ಧಾರವಾಡ:
ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಯಾವುದೇ ಅಡಚಣೆಗಳು ಇಲ್ಲದೆ ನಡೆಯದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸಲಾಗುವುದು. ಉಳಿದ ಜಿಲ್ಲೆಯ ಫಲಾನುಭವಿಗಳಿಗೆ ಆಯಾ ಜಿಲ್ಲೆಯಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಮನೆ ವಿತರಿಸಲಾಗುವುದು ಎಂದರು.2169 ಮನೆ:
ಧಾರವಾಡ ಜಿಲ್ಲೆಗೆ ಒಟ್ಟು 2169 ಮನೆ ಮಂಜೂರಾಗಿದ್ದು ಸ್ಲಂಗಳಲ್ಲಿ 1,137 ಕಚ್ಚಾ ಮನೆಯನ್ನು ಪಕ್ಕಾ ಮನೆಗಳನ್ನಾಗಿ ಪುನರ್ ನಿರ್ಮಿಸಲಾಗಿದೆ. ಒಟ್ಟು 1,032 ಮನೆಗಳಿರುವ ವಸತಿ ಸಮುಚ್ಚಯ ನಿರ್ಮಿಸಲಾಗಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ರಾಜ್ಯ ಸಚಿವ ಸಂಪುಟದ ಅನೇಕ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸಿಲಿದ್ದಾರೆ ಎಂದರು.ವಸತಿ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಒಟ್ಟು 1.80 ಲಕ್ಷ ಮನೆ ಮಂಜೂರಾಗಿದ್ದು 1.29 ಲಕ್ಷ ಮನೆ ನಿರ್ಮಾಣ ಪ್ರಾರಂಭವಾಗಿದೆ. 86 ಸಾವಿರ ಮನೆ ನಿರ್ಮಾಣ ಕಾರ್ಯವು ಈಗಾಗಲೇ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ವಿಪ ಸರ್ಕಾರದ ಮುಖ್ಯ ಸಚೇತಕ ಸಲಿಂ ಅಹ್ಮದ್ ಮಾತನಾಡಿ, ಬೃಹತ್ ಕಾರ್ಯಕ್ರಮ ಇದಾಗಿದ್ದು ಸಾರಿಗೆ ಹಾಗೂ ಸಂಚಾರಿ ವ್ಯವಸ್ಥೆ ಸರಿಯಾಗಿ ಆಗಬೇಕು. ಅಧಿಕಾರಿಗಳು ಆಯಾ ಜಿಲ್ಲೆ ಹಾಗೂ ತಾಲೂಕುಗಳ ನೋಡಲ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಸರಿಯಾಗಿ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು.ಶಾಸಕ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ ಮಾತನಾಡಿ, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕೆಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸರ್ಕಾರದ ಸಾಧನೆಯ ಪ್ರತೀಕವಾಗಿರುವ ಈ ಕಾರ್ಯಕ್ರಮವು ಜನರಲ್ಲಿ ಅಭಿವೃದ್ಧಿ ಹಾಗೂ ವಸತಿ ಭರವಸೆ ಹೆಚ್ಚಿಸಿದೆ ಎಂದರು.ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸ್ಪಿ ಗುಂಜನ್ ಆರ್ಯ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಉಪಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದರು. 10 ಸಮಿತಿ ರಚನೆ
ಕಾರ್ಯಕ್ರಮ ಯಶಸ್ವಿಯಾಗಿ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. 10ಕ್ಕೂ ಹೆಚ್ಚು ಸಮಿತಿ ರಚಿಸಿ ಕರ್ತ್ಯವ್ಯ ಹಂಚಿಕೆ ಮಾಡಲಾಗಿದೆ. ಈಗಾಗಲೇ ಅಧಿಕಾರಿಗಳು ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಸಿದ್ಧತೆ ಹಾಗೂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಭಾರ ಜಿಲ್ಲಾಧಿಕಾರಿ ಜಿಪಂ ಸಿಇಒ ಭುವನೇಶ ಪಾಟೀಲ ತಿಳಿಸಿದರು.