ಶೃಂಗೇರಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಓದಿದ ಸರ್ಕಾರಿ ಶಾಲೆ ಪುನಃಶ್ಚೇತನ

KannadaprabhaNewsNetwork |  
Published : Jul 09, 2026, 03:00 AM IST
ೇ್ | Kannada Prabha

ಸಾರಾಂಶ

ಶೃಂಗೇರಿತಾಲೂಕಿನಲ್ಲಿ ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಇಂದೋ ನಾಳೆಯೋ ಮುಚ್ಚುವ ಸ್ಥಿತಿಯಲ್ಲಿದ್ದರಿಂದ ಈ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶೃಂಗೇರಿ ಮಠ ಇದನ್ನು ದತ್ತು ಪಡೆದಿದ್ದು ಶ್ರೀ ಶಾರದಾ ಪೀಠದ 34 ನೇ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಶ್ರೀ ವ್ಯಾಸಂಗ ಮಾಡಿದ್ದ ಈ ಶಾಲೆಯ ಕಾಯಕಲ್ಪಕ್ಕೆ ಮಠ ಮುಂದಾಗಿದೆ.

ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆ ದತ್ತುಪಡೆದ ಶ್ರೀಮಠ.

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಲ್ಲಿ ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಇಂದೋ ನಾಳೆಯೋ ಮುಚ್ಚುವ ಸ್ಥಿತಿಯಲ್ಲಿದ್ದರಿಂದ ಈ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶೃಂಗೇರಿ ಮಠ ಇದನ್ನು ದತ್ತು ಪಡೆದಿದ್ದು ಶ್ರೀ ಶಾರದಾ ಪೀಠದ 34 ನೇ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಶ್ರೀ ವ್ಯಾಸಂಗ ಮಾಡಿದ್ದ ಈ ಶಾಲೆಯ ಕಾಯಕಲ್ಪಕ್ಕೆ ಮಠ ಮುಂದಾಗಿದೆ.

ಮಲ್ಲಿಕಾರ್ಜುನ ಬೀದಿಯ ಈ ಸರ್ಕಾರಿ ಪ್ರಾಥಮಿಕ ಶಾಲೆ ತಾಲೂಕಿನ ಪ್ರಥಮ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಕಳೆದ ವರ್ಷ ಕೇವಲ 14 ವಿದ್ಯಾರ್ಥಿಗಳು ಮಾತ್ರ ದಾಗಲಾಗಿದ್ದರು. ಸರಿಸುಮಾರು 170 ವರ್ಷಗಳ ಇತಿಹಾಸದ ಈ ಶಾಲೆಗೆ ಪುನಶ್ಚೇತನ ಅನಿವಾರ್ಯ. ಬ್ರಿಟೀಷರ ಅವಧಿಯಲ್ಲಿ ಆರಂಭವಾಗಿ 1857ರಲ್ಲಿ ಈ ಶಾಲೆ ಆಂಗ್ಲೋ-ವೆರ್ನಾಕ್ಯುಲರ್ ಶಾಲೆಯಾಗಿ ಅಸ್ತಿತ್ವ ಪಡೆದುಕೊಂಡಿತು. ಶೃಂಗೇರಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ನೀಡಲಾರಂಬಿಸಿತು. ನಂತರದ ದಿನಗಳಲ್ಲಿ ಇದು ಸರ್ಕಾರಿ ಪ್ರಾಥಮಿಕ ಬಾಲಕರ ಶಾಲೆಯಾಗಿ ಪರಿವರ್ತಿತವಾಗಿತ್ತು.

ಈ ಶಾಲೆಯಲ್ಲಿ 1980 ರಿಂದ 1990ರ ದಶಕದಲ್ಲಿ ಸುಮಾರು 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದರು. ಶಿಕ್ಷಕರು ಸೇರಿದಂತೆ ವಿವಿಧ ಮೂಲ ಸೌಲಭ್ಯಗಳಿದ್ದರೂ ಆಂಗ್ಲ ಮಾದ್ಯಮ, ಖಾಸಗಿ ಶಾಲೆಗಳ ಸ್ಪರ್ಧೆಯಿಂದ ಪಟ್ಟಣದ ನಡುವಿನಲ್ಲಿದ್ದರೂ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕ್ಷೀಣಿಸುತ್ತಾ ಮುಚ್ಚುವ ಹಂತ ತಲುಪಿತ್ತು. ಶೃಂಗೇರಿ ಮಠ ಶಾಲೆ ದತ್ತುಪಡೆದು ಎಲ್ಲಾ ಸೌಲಭ್ಯ ಕಲ್ಪಿಸಿಕೊಡಲಿದೆ. ಕೇವಲ 14 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 42 ದಾಟಿದೆ.

ಶಾಲೆ ಸುತ್ತ ಕಾಂಪೌಂಡ್, ಸುಣ್ಣ ಬಣ್ಣ, ಕಿಟಕಿ, ಬಾಗಿಲುಗಳನ್ನು ದುರಸ್ತಿಪಡಿಸಿ ಹೊಸರಂಗು ನೀಡಲಾಗಿದೆ. ಶಾಲೆ ಸುತ್ತ ಮುತ್ತಲ ವಾತಾವರಣ ಸ್ವಚ್ಛಗೊಳಿಸಿ ಆಧುನೀಕರಣಗೊಳಿಸಲಾಗುತ್ತಿದೆ. ಸ್ಮಾರ್ಟ್ ಕ್ಲಾಸ್, ಸ್ಪೋಕನ್ ಇಂಗ್ಲೀಷ್, ಕಂಪ್ಯೂಟರ್ ಶಿಕ್ಷಣ ಆರಂಬಿಸಲಾಗಿದೆ. ಉತ್ತಮ ಗ್ರಂಥಾಲಯ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಹೋಗಲು ವಾಹನ ಸೌಲಭ್ಯ ಕಲ್ಪಿಸಲಾಗಿದೆ.ಶಾಲೆಯಲ್ಲಿ ಅಗತ್ಯ ಶಿಕ್ಷಕರು,ಕ್ರೀಡಾಂಗಣ,ರಂಗಮಂದಿರ ಸಹಿತ ಅಗತ್ಯ ಮೂಲ ಸೌಕರ್ಯ ಗಳಿದ್ದು,ಈ ಶಾಲೆ ಮತ್ತೆ ಈಗ ಹೊಸ ಮರೆಗು ಪಡೆದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ ಕೆ ಜಿ,ಯು ಕೆ ಜಿ ತರಗತಿ ಆರಂಭಗೊಳ್ಳಲಿದೆ.

