ಕನ್ನಡಪ್ರಭ ವಾರ್ತೆ, ತುಮಕೂರುಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಜಿಲ್ಲೆಯ 1323 ಮೇಲ್ಮನವಿ ಅರ್ಜಿಗಳು ಆಯೋಗದಲ್ಲಿ ಬಾಕಿಯಿವೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಮಾಹಿತಿ ನೀಡಿದರು. ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೂ ಒಟ್ಟು ಆಯೋಗದಲ್ಲಿ 41034 ಮೇಲ್ಮನವಿ ಅರ್ಜಿಗಳು ಬಾಕಿಯಿದ್ದು, ಜಿಲ್ಲೆಯಲ್ಲಿ 1323 ಮೇಲ್ಮನವಿ ಅರ್ಜಿಗಳು ಬಾಕಿಯಿವೆ. ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಅರಿವಿನ ಕೊರತೆಯಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಮನವಿ ಅರ್ಜಿಗಳು ಆಯೋಗಕ್ಕೆ ಸ್ವೀಕೃತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆಯೋಗವು ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳನ್ನು ಅರಿತು ಸಕಾಲದಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡಬೇಕು. ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಂದ ಸ್ವೀಕೃತ ಅರ್ಜಿಗಳನ್ನು 30 ದಿನದೊಳಗಾಗಿ ವಿಲೇವಾರಿ ಮಾಡಬೇಕು. ಸ್ವೀಕೃತ ಅರ್ಜಿಗಳ ವಿಲೇವಾರಿಯಲ್ಲಿ ತುಮಕೂರು ಜಿಲ್ಲೆಯು ರಾಜ್ಯದಲ್ಲಿ ೯ನೇ ಸ್ಥಾನದಲ್ಲಿದ್ದು, ಬಾಕಿಯಿರುವ ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ವಿಲೇವಾರಿ ಮಾಡಿದಲ್ಲಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಕೆಯಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರಿಗೆ ಮಾಹಿತಿ ನೀಡಲು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಇಲಾಖಾ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಅಧಿಕಾರಿಗಳ ವಿಳಂಬ ದೋರಣೆಯಿಂದ ನಷ್ಟ ಉಂಟಾದಲ್ಲಿ ಪರಿಹಾರವಾಗಿ ಅರ್ಜಿದಾರರಿಗೆ 1 ಲಕ್ಷ ರೂ.ಗಳವರೆಗೆ ಪರಿಹಾರ ನೀಡುವಂತೆ ಸೂಚಿಸುವ ಅಧಿಕಾರವನ್ನು ಮಾಹಿತಿ ಆಯೋಗ ಹೊಂದಿದ್ದು, ಈವರೆಗೂ ಒಟ್ಟು 406 ಅಧಿಕಾರಿಗಳ ವಿರುದ್ಧ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಯಡಿ ದಂಡ ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ರಾಜ್ಯ ಮಾಹಿತಿ ಆಯೋಗದ ಮತ್ತೊಬ್ಬ ಆಯುಕ್ತ ಡಾ. ಹರೀಶ್ ಕುಮಾರ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ನಿಯಮಾನುಸಾರ ಪ್ರಥಮ ಮೇಲ್ಮನವಿ ಅರ್ಜಿಗಳು ವಿಲೇವಾರಿಯಾಗದಿದ್ದಾಗ ಅರ್ಜಿದಾರರು ಆಯೋಗಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಲಿದ್ದಾರೆ. ಮಾಹಿತಿ ಲಭ್ಯವಿದ್ದು, ಉದ್ದೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ ವಿಧಿಸಲಾಗುವುದು ಎಂದರಲ್ಲದೆ, ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅರ್ಜಿದಾರರ ಬಗ್ಗೆ ಕೆಟ್ಟ ಭಾವನೆ ಹೊಂದಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳಿಗಾಗಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಕೆ. ಮಾತನಾಡುತ್ತಾ, ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳು ಮಾಹಿತಿ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು. ಜನಸಾಮಾನ್ಯರಿಗೆ ಸಮರ್ಪಕ, ಪಾರದರ್ಶಕ ಮತ್ತು ಸಮಯೋಚಿತ ಮಾಹಿತಿ ನೀಡಲು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಎಲ್ಲಾ ಸರ್ಕಾರಿ ಇಲಾಖೆಗಳು ಮಾಹಿತಿ ಹಕ್ಕು ಕಾಯ್ದೆ ೪(೧)ಎ ಮತ್ತು ಬಿ ಅನ್ವಯ ಕಚೇರಿಗಳಲ್ಲಿ ಅಧಿಕಾರಿ/ ಸಿಬ್ಬಂದಿ ಹಾಗೂ ಅವರ ಕಾರ್ಯವಿಧಾನ, ಸ್ವೀಕೃತ ಅರ್ಜಿ ಹಾಗೂ ವಿಲೇವಾರಿ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಈಶ್ವರಪ್ಪ ಹಾಗೂ ಸಂಜೀವಪ್ಪ, ಉಪ ವಿಭಾಗಾಧಿಕಾರಿಗಳಾದ ನಾಹಿದಾ ಜಮ್ ಜಮ್ ಹಾಗೂ ಗೋಟೂರು ಶಿವಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.