ಗದಗ: ಕಂದಾಯ ಇಲಾಖೆಯಲ್ಲಿ ಇಂದಿಗೂ ನಮ್ಮ ರೈತರು ಹಾಗೂ ಜನರನ್ನು ಬೇರೆ ದೃಷ್ಟಿಕೋನದಿಂದ ನೋಡುವ(ಗುಲಾಮಗಿರಿ) ಸಂಸ್ಕೃತಿ ಇದೆ. ಅದನ್ನು ಬಿಟ್ಟು ಜನಸ್ನೇಹಿಯಾಗಬೇಕು. ಮುಖ್ಯವಾಗಿ ಕಂದಾಯ ನೌಕರರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ಸೋಮವಾರ ನಗರದ ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ತಾಲೂಕು ಪ್ರಜಾಸೌಧ ಕಟ್ಟಡದ ಶಿಲಾನ್ಯಾಸದ ನಂತರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಇತ್ತೀಚೆಗೆ ಸಾರ್ವಜನಿಕರ ಭೇಟಿ ಕಾರ್ಯಕ್ರಮದಲ್ಲಿ ಅನೇಕ ನಾಗರಿಕರು ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳೊಂದಿಗೆ ದಾಖಲೆಗಳನ್ನೂ ತೆಗೆದುಕೊಂಡು ನ್ಯಾಯಕ್ಕಾಗಿ ಆಗಮಿಸಿದ್ದರು. ಸರ್ಕಾರದ ಕೆಲಸಗಳು ವಿಳಂಬವಾಗುತ್ತಿದ್ದರೆ ಅಥವಾ ಇತ್ಯರ್ಥವಾಗದೆ ಉಳಿಯುತ್ತಿದ್ದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿಯೇ ಲೋಪದೋಷಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅವುಗಳನ್ನು ಗುರುತಿಸಿ ಸರಿಪಡಿಸಲು ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತಮ ಆಡಳಿತ ಸಾಧ್ಯವಾಗಬೇಕು ಎಂಬುದು ಸರ್ಕಾರದ ಇಚ್ಛಾಶಕ್ತಿಯಾಗಿದೆ ಎಂದರು.ಕಂದಾಯ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಅಧಿಕಾರಿಗಳ ಬಗ್ಗೆ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಬಾರದು. ಏಜೆಂಟರ ಹಾವಳಿ ಸಂಪೂರ್ಣವಾಗಿ ನಿಲ್ಲಿಸಬೇಕು. ತಾತ್ಕಾಲಿಕ ಕಚೇರಿಗಳಲ್ಲೂ ಏಜೆಂಟರ ಪ್ರವೇಶ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಿದರು.
ಯಾರಿಗೂ ಲಂಚ ಕೊಡಬೇಡಿ
2027ರ ಜ. 26ರೊಳಗೆ ಈ ನೂತನ ಪ್ರಜಾಸೌಧ ಕಟ್ಟಡ ಲೋಪಾರ್ಪಣೆ ಆಗಬೇಕು. ಕಟ್ಟಡವು ಉತ್ತಮ ಗುಣಮಟ್ಟದಿಂದ ನಿರ್ಮಾಣವಾಗಬೇಕು. ಗುತ್ತಿಗೆದಾರರು ಯಾರಿಗೂ ಲಂಚ ನೀಡಬಾರದು. ಲಂಚ ಕೊಡುವ ಹಣವನ್ನೇ ಕೆಲಸಕ್ಕೆ ಹಾಕಿ ಉತ್ತಮವಾಗಿ ಕೆಲಸ ಮಾಡಿ. ಯಾರಾದರೂ ಲಂಚ ಕೇಳಿದರೆ, ನಿಮ್ಮ ಬಿಲ್ ತಡೆಹಿಡಿದರೆ ನನಗೆ ರಾತ್ರಿ 12ಕ್ಕಾದರೂ ಕಾಲ್ ಮಾಡಿ ಮಾತನಾಡಿ, ಬಿಲ್ ಕೊಡಿಸುವ ಜವಾಬ್ದಾರಿ ನನ್ನದು ಎಂದು ಗುತ್ತಿಗೆದಾರರನ್ನು ಅಧಿಕಾರಿಗಳನ್ನು ವೇದಿಕೆಗೆ ಕರೆಯಿಸಿ ಸಾರ್ವಜನಿಕರ ಮುಂದೆಯೇ ಸಚಿವ ಎಚ್.ಕೆ. ಪಾಟೀಲ ಖಡಕ್ ಸೂಚನೆ ಕೊಟ್ಟರು.