ವರ್ಷದಿಂದ ವರ್ಷಕ್ಕೆ ಬತ್ತದ ತಳಿಗಳು ಕಣ್ಮರೆ: ಡಾ. ಸುಭಾಷ ಚಂದ್ರನ್

KannadaprabhaNewsNetwork |  
Published : Nov 14, 2025, 03:30 AM IST
ಫೋಟೋ : ೧೨ಕೆಎಂಟಿ_ಎನ್‌ಒವಿ_ಕೆಪಿ೧ : ಕಾಗಾಲದಲ್ಲಿ ವಿದ್ಯಾರ್ಥಿಗಳು ಹಾಗೂ ತಜ್ಞರ ಮೂಲಕ ಸಂರಕ್ಷಿತ ತಳಿ ಭತ್ತ ಕಟಾವಿಗೆ ಚಾಲನೆ ನೀಡಲಾಯಿತು. ಡಾ. ನಾಗೇಶ ನಾಯ್ಕ, ಡಾ. ಸುಭಾಷಚಂದ್ರನ್, ನಾಗರಾಜ ನಾಯ್ಕ, ಗಂಗಾಧರ ಎಸ್.ಕೆ.ನಾಯ್ಕ, ಎಸ್.ವಿ.ಹೆಗಡೆ ಇತರರು ಇದ್ದರು.  | Kannada Prabha

ಸಾರಾಂಶ

ಸುಮಾರು ೬೦೦ಕ್ಕೂ ಹೆಚ್ಚು ಬತ್ತ ತಳಿಗಳನ್ನು ಬೆಳೆದ ಕಾಗಾಲದ ಕಡ್ಲೆಮನೆಯ ನಾಗರಾಜ ನಾಯ್ಕ ಅವರ ಗದ್ದೆಯಲ್ಲಿ ಬುಧವಾರ ಬತ್ತ ಕಟಾವು ಸಮಾರಂಬ ಹಾಗೂ ಸಮುದಾಯ ಬೀಜ ಸಂರಕ್ಷಣೆ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಲಾಯಿತು.

ಬಾರತೀಯ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ

ಸಂರಕ್ಷಿತ ತಳಿ ಬತ್ತ ಕಟಾವು, ಸಮುದಾಯ ಬೀಜ ಬ್ಯಾಂಕ ನಿರ್ಮಾಣಕ್ಕೆ ಚಾಲನೆ

ಕನ್ನಡಪ್ರಬ ವಾರ್ತೆ ಕುಮಟಾ

ಸುಮಾರು ೬೦೦ಕ್ಕೂ ಹೆಚ್ಚು ಬತ್ತ ತಳಿಗಳನ್ನು ಬೆಳೆದ ಕಾಗಾಲದ ಕಡ್ಲೆಮನೆಯ ನಾಗರಾಜ ನಾಯ್ಕ ಅವರ ಗದ್ದೆಯಲ್ಲಿ ಬುಧವಾರ ಬತ್ತ ಕಟಾವು ಸಮಾರಂಬ ಹಾಗೂ ಸಮುದಾಯ ಬೀಜ ಸಂರಕ್ಷಣೆ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಸುಭಾಷ ಚಂದ್ರನ್ ಮಾತನಾಡಿ, ಭಾರತದಲ್ಲಿ ಹಿಂದೆ ೧.೧೨ ಲಕ್ಷಕ್ಕೂ ಹೆಚ್ಚು ಬತ್ತದ ತಳಿಗಳಿದ್ದವು. ಈಗ ೧೫ ಸಾವಿರದಷ್ಟೂ ಉಳಿದಿಲ್ಲ. ವರ್ಷದಿಂದ ವರ್ಷಕ್ಕೆ ತಳಿಗಳು ಕಣ್ಮರೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ೩ ತಳಿಗಳಲ್ಲಿ ಕಗ್ಗ ತಳಿ ವಿಶ್ವದಲ್ಲೇ ಅತಿ ವಿಶಿಷ್ಟವಾಗಿದೆ. ಬತ್ತ ಬೇಸಾಯಕ್ಕೆ ವ್ಯತಿರಿಕ್ತವಾಗಿರುವ ಇಂದಿನ ಕಾಲಘಟ್ಟದಲ್ಲಿ ೬೦೦ಕ್ಕೂ ಹೆಚ್ಚು ಬತ್ತ ತಳಿಗಳ ಸಂರಕ್ಷಣೆ ಮಾಡುತ್ತಿರುವ ನಾಗರಾಜ ನಾಯ್ಕರ ಕೃಷಿ ಕ್ಷೇತ್ರ ನಿಜಕ್ಕೂ ಬತ್ತದ ಕಾಶಿಯಾಗಿದೆ ಎಂದರು.

ಬಾಗಲಕೋಟ ತೋಟಗಾರಿಕೆ ವಿವಿ ನಿವೃತ್ತ ಡೀನ್ ಡಾ. ನಾಗೇಶ ನಾಯ್ಕ ಮಾತನಾಡಿ, ದಶಕಗಳ ಹಿಂದೆ ಇಲ್ಲಿನ ಗಜನಿ ಗದ್ದೆಗಳಲ್ಲಿ ಸಿಗಡಿ ಕೃಷಿಯಿಂದಾಗಿ ಕಗ್ಗ ಕೃಷಿಗೆ ತೀವ್ರ ಹಿನ್ನಡೆಯಾಯಿತು. ನಮ್ಮ ಪಾರಂಪರಿಕ ತಳಿ ರಕ್ಷಣೆ ಟೊಂಕಟ್ಟಿದ ನಾಗರಾಜ ನಾಯ್ಕರ ಕಾರ್ಯ ಅತ್ಯುತ್ತಮವಾಗಿದೆ. ರೈತರು ಪುನಃ ಬತ್ತ ಕೃಷಿಗೆ ಮರಳುವಂತಾಗಬೇಕು. ಬತ್ತ ತಳಿ ಹಾಗೂ ಬೀಜಗಳಿಗೆ ಮೌಲ್ಯ ಹಾಗೂ ಮಾರುಕಟ್ಟೆ ಬೆಳೆಯಬೇಕು. ಕಗ್ಗದ ಮಾರುಕಟ್ಟೆ ವರ್ಧನೆಗೆ ವಿಶೇಷ ಗಮನವಾಗಲಿ ಎಂದರು.

