ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ರಿಲೀಫ್ ಸಿಕ್ಕಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.
ರಾಜ್ಯದ ಗಡಿ ದಾಟದಂತೆ, ಕೆ.ಆರ್.ನಗರಕ್ಕೆ ಪ್ರವೇಶಿಸದಿರುವುದು ಸೇರಿದಂತೆ ಇತರ ಹಲವು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮೂರು ದಿನಕ್ಕೂ ಹೆಚ್ಚು ಕಾಲ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಸೋಮವಾರ ಸಂಜೆ ಜಾಮೀನು ಮಂಜೂರು ಆಗಿರುವುದರಿಂದ ಪ್ರಕ್ರಿಯೆಗಳನ್ನು ಮುಗಿಸಬೇಕಿರುವ ಕಾರಣ ಮಂಗಳವಾರ ರೇವಣ್ಣ ಜೈಲಿನಿಂದ ಹೊರಬರಲಿದ್ದಾರೆ. ಇದರೊಂದಿಗೆ ಒಟ್ಟು 11 ದಿನಗಳ ಅವರ ಬಂಧನ ಅಂತ್ಯಗೊಂಡಂತಾಗುತ್ತದೆ. ಇದೇ ತಿಂಗಳ 4ರಂದು ರೇವಣ್ಣ ಅವರನ್ನು ಬಂಧಿಸಲಾಗಿತ್ತು. ನಾಲ್ಕು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಲಾಗಿತ್ತು. ಬಳಿಕ 8ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ರೇವಣ್ಣ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು. ನ್ಯಾಯಾಲಯದ ಲಿಖಿತ ಅನುಮತಿ ಇಲ್ಲದೆ ರಾಜ್ಯದ ಗಡಿ ದಾಟುವಂತಿಲ್ಲ. ಐದು ಲಕ್ಷ ರು. ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆಯನ್ನು ಒದಗಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಸಾಕ್ಷಿಗಳನ್ನು ನಾಶ ಮಾಡುವ ಪ್ರಯತ್ನ ಮಾಡಬಾರದು. ದೂರುದಾರರು, ಸಂತ್ರಸ್ತರಿಗೆ ಬೆದರಿಕೆ ಹಾಕುವಂತಿಲ್ಲ. ತನಿಖಾಧಿಕಾರಿಗೆ ಸಹಕಾರ ನಿಡಬೇಕು. ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೆ.ಆರ್.ನಗರ ಮತ್ತು ಸಂತ್ರಸ್ತೆಯ ನಿವಾಸದ ಕಡೆ ಸುಳಿಯಬಾರದು. ಪ್ರತಿ ತಿಂಗಳ ಎರಡನೇ ಭಾನುವಾರ ಮುಂದಿನ ಆರು ತಿಂಗಳು ಅಥವಾ ಆರೋಪಪಟ್ಟಿ ಸಲ್ಲಿಕೆಯಾಗುವವರೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನ ಎಚ್.ಡಿ.ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರೆ, ಎಸ್‌ಐಟಿ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯ್ಕ್ ಮತ್ತು ಜಯ್ನಾ ಕೊಠಾರಿ ವಾದವನ್ನು ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತು.
ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿದ ಎಸ್ಐಟಿ ಪರ ವಕೀಲರು, ಎಚ್.ಡಿ.ರೇವಣ್ಣ ಕುಟುಂಬವು ರಾಜಕೀಯವಾಗಿ ಪ್ರಭಾವಿಯಾಗಿದೆ. ರೇವಣ್ಣ ಕುಟುಂಬದ ವಿರುದ್ಧ ಹಲವು ಚುನಾವಣಾ ಅಕ್ರಮದ ದೂರುಗಳು ಸಲ್ಲಿಕೆ ಮಾಡಿದ್ದರೂ ಇವರ ಕುಟುಂಬ ಪ್ರಭಾವವಾಗಿರುವ ಕಾರಣ ಅವೆಲ್ಲದರಲ್ಲೂ ಬಿ ವರದಿ ಸಲ್ಲಿಕೆಯಾಗಿದೆ. ಇಂತಹ ಪರಿಸ್ಥಿತಿ ಇರುವಾಗ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶವಾಗದೆ ಉಳಿಯಲಿದೆಯೇ ಎಂದು ವಾದಿಸಿದರು.
ಪ್ರಕರಣದ ದಿಕ್ಕು ತಪ್ಪಿಸಲು ಸಂತ್ರಸ್ತೆಯ ಹೇಳಿಕೆಯನ್ನು ಈಗ ವೈರಲ್ ಮಾಡಲಾಗಿದೆ. ರೇವಣ್ಣ ಅವರ ಕುಟುಂಬ ಪಿತೂರಿ ನಡೆಸಿ ಸಂತ್ರಸ್ತೆಯನ್ನು ಅಪಹರಿಸಿದೆ. ಸಂತ್ರಸ್ತರ ಬದುಕು ಅಪಾಯದಲ್ಲಿದೆ ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪಿಸಿದ ರೇವಣ್ಣ ಪರ ವಕೀಲರು, ಸಂತ್ರಸ್ತೆ ಮಹಿಳೆಯು ಕಳೆದ 10 ವರ್ಷಗಳಿಂದ ರೇವಣ್ಣ ಮನೆಯಲ್ಲಿ ಮನೆ ಕೆಲಸಕ್ಕೆ ಇದ್ದವರಾಗಿದ್ದರು. ಅಲ್ಲದೇ, ಸಂತ್ರಸ್ತೆಯು ರೇವಣ್ಣ ಸಂಬಂಧಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅಪಹರಣವಾಗಿದ್ದರು ಎಂದು ಮಹಿಳೆ ವಿಡಿಯೊ ಬಿಡುಗಡೆ ಮಾಡಿದ್ದು, ತನ್ನನ್ನು ಯಾರೂ ಅಪಹರಿಸಿಲ್ಲ ಎಂದಿದ್ದಾರೆ. ಹೀಗಾಗಿ ಸರ್ಕಾರಿ ಅಭಿಯೋಜಕರ ಅಂಶಗಳೆಲ್ಲವೂ ತಪ್ಪಿನಿಂದ ಕೂಡಿವೆ ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿಯ ತೀರ್ಪನ್ನು ಸಂಜೆಗೆ ಕಾಯ್ದಿರಿಸಿತು. ಸಂಜೆ ಜಾಮೀನು ಅರ್ಜಿ ತೀರ್ಪು ಪ್ರಕಟಿಸಿದ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.ಜೈಲಲ್ಲಿ 5 ನಿಮಿಷ ಕಣ್ಣೀರಿಟ್ಟ ರೇವಣ್ಣ
ಬೆಂಗಳೂರು: ‘ನಾನು ತಪ್ಪು ಮಾಡಿದ್ದರೆ ಇನ್ನೂ ಶಿಕ್ಷೆ ಕೊಡಲಿ. ಏನೂ ತಪ್ಪು ಮಾಡದ ನನಗೆ ಈ ಶಿಕ್ಷೆ ಕೊಟ್ಟಿದ್ದಾರೆ ಎಂದು ಎಚ್.ಡಿ.ರೇವಣ್ಣ ಐದು ನಿಮಿಷ ಕಣ್ಣೀರು ಹಾಕಿದರು’ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಜಾಮೀನು ಲಭಿಸುವುದಕ್ಕೂ ಮೊದಲು ಸೋಮವಾರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರೇವಣ್ಣ ಅವರನ್ನು ದೇವೇಗೌಡ ಭೇಟಿಯಾಗಿದ್ದರು.