ಕನ್ನಡಪ್ರಭ ವಾರ್ತೆ ಯಾದಗಿರಿ
ಸದನದಲ್ಲಿ ಸದ್ದು ಮಾಡಿದ್ದ, ಯಾದಗಿರಿ ಜಿಲ್ಲೆಯ ಶಹಾಪುರದ ಸರ್ಕಾರಿ ಗೋದಾಮಿನಿಂದ 2 ಕೋಟಿ ರು.ಗಳ ಮೌಲ್ಯದ, ಸುಮಾರು 6 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಇದೀಗ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.ಶಹಾಪುರದ ಹಿರಿಯ ರೈತ ಮುಖಂಡ ಅಶೋಕ್ ಕುಮಾರ್ ಕುಲ್ಕರ್ಣಿ ಮಲ್ಲಾಬಾದಿ ಅವರು ಬೆಂಗಳೂರು ಕೇಂದ್ರ ಕಚೇರಿಗೆ ತೆರಳಿ ರಿಜಿಸ್ಟ್ರಾರ್ ಅವರಿಗೆ ಡಿ.13ರಂದು ದೂರು ಸಲ್ಲಿಸಿದ್ದಾರೆ. ಆಹಾರ ಇಲಾಖೆಯ ಉಪ ನಿರ್ದೇಶಕ ಭೀಮರಾಯ, ಶಹಾಪುರ ಟಿಎಪಿಸಿಎಂಎಸ್‌ನ ವ್ಯವಸ್ಥಾಪಕ ಶಿವಪ್ಪ ಸುರಪುರ ಹಾಗೂ ಸಲಹೆಗಾರ ಶಿವರಾಜ್ ಹಾಲಗೇರಾ ವಿರುದ್ಧ ಅವರು ಆರೋಪಿಸಿದ್ದಾರೆ.
ಸದ್ಯ, ಸ್ಥಳೀಯ ಪೊಲೀಸರಿಂದ ಸದ್ಯ ನಡೆಯುತ್ತಿರುವ ತನಿಖೆಯಿಂದ ಏನೂ ಪ್ರಯೋಜನವಿಲ್ಲ. ಈ ಅಕ್ಕಿ ಮಾರಾಟ ಜಾಲದಲ್ಲಿ ಪ್ರಭಾವಿ ನಾಯಕರಿದ್ದು, "ನಾಮ್ ಕೆ ವಾಸ್ತೆ "ಯಂತೆ ತನಿಖೆ ನಡೆಸಿ ಆರೋಪಿಗಳನ್ನು ರಕ್ಷಿಸುತ್ತಿರುವ ಲಕ್ಷಣಗಳಿವೆ ಎಂದು ಆರೋಪಿಸಿರುವ ಅಶೋಕ ಮಲ್ಲಾಬಾದಿ, ಲೋಕಾಯುಕ್ತದಲ್ಲಿ ತಮ್ಮ ದೂರು ದಾಖಲಿಸಿಕೊಂಡು ವಿಶೇಷ ತನಿಖೆ ನಡೆಸಬೇಕೆಂದು ಮಲ್ಲಾಬಾದಿ ಮನವಿ ಮಾಡಿದ್ದಾರೆ.ಬಡವರಿಗೆ ಹಂಚಬೇಕಿದ್ದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಅಕ್ಕಿ ಮಾರಾಟ ಜಾಲದಲ್ಲಿ ಪ್ರಭಾವಿ ನಾಯಕರಿದ್ದಾರೆ. ಈಗ ನಡೆಯುತ್ತಿರುವ ತನಿಖೆಯ ಮೇಲೆ ಭರವಸೆಯಿಲ್ಲ. ಆದ್ದರಿಂದ ವಿಶೇಷ ತನಿಖೆ ನಡೆಸುವಂತೆ ಅವರ ಮನವಿ ಮೇರೆಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. (ಕಂಪ್ಲೇಂಟ್/ಉಪಲೋಕ/ಜಿಎಲ್ಬಿ/6851 /2023)ಅಕ್ರಮ ತಡೆಗಟ್ಟಿದಾತಗೆ ಜೀವ ಬೆದರಿಕೆ: ದೂರು
ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮದ ಪ್ರಕರಣದ ಚರ್ಚೆಯ ಬೆನ್ನಲ್ಲೇ, ಸುರಪುರದ ನ್ಯಾಯಬೆಲೆ ಅಮಗಡಿಯೊಂದರಿಂದ ತಡ ರಾತ್ರಿ ಅಕ್ಕಿ ಅಕ್ರಮ ಸಾಗಾಟ ತಡೆಗಟ್ಟಲು ಹೋದ ತಮಗೆ ದಂಧೆಕೋರರು ಜೀವ ಬೆದರಿಕೆ ಹಾಕಿದ್ದಾರೆಂದು ಸುರಪುರದ ಸಚಿನ್ ಕುಮಾರ್ ನಾಯಕ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ದೂರಿದ್ದಾರೆ.ಡಿ.17ರಂದು ಸುರಪುರದ ಉಪ್ಪಾರ್ ಮೊಹಲ್ಲಾ ಸಮೀಪದ ನ್ಯಾಯಬೆಲೆ ಅಂಗಡಿಯಿಂದ ತಡರಾತ್ರಿ ಪಡಿತರ ಧಾನ್ಯ ಅಕ್ರಮ ಸಾಗಾಟ ನಡೆದಿತ್ತು. ಪೊಲೀಸರಿಗೆ ಈ ಮಾಹಿತಿ ನೀಡಿ, ಅದನ್ನು ತಡೆಯಲು ಹೋದ ನನ್ನ ಮೇಲೆ ಹಲ್ಲೆ ಯತ್ನವಾಯಿತು ಎಂದು ದೂರಿದ ಸಚಿನ್, ಪೊಲೀಸರು ಬರುವಷ್ಟರಲ್ಲಿ ಅಕ್ಕಿ ತುಂಬಿಕೊಂಡಿದ್ದ ಪಿಕ್ ಅಪ್ ವಾಹನ ಅಲ್ಲಿಂದ ಪರಾರಿಯಾಗಿತ್ತು ಎಂದು ತಿಳಿಸಿದ್ದಾರೆ.