ಕಾಂಗ್ರೆಸ್‌ ಸರ್ಕಾರದಿಂದ ಸೇಡಿನ ರಾಜಕಾರಣ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

1992ರಲ್ಲಿ ರಾಮಮಂದಿರಕ್ಕಾಗಿ ಹುಬ್ಬಳ್ಳಿಯಲ್ಲಿ ಹೋರಾಟ ನಡೆದಿತ್ತು. ಆ ಸಮಯದಲ್ಲಿ ಕೆಲವು ಪ್ರಕರಣಗಳು ದಾಖಲಾಗಿದ್ದವು. ಈಗ ಅದಕ್ಕೆ ಮರು ಜೀವ ತುಂಬುವ ಮೂಲಕ ಕಾಂಗ್ರೆಸ್ ದುಷ್ಕೃತ್ಯ ಎಸಗುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.

- ಧಾರವಾಡದಲ್ಲಿ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆರೋಪಕನ್ನಡಪ್ರಭ ವಾರ್ತೆ ಧಾರವಾಡ

32 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರು ಜೀವ ನೀಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.

ಇಲ್ಲಿಯ ಟೋಲ್‌ ನಾಕಾದಿಂದ ನುಗ್ಗಿಕೇರಿ ವರೆಗೆ ನಡೆಯಲಿರುವ ರಸ್ತೆ ಕಾಮಗಾರಿ ವೀಕ್ಷಣೆಗೆಗಾಗಿ ಮಂಗಳವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 1992ರಲ್ಲಿ ರಾಮಮಂದಿರಕ್ಕಾಗಿ ಹುಬ್ಬಳ್ಳಿಯಲ್ಲಿ ಹೋರಾಟ ನಡೆದಿತ್ತು. ಆ ಸಮಯದಲ್ಲಿ ಕೆಲವು ಪ್ರಕರಣಗಳು ದಾಖಲಾಗಿದ್ದವು. ಈಗ ಅದಕ್ಕೆ ಮರು ಜೀವ ತುಂಬುವ ಮೂಲಕ ಕಾಂಗ್ರೆಸ್ ದುಷ್ಕೃತ್ಯ ಎಸಗುತ್ತಿದೆ ಎಂದರು.

ಈ ಹಿಂದೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ಗಲಾಟೆ ಆಗಿತ್ತು. ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಇನ್‌ಸ್ಪೆಕ್ಟರ್ ಅವರನ್ನು ಕೊಲ್ಲಲು ಹೋಗಿದ್ದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಹೋಗಿದ್ದರು. ಪಿಎಫ್‌ಐನಿಂದಲೂ ಗಲಾಟೆ ಆಗಿತ್ತು. ಅವರನ್ನೆಲ್ಲ ಇವರು ಖುಲಾಸೆ ಮಾಡುತ್ತಾರೆ. ಆದರೆ, 32 ವರ್ಷದ ಹಿಂದಿನ ಕೇಸ್‌ ಅನ್ನು ಅನಾವಶ್ಯಕವಾಗಿ ಹೊರ ತೆಗೆಯುತ್ತಾರೆ. ಒಬ್ಬ ಆಟೋ ಓಡಿಸಿ ಜೀವನ ನಡೆಸುವ ಬಡವನ ಮೇಲಿನ ಪ್ರಕರಣವನ್ನು ಹೊರ ತೆಗೆಯಲಾಗಿದೆ. ವಯಸ್ಸಾದವರ ಬಂಧನ ಮಾಡಿದ್ದಾರೆ. ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಈ ಸರ್ಕಾರ ಗುರಿಯಾಗಿಸುತ್ತಿದೆ. ಇದರ ವಿರುದ್ಧ ಹುಬ್ಬಳ್ಳಿಯಲ್ಲಿ ದೊಡ್ಡ ಹೋರಾಟ ನಡೆಯಲಿದೆ. ವಿಪಕ್ಷ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಶಹರ ಠಾಣೆ ಎದುರು ಪ್ರತಿಭಟನೆ ಮಾಡುತ್ತೇವೆ. ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂಬುದು ನಮ್ಮ ಒತ್ತಾಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ರಾಮ ಇದ್ದಂತೆ ಎಂಬ ಮಾಜಿ ಸಚಿವ ಎಚ್‌. ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೆಲ್ಲದ, ಇಡೀ ದೇಶಕ್ಕೆ ಮರ್ಯಾದಾ ಪುರುಷೋತ್ತಮ ರಾಮನೊಬ್ಬನೇ. ಆದರೆ, ಕಾಂಗ್ರೆಸ್‌ನವರಿಗೆ ಬೇರೆ ರಾಮ ಇದ್ದಾರೆ. ಸಿದ್ದರಾಮಯ್ಯ, ಆ ರಾಮಯ್ಯ ಈ ರಾಮಯ್ಯ ಎಂದು ಬಹಳಷ್ಟು ಜನ ಇದ್ದಾರೆ. ಆದರೆ, ದೇಶದ ಜನತೆಗೆ ಶ್ರೀರಾಮನೊಬ್ಬನೇ ಎಂದರು.

Share this article