ಅಮೃತ ಯೋಜನೆಯಲ್ಲಿ ಆರು ಕೆರೆಗಳಿಗೆ ಕಾಯಕಲ್ಪ!

KannadaprabhaNewsNetwork |  
Published : Sep 28, 2026, 01:45 AM IST
ಶೀಘ್ರವೇ ಅಮೃತ ಯೋಜನೆಯಲ್ಲಿ ಕಾಲಕಲ್ಪಗೊಳ್ಳಲಿರುವ ಉಣಕಲ್ಲಿನ ಚನ್ನಪ್ಪನ ಕೆರೆ. | Kannada Prabha

ಸಾರಾಂಶ

ಜಲಮೂಲಗಳ ಸಂರಕ್ಷಣೆಯ ಜತೆಗೆ ಹಸಿರುಕರಣ, ವಾಯುವಿಹಾರ ಮಾರ್ಗ ಹಾಗೂ ಸಾರ್ವಜನಿಕ ಬಳಕೆಯ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ

ಕೊಳಚೆ ನೀರು, ಕಸದ ರಾಶಿ, ದುರ್ವಾಸನೆ ಹಾಗೂ ನಿರ್ಲಕ್ಷ್ಯದಿಂದ ಅಸ್ವಸ್ಥಗೊಂಡಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರದ 6 ಕೆರೆಗಳಿಗೆ ಇದೀಗ ಕಾಯಕಲ್ಪದ ನಿರೀಕ್ಷೆ ಮೂಡಿದೆ. ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ₹21.95 ಕೋಟಿ ವೆಚ್ಚದಲ್ಲಿ ಕೆರೆಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. ಜಲಮೂಲಗಳ ಸಂರಕ್ಷಣೆಯ ಜತೆಗೆ ಹಸಿರುಕರಣ, ವಾಯುವಿಹಾರ ಮಾರ್ಗ ಹಾಗೂ ಸಾರ್ವಜನಿಕ ಬಳಕೆಯ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ಧಾರವಾಡದ 8ನೇ ವಾರ್ಡಿನಲ್ಲಿರುವ ಹಿರೇಕೆರೆ (ಕೋಳಿಕೇರಿ), ನವನಗರದ 24ನೇ ವಾರ್ಡಿನ ನವಲೂರ ಕೆರೆ, ಹುಬ್ಬಳ್ಳಿಯ 40ನೇ ವಾರ್ಡಿನ ಸಂತೋಷನಗರ ಕೆರೆ, 36ನೇ ವಾರ್ಡಿನಲ್ಲಿರುವ ಚನ್ನಪ್ಪನ ಕೆರೆ, 24ನೇ ವಾರ್ಡಿನಲ್ಲಿರುವ ಗೋಕಲ ಗ್ರಾಮದ ಕೆರೆ, 82ನೇ ವಾರ್ಡಿನಲ್ಲಿರುವ ಬಿಡ್ನಾಳ ಕೆರೆಗಳು ಯೋಜನೆಯ ವ್ಯಾಪ್ತಿಯಲ್ಲಿವೆ. ಕೆರೆಗಳಿಗೆ ಸೇರುವ ಕೊಳಚೆ ನೀರು ತಡೆ, ಕಟ್ಟೆ ಬಲಪಡಿಸುವುದು, ಜೈವಿಕ ಬೇಲಿ, ಹಸಿರುಕರಣ ಹಾಗೂ ವಾಯುವಿಹಾರ ಮಾರ್ಗ ನಿರ್ಮಾಣ ಪ್ರಮುಖ ಕಾಮಗಾರಿಗಳಾಗಿವೆ.

ಕೋಳಿಕೇರಿಗೆ ಗರಿಷ್ಠ ಅನುದಾನ: ಧಾರವಾಡದ ಕೋಳಿಕೆರೆ ಅಭಿವೃದ್ಧಿಗೆ ₹6.60 ಕೋಟಿ ಅತೀ ಗರಿಷ್ಠ ಹಾಗೂ ಬಿಡ್ನಾಳ ಕೆರೆಗೆ ಕಡಿಮೆ ಅಂದರೆ ₹2.70 ಕೋಟಿ ಮೀಸಲಿಡಲಾಗಿದೆ.

ಕಸದ ತಾಣವಾದ ಸಂತೋಷನಗರ: ಹುಬ್ಬಳ್ಳಿಯ ವಾರ್ಡ್‌ 40ರಲ್ಲಿರುವ ಸಂತೋಷನಗರ ಕೆರೆ ಸುಮಾರು 4 ಎಕರೆ ವಿಸ್ತೀರ್ಣ ಹೊಂದಿದೆ. ಹಿಂದೆ ಪ್ರಮುಖ ಜಲಮೂಲವಾಗಿದ್ದ ಕೆರೆ ಈಗ ಕೊಳಚೆ ನೀರು, ಕಸ ಹಾಗೂ ದುರ್ವಾಸನೆಯಿಂದ ಬಳಲುತ್ತಿದೆ. ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳದಿರುವುದನ್ನೇ ನೆಪ ಮಾಡಿಕೊಂಡು ರಾತ್ರಿ ವೇಳೆ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ರಾತ್ರಿ ವೇಳೆ ಕೆರೆ ಸುತ್ತಮುತ್ತ ನಿರಂತರವಾಗಿ ಕಸ ಸುರಿಯಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಆರಂಭಿಸಿ, ನಿರಂತರ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಗಿರೀಶ್ ಕಮ್ಮಾರ ಹಾಗೂ ಗಿರೀಶ ಒತ್ತಾಯಿಸಿದ್ದಾರೆ.

