ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಮೆಜೆಸ್ಟಿಕ್, ರೆಸಿಡೆನ್ಸಿ ರಸ್ತೆ, ಎಂ.ಜಿ. ರಸ್ತೆ, ರಾಜಾಜಿನಗರ, ಮಲ್ಲೇಶ್ವರ, ಬೆನ್ಸನ್ ಟೌನ್, ಕೆ.ಆರ್.ಪುರ, ಮಾರತ್‌ಹಳ್ಳಿ, ಬನಸವಾಡಿ, ಇಂದಿರಾನಗರ, ಸಂಜಯನಗರ, ಮತ್ತಿಕೆರೆ, ಹಲಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.
ಕೆ.ಆರ್.ಸರ್ಕಲ್ ಅಂಡರ್‌ಪಾಸ್, ಮಾಲ್ ಆಫ್ ಏಷಿಯಾ ಹಿಂಭಾಗದ ಗೇಟ್ ಬಳಿಯ ರೈಲ್ವೆ ಅಂಡರ್‌ಪಾಸ್, ದೊಡ್ಡನೆಕ್ಕುಂಡಿ ರೈಲ್ವೆ ಅಂಡರ್‌ಪಾಸ್, ಮಾರತಹಳ್ಳಿ ಮತ್ತು ಟಿ.ಸಿ. ಪಾಳ್ಯ ಹೆದ್ದಾರಿ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆ ಹಾಗೂ ಅಂಡರ್‌ಪಾಸ್‌ಗಳಲ್ಲಿ ಸುಮಾರು 1 ರಿಂದ 2 ಅಡಿ ಎತ್ತರದವರೆಗೂ ನಿಂತಿದ್ದ ನೀರಿನಲ್ಲಿ ವಾಹನಗಳು ಸಂಚರಿಸದವು. ಕೆಲವು ವಾಹನಗಳು ನೀರಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದರು.ಭಾರೀ ಗಾಳಿ ಮತ್ತು ಮಳೆಯಿಂದಾಗಿ ಇಂದಿರಾನಗರ, ಮಲ್ಲೇಶ್ವರ, ರಾಜಾಜಿನಗರ ಮತ್ತು ಕೆ.ಆರ್.ಪುರ ಪ್ರದೇಶಗಳಲ್ಲಿ ಮರಗಳು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮರಗಳ ಕೆಳಗೆ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿವೆ. ವಿದ್ಯುತ್ ತಂತಿಯ ಮೇಲೆ ಮರಗಳ ಕೊಂಬೆಗಳು ಬಿದ್ದು ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಕೊಡವ ಸಮಾಜ ರಸ್ತೆ, ವಸಂತ ನಗರ, ಕಮರ್ಷಿಯಲ್ ಸ್ಟ್ರೀಟ್, ಜಯಮಹಲ್ ಮುಖ್ಯ ರಸ್ತೆ, ಬಸವನಗುಡಿಯ ಕೆಲವು ರಸ್ತೆಗಳಲ್ಲಿ ನೀರು ನದಿಯಂತೆ ಹರಿದಿದೆ. ವರ್ತೂರಿನ ಕೆರೆ ಕೋಡಿ ಬಳಿಯ ರಸ್ತೆಯಲ್ಲಿ 1 ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ನಾಗರಿಕರು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿಷ್ಠಿತ ಮಾನ್ಯತಾ ಟೆಕ್ ಪಾರ್ಕ್ ಎದುರಿನ ರಿಂಗ್ ರಸ್ತೆಯ ಫ್ಲೈಓವರ್ ಮೇಲ್ಭಾಗದಲ್ಲಿ ನೀರು ನಿಂತಿದ್ದ ಕಾರಣ ವಾಹನಗಳು ಸಂಚರಿಸಲು ಸಾಧ್ಯವಾಗದೇ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಾನ್ಯತಾ ಟೆಕ್‌ಪಾರ್ಕ್‌ನಿಂದ ಮಹದೇವಪುರ ವರೆಗೂ ವಾಹನಗಳು ಜಾಮ್ ಉಂಟಾಗಿ ವಾಹನಗಳು ತೆವಳುತ್ತಾ ಸಾಗಿದವು. ಸುಹಾಸ್ ದೇಶ್‌ಮುಖ್ ಎಂಬುವರು ಈ ಕುರಿತು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪ್ರತಿಸಲ ಮಳೆ ಬಂದಾಗಲೂ ಪ್ಲೈಓವರ್ ಮೇಲೆ ನೀರು ನಿಲ್ಲುತ್ತದೆ. ಅಲ್ಲದೇ, ಫ್ಲೈಓವರ್ ಕೆಳಗಿನ ಸರ್ವೀಸ್ ರಸ್ತೆಯಲ್ಲೂ ನೀರು ನಿಲ್ಲುತ್ತದೆ. ಕಸ ತೆರವುಗೊಳಿಸಿ ನೀರು ಹರಿಯುವಂತೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸುಹಾಸ್ ಮನವಿ ಮಾಡಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?