ಕಾರವಾರ: ತಾಲೂಕಿನ ಕದ್ರಾದ ಯುವತಿ ರಿಶೆಲ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಸಾವಿಗೆ ಒಂದು ವಾರದಲ್ಲಿ ನ್ಯಾಯ ಒದಗಿಸದಿದ್ದರೆ ಪ್ರಕರಣವನ್ನು ಸರ್ಕಾರದ ಗಮನಕ್ಕೆ ತಂದು ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ ಜತ್ತನ ಎಚ್ಚರಿಕೆ ನೀಡಿದ್ದಾರೆ.
ಕಾರವಾರದ ಪ್ರಭಾವಿ ವ್ಯಕ್ತಿಯೋರ್ವರ ಪುತ್ರನ ಕಿರುಕುಳದಿಂದಲೇ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಯುವತಿ ಮೃತಪಟ್ಟ ರಾತ್ರಿಯೇ ಸರ್ಕಾರದ ಆದೇಶವನ್ನು ಮೀರಿ, ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದು ವೈದ್ಯರು ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವಿಗಳ ಒತ್ತಡವಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರಣೋತ್ತರ ಪರೀಕ್ಷೆ ನಡೆಯುವಾಗ ಕೆಲವು ಅಪರಿಚಿತ ಯುವಕರು ಶವಾಗಾರಕ್ಕೆ ಬಂದು ವೀಕ್ಷಣೆ ಮಾಡಲು ಮುಂದಾಗಿದ್ದರು. ಅವರನ್ನು ಕಳುಹಿಸಿದವರು ಯಾರು ಎಂಬ ಬಗ್ಗೆ ಪೊಲೀಸರು ಈ ವರೆಗೂ ತನಿಖೆ ನಡೆಸಿಲ್ಲ. ಅಷ್ಟೇ ಅಲ್ಲದೆ, ಪ್ರಮುಖ ಆರೋಪಿಯನ್ನು ಬಂಧಿಸಲು ವಿಳಂಬ ಮಾಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಒಂದು ವಾರದ ಒಳಗಾಗಿ ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಅವರು ತಿಳಿಸಿದರು.ಇದೇ ವೇಳೆ ಮಾತನಾಡಿದ ಡಾ. ಪ್ರದೀಪ ಡಿಮೆಲೋ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮೃತಳ ಎದೆಯ ಭಾಗದಲ್ಲಿ ''''''''ಲವ್‌ಬೈಟ್'''''''' ಗುರುತು ಇದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ಬಗ್ಗೆ ಪೊಲೀಸರ ಬಳಿ ಯಾವುದೇ ಮಾಹಿತಿಯಿಲ್ಲ. ಅಲ್ಲದೇ, ಮಾದರಿ ಸಂಗ್ರಹದ ಬಗ್ಗೆ ಪೊಲೀಸರು ವೈದ್ಯರಿಗೆ ಮಾಹಿತಿ ನೀಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಆತ್ಮಹತ್ಯೆಗೆ ಬಳಸಿದ್ದ ಸೀರೆಯನ್ನು ಪೊಲೀಸರು ಘಟನೆ ನಡೆದ ನಾಲ್ಕು ದಿನಗಳ ಬಳಿಕ ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪೊಲೀಸರು ತನಿಖೆಯಲ್ಲಿ ಎಡವಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು.
ಪ್ರಮುಖರಾದ ಪ್ರದೀಪ ಬೀಜೆ, ಲೀಯೋ ಲೂಯಿಸ್, ಪ್ರ್ಯಾಂಕಿ ಫರ್ನಾಂಡೀಸ್, ವಿಲ್ಸನ್ ಫರ್ನಾಂಡೀಸ್, ರೀನಾ ಇದ್ದರು.