ಸಾಹಿತ್ಯ ಓದಿಕೊಂಡವರು ಅಪರಾಧ ಮಾಡಲಾರರು

KannadaprabhaNewsNetwork |  
Published : Jun 22, 2026, 01:15 AM IST
32 | Kannada Prabha

ಸಾರಾಂಶ

ಕನ್ನಡ ಸಾಹಿತ್ಯವು ಬದುಕಲು ಸತ್ಯವನ್ನೇ ಹೇಳಬೇಕು ಎಂಬುದನ್ನು ಹೇಳಿಕೊಡುತ್ತದೆ. ನಮ್ಮ ಭಾರತ ದೇಶದ ಸಂವಿಧಾನವೂ ಇದನ್ನೇ ಹೇಳುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಹೆಬ್ಬಾಳಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆ ಕನ್ನಡ ನುಡಿ ಒಳಗೊಂಡ ವಿಚಾರಗಳು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವು ನಡೆಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯವನ್ನು ಓದಿಕೊಂಡವರು ಅಪರಾಧ ಮಾಡಲು ಹಾಗೂ ಜೈಲಿಗೆ ಹೋಗಲು ಸಾಧ್ಯವಿಲ್ಲ. ಏಕೆಂದರೆ ಸಾಹಿತ್ಯ ನಮ್ಮಲ್ಲಿ ಮಾನವೀಯತೆ, ಸೃಜಶೀಲತೆಯನ್ನು ಬೆಳೆಸುತ್ತದೆ. ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯನುಡಿಯಲು ಬೇಡ... ವಚನವನ್ನುಅರ್ಥಮಾಡಿಕೊಂಡರೆ ಸಾಕು ಯಾರೂ ಅಪರಾಧದಲ್ಲಿ ತೊಡಗಲು ಸಾಧ್ಯವಿಲ್ಲ ಎಂದರು.

ಕನ್ನಡ ಸಾಹಿತ್ಯವು ಬದುಕಲು ಸತ್ಯವನ್ನೇ ಹೇಳಬೇಕು ಎಂಬುದನ್ನು ಹೇಳಿಕೊಡುತ್ತದೆ. ನಮ್ಮ ಭಾರತ ದೇಶದ ಸಂವಿಧಾನವೂ ಇದನ್ನೇ ಹೇಳುತ್ತದೆ. ಸಂವಿಧಾನದಲ್ಲಿ ಹೇಳಿರುವ ತತ್ವಗಳನ್ನು ಸಾವಿರದ ನೂರು ವರ್ಷಗಳ ಹಿಂದೆಯೇ ಕನ್ನಡ ಸಾಹಿತ್ಯವು ಹೇಳಿದೆ. ಆದ್ದರಿಂದ ವಿದ್ಯಾರ್ಥಿಗಳು ನೀವು ಕನ್ನಡವನ್ನು ಒಂದು ವಿಷಯ ಎಂದು ಓದದೆ ನೀವು ಯಾವುದೇಕೋರ್ಸ್ ಮಾಡಿದರೂ ಸಾಹಿತ್ಯವನ್ನು ಓದಬೇಕು. ಅದು ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿರೂಪಿಸುತ್ತದೆ. ಇದನ್ನೇ ಪಂಪ, ಕವಿರಾಜಮಾರ್ಗಕಾರ, ಬಸವಣ್ಣ, ಕನಕದಾಸರು, ಕುವೆಂಪು, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಕಾರಂತರು ಹೇಳಿರುವುದು. ಪ್ರತಿಯೊಬ್ಬರ ಚಿಂತನೆಗಳು ಮಹತ್ವವಾದುವು. ಅದನ್ನು ಅರ್ಥಮಾಡಿಕೊಂಡರೆ ನಮ್ಮ ಬದುಕು ಸುಂದರವಾಗುತ್ತದೆ ಎಂದು ಅವರು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಪ್ರೊ.ಎಸ್. ಚಂದ್ರಕಿರಣ್ ಕುಳವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ಜಿಲ್ಲೆಯ ಪ್ರತಿ ತಾಲೂಕು, ಹೋಬಳಿ ಹಾಗೂ ಚಿಕ್ಕಚಿಕ್ಕ ಊರುಗಳಲ್ಲಿ ಪ್ರೌಢಶಾಲೆ, ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ವಿಶೇಷವಾಗಿ ಹಲವು ಜಿಲ್ಲೆಗಳಲ್ಲಿನ ಕಾರಾಗೃಹಗಳಲ್ಲೂ ಸಾಹಿತ್ಯದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಖೈದಿಗಳ ವ್ಯಕ್ತಿತ್ವ ವಿಕಸನಗೊಳಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಚಕೋರ ಸಾಹಿತ್ಯ ವಿಚಾರ ವೇದಿಕೆಯು ಎರಡು ವರ್ಷಗಳಿಂದ ಸತತವಾಗಿ ಪ್ರತಿ ತಿಂಗಳು ಉಪನ್ಯಾಸ ಕಾರ್ಯಕ್ರಮ ನಡೆಸುತ್ತಾ ಬಂದಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ವಿಶ್ರಾಂತ ಪ್ರಾಂಶುಪಾಲ ಪ್ರೊ. ಮಹೇಶ್ ಹರವೆ ಮಾತನಾಡಿ, ಕನ್ನಡ ನುಡಿ ಒಳಗೊಂಡ ವಿಚಾರದ ಲಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಮಿತಿಮೀರಿದ ಪ್ರಾರ್ಥನೆಗಿಂತ ಮಿತಿಮೀರಿದ ಜ್ಞಾನ ಶ್ರೇಷ್ಠವಾದುದು. ಕನ್ನಡದ ಎಲ್ಲಾ ಪ್ರಖ್ಯಾತರ ಚಿಂತನೆಗಳನ್ನು ಅರ್ಥಮಾಡಿಕೊಂಡರೆ ಈ ನಾಡನ್ನು ಉತ್ಕೃಷ್ಟಗೊಳಿಸಲು ಸಾಧ್ಯ. ಪಂಪನನ್ನು ಓದಿದರೆ ನಮ್ಮ ಜ್ಞಾನವಷ್ಟೇ ಅಲ್ಲ, ನಮ್ಮ ನುಡಿಯೂ ವಿಕಸಿತವಾಗುತ್ತದೆ. ಅವನ ಪ್ರಕಾರ ಧರ್ಮ ಎಂದರೆ ದಯೆ, ದಾನ, ತಪಸ್ಸು ಮತ್ತು ಶೀಲ. ಇಂಥಾ ಚಿಂತನೆಗಳು ಕನ್ನಡ ಸಾಹಿತ್ಯದಲ್ಲಿರುವುದರಿಂದಲೇ ಈ ಭಾಷೆ ಇಂದು ವಿಶ್ವಮಾನ್ಯವಾಗಿದೆ. ವಿಚಾರವೆಂದರೆ ಬೇರಿಲ್ಲ, ಅರಿವು ಮತ್ತು ಕರುಣೆಯ ಸಂಗಮ. ಅರಿವಿಲ್ಲದೆ ಕರುಣೆ ಮಾತ್ರವಾದರೆ ಅದು ಶುಷ್ಕವಾಗುತ್ತದೆ. ಇಂದು ಲೋಕ ಸಂಪತ್ತಿನ ಹಿಂದೆ ಹೋಗುತ್ತಿದೆ. ಹಾಗಾಗದೆ ಜ್ಞಾನದ ಹಿಂದೆ ಹೋಗುವಂತಾಗಬೇಕು ಎಂದರು.

