ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಮೈಸೂರು ರಸ್ತೆಯ ಟಿಎಪಿಸಿಎಂಎಸ್ ಕಚೇರಿ ಮತ್ತು ಪಡಿತರ ಗೋದಾಮಿನಲ್ಲಿ ಈ ಕಳ್ಳತನ ನಡೆದಿದೆ. ಕಳ್ಳರು ಕಚೇರಿಯ ಒಂದು ಪೆಟ್ಟಿಗೆಯನ್ನು ಮುರಿದಿದ್ದಾರೆ. ನಂತರ ಪಡಿತರ ಹಂಚುವ ಗೋದಾಮಿನ ಬೀಗವನ್ನು ಒಡೆದಿದ್ದಾರೆ. ಕಚೇರಿಯಲ್ಲಿ ಹಣ ಸಿಗದ ಕಾರಣ, ಗೋದಾಮಿನಲ್ಲಿದ್ದ ಬಿಪಿಎಲ್ ಕಾರ್ಡುದಾರರಿಗೆ ಹಂಚಲು ತಂದಿದ್ದ ೫೦ ಕೆ.ಜಿ. ತೂಕದ ೪೬ ಚೀಲ ರಾಗಿ ಮತ್ತು ೫೦ ಕೆ.ಜಿ. ತೂಕದ ೧೫ ಚೀಲ ಅಕ್ಕಿ ಮೂಟೆ ಹಾಗೂ ೪೮೦ ಖಾಲಿ ಚೀಲಗಳನ್ನು ಕದ್ದೊಯ್ದಿದ್ದಾರೆ.
ಲೈಲ್ಯಾಂಡ್ ವಾಹನದೊಂದಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಪಡಿತರ ಧಾನ್ಯ ಕಳವು ಮಾಡಿಕೊಂಡು ಹೋಗಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಘದ ಕಾರ್ಯದರ್ಶಿ ಸಂಧ್ಯಾ ಅವರು ಕಳ್ಳತನವಾಗಿರುವ ಕುರಿತು ಪಟ್ಟಣದ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮೆರಾ ಫೂಟೇಜ್ ಪಡೆದು ತನಿಖೆ ಮುಂದುವರಿಸಿದ್ದಾರೆ.