ರಾಮನಗರ: ನೆಟ್ಕಲ್ ಯೋಜನೆ ಅಡಿಯಲ್ಲಿ ನಾಗರಿಕರಿಗೆ ಪೂರೈಸುತ್ತಿರುವ ನೀರಿಗೆ ನಿಗದಿಪಡಿಸಿರುವ ಅವೈಜ್ಞಾನಿಕ ದರ ಪರಿಷ್ಕರಿಸುವ ಜೊತೆಗೆ ದೋಷ ಪೂರಿತ ಮೀಟರ್‌ಗಳನ್ನು ತೆರವು ಮಾಡುವಂತೆ ಬಿಜೆಪಿ ರಾಮನಗರ ಮಂಡಲ ಅಧ್ಯಕ್ಷ ಗೌತಮ್ ಗೌಡ ಒತ್ತಾಯಿಸಿದರು.
ಗಾಳಿಗೆ ಮೀಟರ್ ಓಡುತ್ತಿದೆ:
ಈ ಹಿಂದೆ ತಿಂಗಳಿಗೆ 218 ರಿಂದ 240 ರುಪಾಯಿವರೆಗೆ ನಗರದ ನಿವಾಸಿಗಳು ಮಾಸಿಕ ಬಿಲ್ ಪಾವತಿಸುತ್ತಿದ್ದರು. ಆದರೆ, ಅವೈಜ್ಞಾನಿಕ ದರ ಹೆಚ್ಚಳದ ಪರಿಣಾಮ 5 ಸಾವಿರದವರೆಗೂ ಬಿಲ್ ಬಂದಿದೆ. ಕೆಲವು ಮನೆಗಳಲ್ಲಿ ಮೀಟರ್‌ನಲ್ಲಿ ನೀರಿನ ಬದಲು ಬರೀ ಗಾಳಿಗೆ ಮೀಟರ್ ಓಡುತ್ತಿದೆ. ಗಾರ್ಮೆಂಟ್ಸ್, ಫಿಲೇಚರ್ ಕಾರ್ಖಾನೆಯಲ್ಲಿ ದಿನಗೂಲಿ ಮಾಡುವ ಜನರು ಎಲ್ಲಿಂದ ಇಷ್ಟು ದೊಡ್ಡ ಮೊತ್ತ ಹೊಂದಿಸಲು ಸಾಧ್ಯ. ನಾಲ್ಕು ಡ್ರಮ್‌ನಲ್ಲಿ ನೀರು ಶೇಖರಿಸಿಟ್ಟುಕೊಂಡವರಿಗೆ ಒಂದು ಸಾವಿರ ಬಿಲ್ ಬಂದಿದೆ. ಬಡವರ ಹೊಟ್ಟೆ ಮೇಲೆ ಸರ್ಕಾರ ಹೊಡೆಯುವುದನ್ನು ಕೂಡಲೆ ನಿಲ್ಲಿಸಬೇಕು ಎಂದು ಹರಿಹಾಯ್ದರು.ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ನೀರಿನ ಬಿಲ್ ಹೆಚ್ಚಳದಿಂದ ಪರಿತಪಿಸುವ ಸಂದರ್ಭ ಎದುರಾಗಿದೆ. ಬೆಂಗಳೂರಿನಲ್ಲಿ 0-8 ಸಾವಿರ ಲೀಟರ್ ನೀರಿನ ಬಳಕೆಗೆ ಪ್ರತಿ ಸಾವಿರ ಲೀಟರ್‌ಗೆ 8.70 ರು. ಇದೆ. ಆದರೆ ರಾಮನಗರದಲ್ಲಿ 20.80 ರು. ಇದೆ. 8 ರಿಂದ 25 ಸಾವಿರ ಲೀಟರ್ ಸ್ಲಾಬ್‌ನಲ್ಲಿ ಪ್ರತಿ ಸಾವಿರ ಲೀಟರ್‌ಗೆ 14.42 ರು. ಇದೆ. ಆದರೆ ರಾಮನಗರದಲ್ಲಿ 26 ರು. ಇದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಸ್ಲಾಬ್‌ಗಳನ್ನು ಅವೈಜ್ಞಾನಿಕವಾಗಿ ನಿಗದಿ ಮಾಡಲಾಗಿದೆ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ಕಾಲಹರಣ ಮಾಡದೆ, ಗಂಭೀರವಾಗಿ ಪರಿಗಣಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಜನಸಾಮಾನ್ಯರೊಂದಿಗೆ ಬಿಜೆಪಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.
ನಗರದಲ್ಲಿ ವಾಣಿಜ್ಯ ಮತ್ತು ಗೃಹ ಬಳಕೆ ಸೇರಿ ಒಟ್ಟು 18 ಸಾವಿರ ನೀರಿನ ಸಂಪರ್ಕಗಳಲ್ಲಿ 16700 ಮೀಟರ್‌ಗಳನ್ನು ಅಳವಡಿಸಲಾಗಿದೆ. ಪೈಪಿನಲ್ಲಿ ನೀರಿಗೆ ಬದಲು ಗಾಳಿ ಬರುತ್ತಿದೆ ಎಂದು ಕೆಲವರು ಇಂದು ದೂರಿದ್ದಾರೆ. ಕೆಲವೆಡೆ ಅಕ್ರಮವಾಗಿ ನೀರಿನ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ವಾಟರ್ ಮೀಟರ್‌ಗಳ ತೆರವು ಕಾನೂನುಬಾಹಿರವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಬಾಕ್ಸ್ ..............ನೀರಿಗೆ ಸರಾಸರಿ ಬಿಲ್ ನೀಡಲು ಆಗ್ರಹ
ಕಳೆದ ಸೋಮವಾರವಷ್ಟೇ ಜಲಮಂಡಳಿ ಎದುರು ವಾಟರ್ ಮೀಟರ್ ಅಳವಡಿಕೆ, ಅವೈಜ್ಞಾನಿಕ ದರ ನಿಗದಿ ವಿರುದ್ಧ ಪ್ರತಿಭಟನೆ ನಡೆಸಿದ್ದ ಸಾರ್ವಜನಿಕರು. ವಾಟರ್ ಮೀಟರ್‌ಗಳನ್ನ ತೆರವುಗೊಳಿಸುವಂತೆ ಪಟ್ಟುಹಿಡಿದು ಧರಣಿ ನಡೆಸಿದರು. ನೀರಿನ ದರ ಮತ್ತು ಬಳಕೆ ಸ್ಲಾಬ್‌ಗಳನ್ನು ಬಡವರಿಗೆ ಅನುಕೂಲವಾಗುವಂತೆ ಮಾಡಿಕೊಡಿ. ಅಲ್ಲಿಯವರೆಗೆ ನಾವು ಬಿಲ್ ಕಟ್ಟುವುದಿಲ್ಲ. ನಮಗೆ ಮೀಟರ್ ಸಹವಾಸವೇ ಬೇಡ ಎಂದು ಪ್ರತಿಭಟನಾಕಾರರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರದ ಜಲಮಂಡಳಿ ಕಚೇರಿ ಮಹಿಳೆಯರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.