ಸ್ಕೋಡ್‌ವೆಸ್ ಸಂಸ್ಥೆ ಅಧಿಕಾರಿ ಗಂಗಾಧರ ಮಾತನಾಡಿ, ಜನರ ಜೀವನಕ್ರಮ ಹಾಗೂ ಆಹಾರ ಕ್ರಮದ ಬದಲಾವಣೆಯಿಂದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದೆ. ಎಲ್ಲರೂ ನೈಸರ್ಗಿಕ ಜೀವನ ಕ್ರಮಕ್ಕೆ ಮರಳಬೇಕಿದೆ. ಉತ್ತಮ ಬತ್ತದ ತಳಿಗಳು ಸಂರಕ್ಷಣೆಯಾಗಬೇಕು, ಗುಣಮಟ್ಟದ ಬೀಜಗಳು ರೈತರಿಗೆ ಸಿಗಬೇಕು. ನಮ್ಮ ಸಾಂಪ್ರದಾಯಿಕ ಬೀಜಗಳ ಗುಣಮಟ್ಟ ದೀರ್ಘಕಾಲ ಸಂರಕ್ಷಣೆಯಾಗುವಂತೆ ಸಮುದಾಯ ಆಧಾರಿತ ಬೀಜ ಬ್ಯಾಂಕನ್ನು ನಾಗರಾಜ ನಾಯ್ಕ ಕೃಷಿಕ್ಷೇತ್ರದಲ್ಲಿ ನಿರ್ಮಿಸಿಕೊಡಲಾಗುವುದು ಎಂದರು.

ಬತ್ತ ತಳಿ ಸಂರಕ್ಷಕ ನಾಗರಾಜ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ೧೫ ವರ್ಷಗಳ ಸತತ ಪರಿಶ್ರಮದಿಂದ ಇಂದು ೬೦೦ಕ್ಕೂ ಹೆಚ್ಚು ಬತ್ತ ತಳಿಗಳ ಸಂರಕ್ಷಣೆ ಸಾಧ್ಯವಾಗಿದೆ. ಬತ್ತದ ಬೀಜ ಸಂರಕ್ಷಣೆಗೆ ಅನುಕೂಲವಾಗುವಂತೆ ಸ್ಕೋಡ್‌ವೆಸ್ ಸಂಸ್ಥೆಯವರು ನಮ್ಮ ಕೃಷಿಕ್ಷೇತ್ರದಲ್ಲೇ ಸಮುದಾಯ ಆಧರಿಯ ಬೀಜ ಸಂರಕ್ಷಣೆ ಬ್ಯಾಂಕ್‌ ನಿರ್ಮಾಣಕ್ಕೆ ಸಿದ್ಧರಾಗಿದ್ದಾರೆ. ಇದರಿಂದ ಇನೂ ಹೆಚ್ಚಿನ ಪ್ರಮಾಣದಲ್ಲಿ ಬತ್ತದ ತಳಿಗಳ ಸಂರಕ್ಷಣೆ ಹಾಗೂ ಬತ್ತ ಬೇಸಾಯ ವಿಸ್ತರಣೆಗೆ ಅನುಕೂಲವಾಗಲಿದೆ ಎಂದರು.

ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ, ಸ್ಕೋಡ್ ವೆಸ್‌ನ ಗಂಗಾಧರ, ಹಿರಿಯ ಕೃಷಿಕರಾದ ವಿಠೋಬ ಅಂಗಡಿಕೇರಿ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ನಾಯ್ಕ, ಸೂರಜ ನಾಯ್ಕ, ಹಳೆಯ ಕೃಷಿ ಪರಿಕರ ಸಂಗ್ರಾಹಕ ಸಿ.ಜಿ. ಹೆಗಡೆ ಕಲ್ಲಬ್ಬೆ, ಕಾಗಾಲ ಎಂ.ಟಿ. ನಾಯ್ಕ, ದಿವಾಕರ ನಾಯ್ಕ, ಎಸ್.ವಿ. ಹೆಗಡೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಜಾಹ್ನವಿ ಹೆಗಡೆ ಇತರರಿದ್ದರು.

ಬತ್ತ ಕಟಾವು ಕಾರ್ಯಕ್ರಮಕ್ಕೆ ಸುತ್ತಮುತ್ತಲ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಬಂದಿದ್ದರು. ಬತ್ತ ಕಟಾವಿಗೆ ಸಾಮೂಹಿಕವಾಗಿ ಚಾಲನೆ ನೀಡಿದರು. ಕಟಾವು ಮಾಡಲಾದ ಕರಿಕಗ್ಗದ ತೆನೆಗಳನ್ನು ಬಡಿದು ಬೇರ್ಪಡಿಸಿದರು. ಸಮುದಾಯ ಆಧಾರಿತ ಬೀಜ ಬ್ಯಾಂಕ್‌ ನಿರ್ಮಾಣಕ್ಕೂ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬತ್ತದ ತಳಿಗಳ ಕುರಿತು ಮಾಹಿತಿ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