ಗದಗ: ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವುದು ಸರ್ಕಾರದ ಗುರಿಯಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಎ.ಸಿ. ನ್ಯಾಯಾಲಯಗಳಲ್ಲಿ 73624 ಅವಧಿ ಮೀರಿದ ಪ್ರಕರಣಗಳಿದ್ದರೆ, ಈಗ ಅವು 11605ಕ್ಕೆ ಇಳಿದಿವೆ. ಐದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇದ್ದ 32782 ಪ್ರಕರಣಗಳಲ್ಲಿ ಕೇವಲ 3155 ಮಾತ್ರ ಉಳಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಇವುಗಳನ್ನು ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಬಗರ್ ಹುಕುಂ ರೈತರ ಜಮೀನುಗಳ ಸರ್ವೇ ಮತ್ತು ಆರ್.ಟಿ.ಸಿ. ಸಮಸ್ಯೆ ನಿವಾರಣೆಗೆ ನನ್ನ ಭೂಮಿ ಅಭಿಯಾನ ಆರಂಭಿಸಲಾಗಿದೆ. 2013-18 ಅವಧಿಯಲ್ಲಿ 5842 ಪೋಡಿ ದುರಸ್ತಿ ಆಗಿದ್ದರೆ, 2018-23ರಲ್ಲಿ 8500 ಪ್ರಕರಣಗಳು ವಿಲೇವಾರಿಯಾಗಿವೆ. ಜನವರಿ 2025ರಿಂದ ಆರಂಭವಾದ ಅಭಿಯಾನದಡಿ ಸದ್ಯ ರಾಜ್ಯಾದ್ಯಂತ 193615 ಪ್ರಕರಣಗಳಲ್ಲಿ ಸರ್ವೇ ಮತ್ತು ಪೋಡಿ ದುರಸ್ತಿ ನಡೆಯುತ್ತಿದೆ. ಅಧಿಕಾರಿಗಳು ಮನೆಬಾಗಿಲಿಗೆ ತೆರಳಿ ಸೇವೆ ನೀಡುತ್ತಿರುವುದು ಸರ್ಕಾರದ ಬದ್ಧತೆಯ ಕಾರ್ಯವಾಗಿದೆ ಎಂದರು.ತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಆರು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ವಿತರಿಸಲಾಗಿತ್ತು ಎಂದ ಅವರು, ರಾಜ್ಯದಲ್ಲಿ ಮೃತರ ಹೆಸರಿನಲ್ಲಿ ಉಳಿದಿದ್ದ 49 ಲಕ್ಷ ಜಮೀನುಗಳನ್ನು ಗುರುತಿಸಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯವೂ ನಡೆಯುತ್ತಿದೆ. ಈಗಾಗಲೇ 12 ಲಕ್ಷ ಮೂಲ ವಾರಸುದಾರರಿಗೆ ಜಮೀನು ಹಸ್ತಾಂತರಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಇಂತಹ 50 ಸಾವಿರ ಪ್ರಕರಣಗಳಿದ್ದು, ಸದ್ಯ 12 ಸಾವಿರ ಮಾತ್ರ ಬಾಕಿ ಉಳಿದಿವೆ. ಗ್ರಾಮ ಲೆಕ್ಕಾಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹಧನವಾಗಿ ₹5 ಕೋಟಿ ನೀಡಲು ಸರ್ಕಾರ ತೀರ್ಮಾನಿಸಿದೆ. ಹಳೆ ದಾಖಲೆಗಳ ನಕಲಿ ತಡೆಗಟ್ಟಲು ಭೂ ಸುರಕ್ಷಾ ಯೋಜನೆಯಡಿ 64 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲೇ ಕಂದಾಯ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಭೂಮಿಯ ಮಾಲೀಕತ್ವಕ್ಕೆ ಗ್ಯಾರಂಟಿ ನೀಡುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳಿಗೆ 5 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದ್ದು, ಅತ್ಯಾಧುನಿಕ ಸರ್ವೇ ಉಪಕರಣಗಳನ್ನು ಕೂಡ ಒದಗಿಸಲಾಗಿದೆ ಎಂದು ತಮ್ಮ ಇಲಾಖೆಯಲ್ಲಿನ ಕಾರ್ಯ ಚಟುವಟಿಕೆ ಕುರಿತು ಸುಧೀರ್ಘವಾಗಿ ಮಾತನಾಡಿದರು.