--ಬಾಕ್ಸ್ ---

ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ 34 ನೇ ಪೀಠಾಧಿಪತಿಯಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿ ಶೃಂಗೇರಿಯಲ್ಲಿ 1892 ಅಕ್ಟೋಬರ್‌ 10ರಂದು ಗೋಪಾಲ ಶಾಸ್ತ್ರಿ ಮತ್ತು ಲಕ್ಷಮ್ಮ ದಂಪತಿ ಪುತ್ರರಾಗಿ ಜನಿಸಿದರು. ಇವರ ಮೂಲ ಹೆಸರು ನರಸಿಂಹ. ಗೋಪಾಲ ಶಾಸ್ತ್ರಿಗಳು ಪುತ್ರ ನರಸಿಂಹನನ್ನು ಪಟ್ಟಣದ ಮಲ್ಲಿಕಾರ್ಜುನ ಬೀದಿ ಸರ್ಕಾರಿ ಪ್ರಾಥಮಿಕ ಬಾಲಕರ ಶಾಲೆಗೆ ಸೇರಿಸಿದ್ದರು.

1898 ರಿಂದ 1904 ರವರೆಗೆ ವ್ಯಾಸಂಗ ಮಾಡಿದ ನರಸಿಂಹ ಪ್ರತೀ ವರ್ಷ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಯಾಗುತ್ತಿದ್ದರು. ಶಾಲೆಯಲ್ಲಿ ಎಲ್ಲಾ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆಂಗ್ಲ ಮತ್ತು ಕನ್ನಡ ಶಿಕ್ಷಣ ಪಡೆದರೆ, ಮನೆಯಲ್ಲಿ ಸಂಸ್ಕೃತ ಭಾಷೆ ಅಭ್ಯಾಸ ನಡೆಯುತ್ತಿತ್ತು. 7 ನೇ ತರಗತಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. 8 ನೇ ವಯಸ್ಸಿ ನಲ್ಲಿ ಉಪನಯನ ನೆರವೇರಿತು. ತಂದೆ ತಾಯಿ ಜಗದ್ಗುರುಗಳ ದರ್ಶನಕ್ಕೆ ಕರೆದುಕೊಂಡುಹೋದಾಗ ಜಗದ್ಗುರುಗಳು ಬಾಲಕ ನರಸಿಂಹನಿಗೆ ವೈದಿಕ ಶಿಕ್ಷಣ ನೀಡುವಂತೆ ನೀಡಿದ ಆಶೀರ್ವಾದದಂತೆ ಶ್ರೀಮಠದ ಸದ್ವಿದ್ಯಾ ಸಂಜೀವಿನಿ ಪಾಠ ಶಾಲೆಗೆ ಸೇರ್ಪಡೆಗೊಂಡು ವ್ಯಾಸಂಗಗ ಮುಂದುವರಿಸಿದರು. ಏ.7ರಂದು 1912 ರಂದು ಸನ್ಯಾಸ ಸ್ವೀಕರಿಸಿ ಜಗದ್ಗುರುಗಳ ಅಪ್ಪಣೆಯಂತೆ ಶ್ರೀ ಚಂದ್ರಶೇಖರ ಭಾರತೀ ಎಂಬ ಯೋಗಪಟ್ಟ ನೀಡಲಾಯಿತು. ಶೃಂಗೇರಿ ಪೀಠದ 34 ನೇ ಪೀಠಾಧಿಪತಿ ಯಾಗಿ ಸಿಂಹಾಸನರೋಹಣ ಮಾಡಿದರು.1954 ರಲ್ಲಿ ಇಹಲೋಕ ತ್ಯಜಿಸಿದರು.

26 ಶ್ರೀ ಚಿತ್ರ 1-ಶೃಂಗೇರಿ ಸರ್ಕಾರಿ ಪ್ರಾಥಮಿಕ ಬಾಲಕರ ಶಾಲೆ.

26 ಶ್ರೀ ಚಿತ್ರ2-ಶೃಂಗೇರಿ ಸರ್ಕಾರಿ ಶಾಲೆ ವಾಹನ ಸೌಲಭ್ಯ ಹೊಂದಿರುವುದು.

26 ಶ್ರೀ ಚಿತ್ರ 3-ಶೃಂಗೇರಿ ಪೀಠದ 34 ನೇ ಜಗದ್ದುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ 8ನೇ ದಿನ 42 ಕಿ.ಮೀ. ಫುಟ್ಪಾತ್‌ ಒತ್ತುವರಿ ತೆರವು
ಕಡಿಮೆ ಭೂಸ್ವಾಧೀನ ಪ್ರದೇಶದಲ್ಲಿ ಎರಡನೇ ವಿಮಾನ ನಿಲ್ದಾಣ: ಡಿಕೆಶಿ