ಚನ್ನಪ್ಪನ ಕೆರೆಗೂ ಮರುಜೀವ: ಉಣಕಲ್ಲಿನ ಚನ್ನಪ್ಪನ ಕೆರೆ 4.9 ಎಕರೆ ವಿಸ್ತೀರ್ಣ ಹೊಂದಿದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಹಿಂದೆ ಸ್ಥಳೀಯರ ಬಳಕೆಯಲ್ಲಿದ್ದ ಕೆರೆಗೆ ಈಗ ಕೊಳಚೆ ನೀರು ಸೇರುತ್ತಿದ್ದು, ಸುತ್ತಮುತ್ತ ತ್ಯಾಜ್ಯ ಸುರಿಯಲಾಗುತ್ತಿದೆ. ಮೊದಲು ಕೆರೆಗೆ ಹರಿದುಬರುವ ಕೊಳಚೆ ನೀರನ್ನು ತಡೆಯಲಾಗುವುದು. ಬಳಿಕ ಕಟ್ಟೆ ಬಲಪಡಿಸುವುದು, ಜೈವಿಕ ಬೇಲಿ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಂಡು ವಾಯುವಿಹಾರ ಮಾರ್ಗ ಹಾಗೂ ಸಾರ್ವಜನಿಕ ಸೌಲಭ್ಯ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಹು-ಧಾ ಅವಳಿ ನಗರದ ಹಲವು ಕೆರೆಗಳಿಗೆ ವರ್ಷಗಳಿಂದ ಕೊಳಚೆ ನೀರು ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ಹದಗೆಟ್ಟಿದೆ. ಕೆಲವು ಕೆರೆಗಳಲ್ಲಿ ಜೈವಿಕ ಆಮ್ಲಜನಕ ಬೇಡಿಕೆ (ಬಿಒಡಿ), ರಾಸಾಯನಿಕ ಆಮ್ಲಜನಕ ಬೇಡಿಕೆ (ಸಿಒಡಿ), ಕೋಲಿಫಾರ್ಮ್‌ ಬ್ಯಾಕ್ಟೀರಿಯಾ ಸೇರಿದಂತೆ ಮಾಲಿನ್ಯದ ಸೂಚಕಗಳು ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.

ಈಗ ಅಮೃತ ಯೋಜನೆಯಡಿ ಕೈಗೊಳ್ಳಲಿರುವ ಕಾಮಗಾರಿ ಸಮರ್ಪಕವಾಗಿ ಜಾರಿಯಾದರೆ, ಕಸದ ತಾಣಗಳಂತಾಗಿರುವ ಕೆರೆಗಳು ಮತ್ತೆ ಜಲಮೂಲಗಳಾಗಿ, ಸುತ್ತಲಿನ ಪ್ರದೇಶಗಳು ಹಸಿರು ವಾಯುವಿಹಾರ ತಾಣಗಳಾಗಿ ರೂಪುಗೊಳ್ಳುವ ನಿರೀಕ್ಷೆ ಮೂಡಿದೆ. ನೂರಾರು ನಿವಾಸಿಗಳಿಗೆ ಬೆಳಗ್ಗೆ- ಸಂಜೆ ವಾಯುವಿಹಾರಕ್ಕೆ ಸ್ವಚ್ಛ, ಸುರಕ್ಷಿತ ಸಾರ್ವಜನಿಕ ಸ್ಥಳವೂ ಸಿಗಲಿದೆ.

ಈಗಾಗಲೇ ಕೆರೆಗಳ ಅಭಿವೃದ್ಧಿಗೆ ಟೆಂಡರ್ ಆಹ್ವಾನಿಸಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಪಾಲಿಕೆ ಉಪಆಯುಕ್ತ ವಿಜಯಕುಮಾರ ತಿಳಿಸಿದ್ದಾರೆ.

ಕೆರೆಗಳು ಅನುದಾನ

ಧಾರವಾಡದ ಕೋಳಿಕೆರೆ,₹6.60 ಕೋಟಿ

ಧಾರವಾಡ ನವನಗರ ಕೆರೆ₹3.85 ಕೋಟಿ

ಹುಬ್ಬಳ್ಳಿ ಸಂತೋಷ ನಗರ ಕೆರೆ ₹3.30 ಕೋಟಿ

ಉಣಕಲ್ಲ ಚನ್ನಪ್ಪನ ಕೆರೆ ₹2.75 ಕೋಟಿ

ಗೋಕಲ ಗ್ರಾಮದ ಕೆರೆ ₹2.75 ಕೋಟಿ

ಹುಬ್ಬಳ್ಳಿ ಬಿಡ್ನಾಳ ಕೆರೆ ₹2.75 ಕೋಟಿ

ಒಟ್ಟು: ₹22 ಕೋಟಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ್ತೂರಿರಂಗನ್ ವರದಿಯ ಸಮಗ್ರ ಚರ್ಚೆಯಾಗಲಿ: ಮಾರುತಿ ಗುರೂಜಿ
ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