ಸಂವಿಧಾನ ಗೌರವ ದಿವಸ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ । ಮೋದಿ ಸಂವಿಧಾನಕ್ಕೆ ಸಲ್ಲಬೇಕಾದ ಗೌರವ ಮರುಸ್ಥಾಪಿಸಿದ್ದಾರೆ
ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದುಕೊಂಡು ಗೌರವದ ಮಾತುಗಳನ್ನಾಡುವುದಕ್ಕಿಂತ, ಸಂವಿಧಾನದಲ್ಲಿರುವ ಆಶಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದೇ ನಿಜವಾದ ಸಂವಿಧಾನ ಗೌರವ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಬಿಜೆಪಿ ಪಕ್ಷದಿಂದ ಸಂವಿಧಾನ ಗೌರವ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ೨೦೧೫ಕ್ಕೂ ಮೊದಲು ನವೆಂಬರ್ ೨೬ರಂದು ಕಾನೂನು ದಿನ (ಲಾ ಡೇ) ಆಚರಿಸಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಈ ದಿನವನ್ನು ಸಂವಿಧಾನ ಗೌರವ ದಿವಸವಾಗಿ ಆಚರಿಸುವ ಪರಂಪರೆ ಪುನರಾರಂಭಿಸುವ ಮೂಲಕ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಸಲ್ಲಬೇಕಾದ ಗೌರವ ಮರುಸ್ಥಾಪಿಸಿದ್ದಾರೆ ಎಂದು ಅಭಿನಂದಿಸಿದರು.ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಆಡಳಿತದಲ್ಲಿ ಸಂವಿಧಾನ ಸ್ವಾರ್ಥಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಹಾಗೂ ಅಂಬೇಡ್ಕರ್ರಿಗೆ ಸೂಕ್ತ ಗೌರವ ನೀಡದೆ ಅಪಮಾನಿಸಲಾಗಿದೆ. ೧೯೫೨ರ ಸಾರ್ವತ್ರಿಕ ಚುನಾವಣೆ ಮತ್ತು ೧೯೫೪ರ ಉಪಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸೋಲಿಸಿದವರು ಯಾರು ಎಂಬುದಕ್ಕೆ ಕಾಂಗ್ರೆಸ್ ಸಾರ್ವಜನಿಕವಾಗಿ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ಭಾವಚಿತ್ರ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಅನಾವರಣಗೊಳಿಸಿದ್ದು ೧೯೯೦ರಲ್ಲಿ, ಅವರ ನಿಧನದ ೩೪ ವರ್ಷಗಳ ಬಳಿಕ. ಅದೇ ರೀತಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನೂ ೧೯೯೦ರಲ್ಲಿಯೇ ನೀಡಲಾಯಿತು. ಅಂಬೇಡ್ಕರ್ರನ್ನು ಚುನಾವಣೆಯಲ್ಲಿ ಸೋಲಿಸಿದವರಿಗೆ ಪ್ರಶಸ್ತಿ ನೀಡಿದ ಕಾಂಗ್ರೆಸ್, ಅವರಿಗೆ ಏಕೆ ಭಾರತ ರತ್ನ ನೀಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಅಂಬೇಡ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೂ ಕೋಡ್ ಬಿಲ್ ಅನುಷ್ಠಾನಕ್ಕೆ ವಿರೋಧ ಮತ್ತು ಜಮ್ಮು-ಕಾಶ್ಮೀರಕ್ಕೆ ೩೭೦ನೇ ವಿಧಿ ಜಾರಿಗೊಳಿಸುವ ವಿಚಾರದಲ್ಲಿ ಹೊಂದಿದ್ದ ಭಿನ್ನಾಭಿಪ್ರಾಯಗಳು ಪ್ರಮುಖ ಕಾರಣಗಳಾಗಿದ್ದವು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವ್ಯವಸ್ಥೆ ಅವರು ವಿರೋಧಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ೩೭೦ನೇ ವಿಧಿ ರದ್ದುಗೊಳಿಸುವ ಮೂಲಕ ಅಂಬೇಡ್ಕರ್ರ ಆಶಯಕ್ಕೆ ಅನುಗುಣವಾಗಿ ದೇಶದ ಏಕತೆ ಮತ್ತು ಸಮಗ್ರತೆ ಬಲಪಡಿಸಿದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಶೇ.೧೫ರಿಂದ ೧೭ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಶೇ.೩ರಿಂದ ೭ಕ್ಕೆ ಹೆಚ್ಚಿಸಲಾಗಿತ್ತು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಧರ್ಮಾಧಾರಿತ ಮೀಸಲಾತಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಮಾಜಿಕ ನ್ಯಾಯದ ಮೀಸಲಾತಿಗೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಿಸಿದೆ ಎಂದು ಆರೋಪಿಸಿದರು.
ಸಂವಿಧಾನಕ್ಕೆ ನಿಜವಾದ ಅಪಾಯ ದೇಶದ ಏಕತೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆ ದುರ್ಬಲಗೊಳಿಸುವ ಹಿಂಸಾತ್ಮಕ ಸಿದ್ಧಾಂತಗಳಿಂದ ಎದುರಾಗುತ್ತದೆ. ಬ್ಯಾಲೆಟ್ಗಿಂತ ಬುಲೆಟ್ ಮೇಲೆ ನಂಬಿಕೆ ಇಟ್ಟು ವ್ಯವಸ್ಥೆ ಬದಲಾಯಿಸಲು ಬಯಸುವ ನಕ್ಸಲರು ಹಾಗೂ ಸಂವಿಧಾನಕ್ಕಿಂತ ಧಾರ್ಮಿಕ ಕಾನೂನುಗಳೇ ಶ್ರೇಷ್ಠ ಎಂದು ಪ್ರತಿಪಾದಿಸುವ ಮನೋಭಾವಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದರು.