ಯುರಿಯಾ ಗೊಬ್ಬರ ಅಭಾವಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಹೊಣೆ: ಶಾಸಕ ಸಿ.ಎನ್. ಬಾಲಕೃಷ್ಣ ಆರೋಪ

KannadaprabhaNewsNetwork |  
Published : Aug 01, 2025, 12:00 AM IST
31ಎಚ್ಎಸ್ಎನ್8 : ನುಗ್ಗೇಹಳ್ಳಿ ಹೋಬಳಿಯ ಹೊನ್ನ ಮಾರನಹಳ್ಳಿ  ಗ್ರಾಮದಲ್ಲಿ  ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ  ಎಫ್ಎನ್ಎಸ್  ಆಹಾರ ಮತ್ತು ಪೌಷ್ಟಿಕಾಂಶ  ಯೋಜನೆ ಅಡಿಯಲ್ಲಿ  ಬಿತ್ತನೆ ರಾಗಿ ಮತ್ತು  ಸಾವಯವ ಗೊಬ್ಬರ  ಹಾಗೂ  ಕೃಷಿ ಪರಿಕರಣಗಳನ್ನು ಶಾಸಕ ಸಿಎನ್ ಬಾಲಕೃಷ್ಣ  ಉಚಿತವಾಗಿ ರೈತರಿಗೆ ವಿತರಿಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ತೆಂಗು ಬೆಳೆಗೆ ನುಸಿ, ಗರಿ ಚುಕ್ಕೆ ರೋಗ, ಕೊಳೆರೋಗ ಸೇರಿ ಅನೇಕ ಕಾಯಿಲೆಗಳು ಸಾವಿರಾರು ಹೆಕ್ಟೇರ್ ಪ್ರದೇಶದ ತೆಂಗಿನ ಮರಗಳಿಗೆ ಕಾಯಿಲೆ ಹರಡಿದ್ದು, ಇದರಿಂದ ತಾಲೂಕಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ರಾಜ್ಯದಲ್ಲಿ ಯುರಿಯಾ ಹಾಗೂ ರಸಗೊಬ್ಬರ ಅಭಾವಕ್ಕೆ ರಾಜ್ಯ ಸರ್ಕಾರದ ಅಸಹಕಾರ ಹಾಗೂ ನಿರ್ಲಕ್ಷ್ಯವೇ ಕಾರಣ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದಲ್ಲಿ ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಎಫ್ಎನ್ಎಸ್ ಆಹಾರ ಮತ್ತು ಪೌಷ್ಠಿಕಾಂಶ ಯೋಜನೆ ಅಡಿ ಬಿತ್ತನೆ ರಾಗಿ, ಸಾವಯವ ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಉಚಿತವಾಗಿ ರೈತರಿಗೆ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ಈ ಬಾರಿ ಸರ್ಕಾರದ ಅಸಹಕಾರ ಮತ್ತು ನಿರ್ಲಕ್ಷ್ಯದಿಂದ ಯುರಿಯಾ ಗೊಬ್ಬರ ಅಭಾವ ಉಂಟಾಗಿದ್ದು, ಇದರಿಂದ ಕೆಲವು ಕಡೆಗಳಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗುತ್ತಿದೆ. ಇನ್ನೂ ಅನೇಕ ಕಡೆಗಳಲ್ಲಿ ಯುರಿಯಾ ಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಮುಂಗಾರು ಪ್ರಾರಂಭದಲ್ಲೇ ಮಳೆಯ ಹವಾಮಾನ ವೈಪರೀತ್ಯವನ್ನು ತಜ್ಞರಿಂದ ಮಾಹಿತಿ ಪಡೆದು ಹೆಚ್ಚಿನ ದಾಸ್ತಾನು ತರಿಸಲು ಮುತುವರ್ಜಿ ವಹಿಸಬೇಕಾಗಿತ್ತು, ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ, ಈಗಲೂ ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಒಂದು ವಾರದ ಒಳಗಡೆ ಹೆಚ್ಚಿನ ದಾಸ್ತಾನು ತರಿಸುವ ಮೂಲಕ ರೈತರಿಗೆ ನೆರವಾಗುವಂತೆ ಮನವಿ ಮಾಡಿದರು. ಜಿಲ್ಲೆ ಹಾಗೂ ತಾಲೂಕಿನಲ್ಲಿ ಹೆಚ್ಚಿನ ಅಭಾವ ಉಂಟಾಗಿಲ್ಲ, ತಾವು ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಮೂಲಕವೂ ಯುರಿಯಾ ಗೊಬ್ಬರ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಹೆಚ್ಚಿನ ಸಮಸ್ಯೆ ಉದ್ಭವಿಸಿಲ್ಲ ಎಂದರು.