ಇಂದು ಸಮಾಜ ನಾನು- ನಾನು ಎಂದು ವಾದಮಾಡುತ್ತಿದೆ. ಆದರೆ ನಮ್ಮ ವಚನಕಾರರು, ಕೀರ್ತನಕಾರರು, ಸಿದ್ಧರು ವಾದಮಾಡಲಿಲ್ಲ ಬದಲಿಗೆ ಎಲ್ಲರೊಂದಿಗೆ ತಮ್ಮ ವಿಚಾರಗಳನ್ನು ನಿರೂಪಿಸುವ ಸಂವಾದ ನಡೆಸಿದರು.

ಇಂದು ಇಂಥಾ ಸಂವಾದಗಳ ಕುರಿತು ಎಲ್ಲರಿಗೂ ಜ್ಞಾನ ಬೇಕಾಗಿದೆ. ಕನ್ನಡ ಸಾಹಿತ್ಯದಲ್ಲಿ ಬಹುತ್ವದಲ್ಲಿ ಏಕತೆ ಇದೆ. ಲಿಂಗಸಮಾನತೆ, ಜಾತ್ಯಾತೀತತೆ, ಅಸಮಾನತೆ ಇಂಥಾ ಚಿಂತನೆಗಳು ಕನ್ನಡದಲ್ಲಿ ಅರಳಿರುವುದೇ ವಿನೂತನವಾದುದು. ಇಂಥಾ ಪಿಡುಗುಗಳು ಹೋಗಲು ವಿಚಾರದ ಚಿಂತನೆಗಳು ಅಗತ್ಯವಾದುದು ಎಂದು ಅರ್ಥ ಗರ್ಭೀತವಾದ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಕೆ. ಸೌಮ್ಯಾ ಈರಪ್ಪ ಮಾತನಾಡಿ, ಸಾಹಿತ್ಯದ ಓದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿ ಆಗುತ್ತದೆ. ವಿದ್ಯಾರ್ಥಿಗಳು ಕನ್ನಡವನ್ನು ಪರೀಕ್ಷೆಯ ಸಲುವಾಗಿ ಕಲಿಯದೆ ಸಾಹಿತ್ಯದ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕು. ಓದು ನಮ್ಮ ಸಂಪೂರ್ಣ ವ್ಯಕ್ತಿತ್ವವನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸಿ.ಪಿ. ಲಾವಣ್ಯ ಸ್ವಾಗತಿಸಿದರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಮೈಸೂರು ಜಿಲ್ಲಾ ಸಂಚಾಲಕ ಡಾ. ಶಬಾನ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಎನ್‌. ಯೋಗೇಶ, ಪ್ರೊ. ಪದ್ಮಾ ಮುಕುಂದರಾಜ್‌, ಲೇಖಕ ಗಣೇಶ ಮೀನಗಡ, ಶಶಿಕಲಾಗೌಡ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ಕೇವಲ ಸರ್ಕಾರಿ ನೌಕರಿಗಾಗಿ ಅಲ್ಲ: ಶಾಸಕ ಎಚ್.ಡಿ.ತಮ್ಮಯ್ಯ
ಆರೋಗ್ಯವಂತರಾಗಿ ಬದುಕಲು ಯೋಗಾಭ್ಯಾಸ ಅಗತ್ಯ