ಕೇಸ್‌ ರದ್ದು ಕೋರಿ ರೇವಣ್ಣ ಅರ್ಜಿ: ಹೈಕೋರ್ಟ್‌ ನೋಟಿಸ್

KannadaprabhaNewsNetwork | Updated : Jun 01 2024, 12:42 PM IST

ಸಾರಾಂಶ

ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಮಾಜಿ ಸಚಿವ ಹಾಗೂ ಪ್ರಕರಣದ ಮೊದಲ ಆರೋಪಿಯಾದ ಎಚ್‌.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

 ಬೆಂಗಳೂರು : ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಮನೆಕೆಲಸದಾಕೆಯನ್ನು ಅಪಹರಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಮಾಜಿ ಸಚಿವ ಹಾಗೂ ಪ್ರಕರಣದ ಮೊದಲ ಆರೋಪಿಯಾದ ಎಚ್‌.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಪ್ರಕರಣ ಸಂಬಂಧ ಮೈಸೂರು ಜಿಲ್ಲೆಯ ಕೆ.ಆರ್‌. ನಗರ ಮತ್ತು ಹಾಸನದ ಹೊಳೆನರಸೀಪುರ ಪೊಲೀಸ್‌ ಠಾಣೆಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕು ಎಂದು ಎಚ್‌.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಗಳು, ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.

ಅರ್ಜಿ ಸಂಬಂಧ ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ (ಸರ್ಕಾರ) ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಸೋಮವಾರಕ್ಕೆ (ಜೂ.3) ಮುಂದೂಡಿತು.

ವಿಚಾರಣೆ ವೇಳೆ ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌, ಮಹಿಳೆಯ ಅಪಹರಣ ಪ್ರಕರಣದಲ್ಲಿ ಅರ್ಜಿದಾರ ರೇವಣ್ಣ ಅವರ ಪಾತ್ರ ಇಲ್ಲ. ಅಪಹರಣ ಪ್ರಕರಣದಲ್ಲಿ ಬೆದರಿಕೆ ಹಾಗೂ ಬೇಡಿಕೆ ಇರಬೇಕಾಗುತ್ತದೆ. ಈ ಪ್ರಕರಣದಲ್ಲಿ ಅಂತಹ ಯಾವುದೇ ಬೆದರಿಕೆ ಹಾಗೂ ಬೇಡಿಕೆ ಇಲ್ಲ. ಹೀಗಾಗಿ ಎಫ್‌ಐಆರ್ ದಾಖಲಿಸಿರುವುದೇ ಕಾನೂನು ಬಾಹಿರ ಎಂದು ವಾದಿಸಿದರು.

ಪ್ರಕರಣದಲ್ಲಿ ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯು ರೇವಣ್ಣ ಅವರ ಮನೆಯಲ್ಲಿ ಹಲವು ವರ್ಷ ಕೆಲಸ ಮಾಡುತ್ತಿದ್ದರು. ಕರೆದರೆ ಸಾಕು ಅವರೇ ಬರುವಂತಹವರು. ಅಂತಹವರನ್ನು ಅಪಹರಣ ಮಾಡುವ ಅಗತ್ಯೇನು ಇಲ್ಲ. ದೂರಿನಲ್ಲಿ ಹೇಳಿರುವಂತೆ ಸತೀಶ್‌ ಬಾಬಣ್ಣ ಅವರು ಮಹಿಳೆಯನ್ನು ಕರೆದೊಯ್ದಿದ್ದಾರೆ ಎನ್ನಲಾಗಿದೆ. ಆದರೆ, ಸತೀಶ್ ಬಾಬಣ್ಣಗೆ ಮಹಿಳೆಯನ್ನು ಕರೆತರುವಂತೆ ರೇವಣ್ಣ ಅವರು ಯಾವುದೇ ಸೂಚನೆ ನೀಡಿಲ್ಲ. ಸೂಚನೆ ನೀಡಿದ್ದಾರೆ ಎನ್ನುವ ಬಗ್ಗೆ ಯಾವುದೇ ದಾಖಲೆ ಇಲ್ಲ. ಸಂತ್ರಸ್ತೆಯನ್ನು ಅರ್ಜಿದಾರರ ವಶದಲ್ಲಿಯೂ ಇಟ್ಟುಕೊಂಡಿಲ್ಲ. ದೂರಿನಲ್ಲಿ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಹೀಗಾಗಿ, ಎಫ್‌ಐಆರ್‌ ರದ್ದುಪಡಿಸಬೇಕು ರದ್ದುಗೊಳಿಸಬೇಕು ಎಂದು ಕೋರಿದರು.

ಅಲ್ಲದೆ, ಪ್ರಕರಣದಲ್ಲಿ ಅಪ್ಪ, ಅಮ್ಮ ಮತ್ತು ಮಗನನ್ನು ವಶದಲ್ಲಿಟ್ಟುಕೊಳ್ಳಲು ಎಸ್‌ಐಟಿ ಬಯಸಿದೆ. ಆರೋಪಿ ಪ್ರಜ್ವಲ್ ತಾನೇ ಹಾಜರಾಗುತ್ತೇನೆ ಎಂದು ತಿಳಿಸಿದ್ದರೂ, ವಿಮಾನ ನಿಲ್ದಾಣದಲ್ಲಿ ಪೊಲೀಸರನ್ನು ಜಮಾಯಿಸಿ ಡ್ರಾಮಾ ಸೃಷ್ಟಿಸಲಾಗಿದೆ ಎಂದು ಸಿ.ವಿ. ನಾಗೇಶ್ ಹೇಳಿದರು.

ಅಂತಿಮವಾಗಿ ಎಸ್‌ಐಟಿಗೆ ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

Share this article