ಎಫ್ಎನ್ಎಸ್ ಯೋಜನೆಯಡಿ ಒಬ್ಬ ರೈತನಿಗೆ 2311 ರು. ಗಳ ವೆಚ್ಚದಲ್ಲಿ ರಾಗಿ ಮತ್ತು ಸಾವಯವ ಗೊಬ್ಬರ, ಬೇವಿನ ಎಣ್ಣೆ, ಕೀಟನಾಶಕ ಸೇರಿದಂತೆ ಇನ್ನಿತರೆ ಕೃಷಿ ಪರಿಕರಗಳನ್ನು ಸುಮಾರು 280 ರೈತರಿಗೆ 6.50 ಲಕ್ಷ ರು. ವೆಚ್ಚದಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ, ಇದರ ಸದುಪಯೋಗವನ್ನು ಗ್ರಾಮಸ್ಥರು ಬಳಸಿಕೊಂಡು ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆಯುವಂತೆ ಸಲಹೆ ನೀಡಿದರು.

ಒಂದು ಎಕರೆ ರಾಗಿ ಬೆಳೆಗೆ ವಿಮೆ ಇಲಾಖೆ 344 ರು.ಗಳನ್ನು ನಿಗದಿಗೊಳಿಸಿದ್ದು, ಹವಾಮಾನ ವೈಪರೀತ್ಯದಿಂದ ಬೆಳೆ ಹಾಳಾದರೆ ಪ್ರತಿ ಎಕರೆಗೆ 17 ಸಾವಿರ ರು. ಸಹಾಯಧನ ಸಿಗಲಿದೆ. ರೈತರು ನೋಂದಣಿ ಮಾಡಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ. ತಪ್ಪದೆ ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.

ಈಗಾಗಲೇ ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಹೋಬಳಿ ವ್ಯಾಪ್ತಿಯ 1500 ರೈತರಿಗೆ ಸ್ಪಿಂಕ್ಲೆರ್ ಸೆಟ್ ಹಾಗೂ 500 ರೈತರಿಗೆ ಸಹಾಯಧನದಲ್ಲಿ ಪಿವಿಸಿ ಪೈಪ್ ನೀಡಲಾಗಿದೆ, ಮುಂಬರುವ ದಿನಗಳಲ್ಲೂ ಬೇಡಿಕೆಗೆ ಅನುಗುಣವಾಗಿ ರೈತರಿಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ತೆಂಗು ನುಸಿ ಹಾಗೂ ರೋಗದ ಬಗ್ಗೆ ಹೆಚ್ಚು ಜಾಗೃತಿ ಇರಲಿ:

ತಾಲೂಕಿನಲ್ಲಿ ತೆಂಗು ಬೆಳೆಗೆ ನುಸಿ, ಗರಿ ಚುಕ್ಕೆ ರೋಗ, ಕೊಳೆರೋಗ ಸೇರಿ ಅನೇಕ ಕಾಯಿಲೆಗಳು ಸಾವಿರಾರು ಹೆಕ್ಟೇರ್ ಪ್ರದೇಶದ ತೆಂಗಿನ ಮರಗಳಿಗೆ ಕಾಯಿಲೆ ಹರಡಿದ್ದು, ಇದರಿಂದ ತಾಲೂಕಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಸಮಸ್ಯೆಯ ಬಗ್ಗೆ ಆಗಸ್ಟ್ ನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ತಾಲೂಕಿನ ತೆಂಗಿನ ಬೆಳೆಗಾರರ ಪರವಾಗಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ನುಗ್ಗೇಹಳ್ಳಿ ಗ್ರಾಪಂ ಅಧ್ಯಕ್ಷ ಎನ್. ಆರ್. ಶಿವಕುಮಾರ್, ಹೋಬಳಿ ಕೃಷಿ ಅಧಿಕಾರಿ ಜಿ.ವಿ. ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಬಿ. ವಿಠ್ಠಲ್ ಕುಮಾರ್, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಚ್‌.ಬಿ. ರಂಗಸ್ವಾಮಿ, ಸಂಪತ್ ಕುಮಾರ್, ಗ್ರಾಪಂ ಸದಸ್ಯರಾದ ಸವಿತಾ ಯೋಗೀಶ್, ಹೊನ್ನೇಗೌಡ, ನಟರಾಜ್ ಯಾದವ್, ಮಂಜುನಾಥ್, ಮಂಜಣ್ಣ, ರೈತ ಸಂಘದ ಮುಖಂಡ ಬಸವರಾಜು, ಮುಖಂಡರಾದ ಶಿವಣ್ಣ, ಬೋರೇಗೌಡ, ಕೃಷ್ಣಮೂರ್ತಿ, ಸುರೇಶ್, ಜಯರಾಮ್, ಕಾಂತರಾಜ್, ದೇವರಾಜ್, ಶೇಖರ್, ಕೃಷಿ ಇಲಾಖೆ ಸಿಬ್ಬಂದಿ ವಿಜಯಕುಮಾರ್, ರಾಜೇಶ್ವರಿ ಸೇರಿ ಇತರರು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...