ನಮ್ಮ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿವ ರಾಜ್ಯದ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಿದೆ. ಫೆ. 14ರಂದು ಹಾವೇರಿಯಲ್ಲಿ ಸಮಾವೇಶ ನಡೆಸಿ ಮತ್ತೆ ಅಷ್ಟೇ ಸಂಖ್ಯೆಯ ಹಕ್ಕುಪತ್ರಗಳನ್ನು ವಿತರಿಸಲಾಗುವುದು.ಎಂದೂ ಅವರು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಇದ್ದರು.ಸಿಎಂ ಬದಲಾವಣೆ ಚರ್ಚೆ ಗಿನ್ನಿಸ್ ದಾಖಲೆ ಸೇರಬಹುದು: ಕೃಷ್ಣ ಬೈರೇಗೌಡ
ಗದಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳು ಗಿನ್ನಿಸ್ ದಾಖಲೆ ಸೇರುವಷ್ಟು ಅತಿಯಾಗಿ ನಡೆದಿವೆ. ಇಂತಹ ಚರ್ಚೆಗಳಿಗಿಂತ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿದ್ದರೆ ಅನುಕೂಲವಾಗುತ್ತಿತ್ತು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು. ರಾಜ್ಯ ರಾಜಕಾರಣದ ಪ್ರಚಲಿತ ವಿದ್ಯಮಾನಗಳ ಕುರಿತ ಪ್ರಶ್ನೆಗೆ ನೇರ ಹಾಗೂ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಅವಶ್ಯಕತೆ ಮೀರಿ ಚರ್ಚೆ ನಡೆದಿದೆ. ಈ ಚರ್ಚೆಗೆ ಹೊಸ ಆಯಾಮ ನೀಡುವ ಸಾಮರ್ಥ್ಯ ನನಗಿಲ್ಲ. ಕಾಲಚಕ್ರದ ಪ್ರಕಾರ ಏನೇನು ಆಗಬೇಕೋ ಅದು ಆಗುತ್ತಿರುತ್ತದೆ. ನಾವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೋ ಅಷ್ಟು ದಿನ ಜನರಿಗೆ ಎಷ್ಟು ಒಳ್ಳೆಯದು ಮಾಡಿದ್ದೇವೆ ಎನ್ನುವುದು ಮುಖ್ಯ. ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇನೆ ಎಂದರು.ಅಲ್ಪಸಂಖ್ಯಾತರ ಸಾಲ ಮನ್ನಾ ವಿಚಾರದಲ್ಲಿ ಕೇಳಿಬರುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದ ಸಚಿವರು, ಇದು ರಾಜಕೀಯ ಪ್ರೇರಿತ ಆರೋಪ ಅಷ್ಟೇ. ಕೇವಲ ಅಲ್ಪಸಂಖ್ಯಾತರ ಸಾಲ ಮಾತ್ರ ಮನ್ನಾ ಆಗಿಲ್ಲ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ನಿಗಮಗಳಲ್ಲಿಯೂ ಇದೇ ಮಾದರಿಯ ಯೋಜನೆ ಜಾರಿಯಲ್ಲಿದೆ. ಎಲ್ಲ ನಿಗಮಗಳಲ್ಲಿ ಒನ್ ಟೈಮ್ ಸೆಟ್ಲ್‌ಮೆಂಟ್ ಅವಕಾಶ ನೀಡಲಾಗಿದೆ. ಫಲಾನುಭವಿಗಳು ಸಾಲದ ಅಸಲನ್ನು ಕಟ್ಟಿದರೆ ಬಡ್ಡಿಯನ್ನು ಮನ್ನಾ ಮಾಡುವ ಯೋಜನೆ ಇದಾಗಿದೆ. ಸರ್ಕಾರ ಎಲ್ಲ ಸಮುದಾಯಗಳಿಗೂ ಈ ಸೌಲಭ್ಯ ನೀಡಿದೆ. ಕೆಲವರು ಸತ್ಯವನ್ನು ಪೂರ್ಣವಾಗಿ ತೋರಿಸದೆ, ಒಂದು ಭಾಗವನ್ನು ಮಾತ್ರ ಎತ್ತಿ ಹಿಡಿದು ಸಮಾಜದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಒಡೆದು ಆಳುವ ನೀತಿಯಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳಬಹುದು. ಆದರೆ, ಸಮಾಜವನ್ನು ಒಂದುಗೂಡಿಸಲು ಅಥವಾ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.