗೆ ನಡೆದುಕೊಂಡರು, ಏನಾಯಿತು ಅನ್ನುವುದಕ್ಕಿಂತ ಸಿದ್ದರಾಮಯ್ಯನವರು ಇವರೇನಾ ಎಂಬ ಸಂಶಯ ಆಗುತ್ತಿದೆ. ಅದನ್ನು ಅವರು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಿಸಲಿ. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆ ಎಂದರು.ಮಾಜಿ ಸಚಿವ ನಾಗೇಂದ್ರ ಅವರ ಪತ್ನಿ ಬಂಧನ ಏಕೆ ಆಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಗೇಂದ್ರ ಅವರು ತಪ್ಪು ಮಾಡಿರುವುದು ಸಾಬೀತು ಆಗಿದೆ ಎಂಬುದು ಕಾಣಿಸುತ್ತಿದೆ. ವಾಲ್ಮೀಕಿ ನಿಗಮ ಹಗರಣದ ಹಣ ಬಳ್ಳಾರಿ ಚುನಾವಣೆಗೆ ಮಾತ್ರವಲ್ಲ, ನಾಲ್ಕೈದು ಕಡೆಗೆ ಹೋಗಿರುತ್ತದೆ. 187 ಕೋಟಿ ರು. ಬೇರೆ ಬೇರೆ ಕಡೆ ಹೋಗಿರುತ್ತದೆ ಎಂಬುದನ್ನು ಜನ ಹೇಳುತ್ತಿದ್ದಾರೆ ಎಂದರು.ರೈಲ್ವೆ ಗುಡ್ಡ ಕುಸಿತಕ್ಕೆ ಸೂಕ್ತ ಮುನ್ನೆಚ್ಚರಿಕೆ: ಉತ್ತರ ಕನ್ನಡದ ಶಿರೂರು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿತ ವಿಚಾರದ ಹಿನ್ನೆಲೆಯಲ್ಲಿ ರೈಲ್ವೆ ಮಾರ್ಗಗಳ ಮೇಲೂ ಗುಡ್ಡ ಕುಸಿತದ ಆತಂಕದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಣ್ಣ, ರೈಲ್ವೆ ಇಲಾಖೆಯಿಂದ ನಮ್ಮದೆ ಆದ ವ್ಯವಸ್ಥೆಯಲ್ಲಿ ಪಾಕೃತಿಕ ವಿಕೋಪ ನಿರ್ವಹಣೆ ಮಾಡುತ್ತೇವೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಇರುವುದಕ್ಕಿಂತ ವಿಭಿನ್ನವಾಗಿ ನಮ್ಮ ಇಲಾಖೆಯಲ್ಲಿ ವ್ಯವಸ್ಥೆಗಳಿವೆ. ಇದಕ್ಕಾಗಿ ವಾರ್ ರೂಂ ಮಾಡಿದ್ದೇವೆ. ಪ್ರತಿಯೊಂದು ಕಡೆಗಳಲ್ಲೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಈ ಬಾರಿ ಮಳೆ ತುಂಬಾ ಜಾಸ್ತಿ ಆಗುತ್ತಿದೆ. ಯಾವುದೇ ಮಳೆ ಬಂದರೂ ನಮ್ಮ ರೈಲು ನಿಲ್ಲಬಾರದು. ಗೂಡ್ಸ್, ಪ್ಯಾಸೆಂಜರ್ ರೈಲು ನಿಲ್ಲಬಾರದು ಎಂಬ ನಿಟ್ಟಿನಲ್ಲಿ ಕ್ರಮ ಆಗಲಿದೆ ಎಂದರು.