ಕುಂದಾಪುರ: ಇಲ್ಲಿನ ಹಳೇ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೇ ನಿಗದಿತ ಕಾಲ ಮಿತಿಯಲ್ಲಿ ಮುಕ್ತಾಯಗೊಳಿಸಲು ಸೂಚನೆ ನೀಡಿದರು.
ಮರವಂತೆ ಹೊರ ಬಂದರು: 85 ಕೋಟಿ ರು. ಮೊತ್ತದ ಮರವಂತೆ ಹೊರ ಬಂದರು ಕಾಮಗಾರಿಯು ಪ್ರಸ್ತುತ ಪ್ರಗತಿಯಲ್ಲಿದ್ದು, ಇಲ್ಲಿ ಬ್ರೇಕ್ ವಾಟರ್ ನಿರ್ಮಿಸಲು ಅಗತ್ಯವಿರುವ ವಿವಿಧ ಗಾತ್ರದ ಗ್ರಾನೈಟ್ ಕಲ್ಲುಗಳನ್ನು ಶೇಖರಿಸಲಾಗುತ್ತಿದೆ. ಟೆಟ್ರಾಪಾಡ್ ಕಾಸ್ಟಿಂಗ್, ಸ್ಲೋಪಿಂಗ್ ಹಾಗೂ ಟೋ ಬರ್ಮ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಕಾಮಗಾರಿಯನ್ನು ವೇಗಗೊಳಿಸಲು ಹಾಗೂ ಪೂರಕ ಕಾಮಗಾರಿಗಳಿಗೆ ಅನುದಾನವನ್ನು ನೀಡುವಂತೆ ಪ್ರಸ್ತಾವನೆಯೊಂದಿಗೆ ಸೂಕ್ತ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಬಜೆಟ್ ಪೂರ್ವ ಪ್ರಸ್ತಾವನೆ: ಬೈಂದೂರು ಕ್ಷೇತ್ರದ ಹೊಸ ಬೇಡಿಕೆಗಳಾದ ಡ್ರೆಜ್ಜಿಂಗ್, ಬ್ರೇಕ್ ವಾಟರ್ ವಿಸ್ತರಣೆ, ಸಮುದ್ರ ಕೊರತೆ ತಡೆ ಗೋಡೆ, ಮೀನುಗಾರಿಕಾ ಕೊಂಡಿ ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಮೀನುಗಾರರು ಬೇಡಿಕೆ ಸಲ್ಲಿಸಿರುವ ಯೋಜನೆಗಳಿಗೆ ಅನುದಾನ ಒದಗಿಸಲು ಈಗಾಗಲೇ ಸಚಿವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಹಾಗಾಗಿ ಇದಕ್ಕೆ ಪೂರಕವಾಗಿ ಇಲಾಖೆ ವತಿಯಿಂದ ಬಜೆಟ್ ಪೂರ್ವ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.ಬಂದರು ಹಾಗೂ ಒಳನಾಡು ಜಲ ಸಾರಿಗೆ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತಿ ಶೋಭಾ ಉಪಸ್ಥಿತರಿದ್ದರು.