ಬಣ್ಣದಮಠದಲ್ಲಿ ಶ್ರೀ ಗುರುಸಿದ್ಧೇಶ್ವರ ಸಾಂಸ್ಕೃತಿಕ ಭವನ ಉದ್ಘಾಟನೆ
ಸಾಧಕ ತ್ಯಾಗ ಮಾಡಿದಾಗ ಪ್ರತಿಫಲ ದೊರೆಯುತ್ತದೆ. ರಾಜ್ಯದ ಮಠಗಳ ಆಸ್ತಿಯ ಒಂದಿಂಚು ಜಾಗವೂ ಪರರ ಪಾಲಿಗೆ ಒಳಗಾಗಬಾರದು. ಪ್ರಾಮಾಣಿಕ, ನಿಷ್ಠಾವಂತ, ಬದ್ಧತೆಯ ಶಿಷ್ಯ ಬಣ್ಣದ ಮಠಕ್ಕೆ ದೊರೆತಿರುವುದರಿಂದ ಭವ್ಯ ಸಾಂಸ್ಕೃತಿಕ ಭವನ ನಿರ್ಮಾಣ ಸಾಧ್ಯವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ನುಡಿದರು.
ಸೋಮವಾರ ನಗರದ ಬಣ್ಣದಮಠದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಗುರುಸಿದ್ಧೇಶ್ವರ ಸಾಂಸ್ಕೃತಿಕ ಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು.ಕರ್ನಾಟಕದಲ್ಲಿರುವ ಹಲವಾರು ಮಠದ ಆಸ್ತಿಗಳು ಕಳೆದು ಹೋಗಿದೆ. ಮಠದ ಒಂದಿಂಚೂ ಜಾಗ ಬೇರೆಯವರ ಪಾಲಾಗಬಾರದು. ಆದರೆ ಶಿಷ್ಯರು ದಾನ ನೀಡಿದ ಆಸ್ತಿಗಳು ಶಿಷ್ಯರ ಒಳಗಡೆ ಇರುತ್ತದೆ. ಭಕ್ತರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಆಸ್ತಿ ಪಡೆದುಕೊಳ್ಳಬೇಕಿದೆ. ಬಣ್ಣದಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ ಮಠಕ್ಕೆ ಆಸ್ತಿಯ ಸದೃಢತೆ ತಂದು ಕೊಡುವ ಕೆಲಸ ಮಾಡಿದ್ದಾರೆ ಎಂದರು.
ದಾಸೋಹ ಭವನ ಉದ್ಘಾಟಿಸಿ, ಶಿರಹಟ್ಟಿಯ(ಬಾಲೆಹೊಸೂರ) ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಬಣ್ಣದಮಠದಲ್ಲಿ ಇಂದ್ರಭವನ ನಿರ್ಮಾಣವಾಗಿದೆ. ಸುಂದರ ಕಟ್ಟಡದ ಭೂಮಿಪೂಜೆಯಲ್ಲಿ ಆಡಂಭರವಿಲ್ಲ. ಉದ್ಘಾಟನೆಯಲ್ಲಿ ಅಂಹಕಾರವಿಲ್ಲ. ಅಷ್ಟು ಸುಂದರವಾಗಿ ಕಾರ್ಯಕ್ರಮ ನಡೆದಿದೆ. ಶಿವಲಿಂಗ ಸ್ವಾಮೀಜಿ ತ್ಯಾಗದಿಂದ ವ್ಯವಸ್ಥಾಪಕರ ತಾಳ್ಮೆಯ ಕಾರಣದಿಂದ ವೈಭವದ ಕಾರ್ಯಕ್ರಮ ರೂಪುಗೊಂಡಿದೆ. ಮಠದ ಪರಾಧೀನವಾದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡ ಶ್ರೇಯಸ್ಸು ವ್ಯವಸ್ಥಾಪಕ ಎಸ್.ಬಿ.ಹಿರೇಮಠ ಅವರಿಗೆ ಲಭಿಸುತ್ತದೆ. ಬಹುಮುಖ ವ್ಯಕ್ತಿತ್ವದ, ಪರಿಪೂರ್ಣ ವ್ಯಕ್ತಿ. ಕಟ್ಟಡದ ಗಂಟನ್ನು ಮೂರುಸಾವಿರ ಮಠದ ಶ್ರೀಗಳು ಬಿಚ್ಚಿದ್ದಾರೆ. ಇದರ ಉಪಯೋಗವನ್ನು ಜನರು ಬಳಸಿಕೊಳ್ಳಬೇಕು ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಕೆ.ಎಸ್. ಶೆಟ್ಟರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಶಿರಸಿ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕಿ ಆರತಿ ಶೆಟ್ಟರ ಮತ್ತಿತರರು ಉಪಸ್ಥಿತರಿದ್ದರು,
ಬಣ್ಣದಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ ಸ್ವಾಗತಿಸಿದರು. ಪರಮೇಶ್ವರಯ್ಯ ಶಾಸ್ತ್ರಿ ಕಾನಳ್ಳಿಮಠ ವೇದ ಘೋಷ ಹಾಡಿದರು. ಶ್ರೀಗುರು ಸಿದ್ದೇಶ್ವರ ಮಹಿಳಾ ಮಂಡಳಿಯ ಸದಸ್ಯರು ಪ್ರಾರ್ಥಿಸಿದರು.