ಮಾಹಿತಿ ಹಕ್ಕು ಕಾಯ್ದೆಗೆ ಸರ್ಕಾರ ಉರುಳಿಸೋ ಶಕ್ತಿ ಇದೆ: ಡಾ.ಹರೀಶ್‌ಕುಮಾರ್

KannadaprabhaNewsNetwork |  
Published : Jun 22, 2025, 01:18 AM IST
೨೧ಕೆಎಂಎನ್‌ಡಿ-೨ಮಂಡ್ಯ ಜಿಪಂ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಹಕ್ಕು ಕಾಯ್ದೆಯ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಹಕ್ಕು ಆಯುಕ್ತರಾದ ಡಾ.ಹರೀಶ್‌ಕುಮಾರ್, ಕೆ.ಬದ್ರುದ್ದೀನ್ ಭಾಗವಹಿಸಿದ್ದರು. | Kannada Prabha

ಸಾರಾಂಶ

ಕಂದಾಯ ಇಲಾಖೆ ಹಾಗೂ ಆರ್‌ಡಿಪಿಆರ್ ಇಲಾಖೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಮೇಲ್ಮನವಿ ಬರುವುದೇ ಹೆಚ್ಚು. ಪಂಚತಂತ್ರ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪಾರದರ್ಶಕವಾಗಿ ಅನಾವರಣ ಮಾಡಿದರೆ ಬಹಳಷ್ಟು ಅರ್ಜಿಗಳು ಮೂಲ ಹಂತದಲ್ಲೇ ವಿಲೇವಾರಿಯಾಗುತ್ತದೆ. ಆಯೋಗಕ್ಕೆ ಬಂದ ೪೫೦೦೦ ಮೇಲ್ಮನವಿಗಳಲ್ಲಿ ೨೫೦೦೦ ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಹಿತಿ ಹಕ್ಕು ಕಾಯ್ದೆಗೆ ಒಂದು ಸರ್ಕಾರವನ್ನು ಕೆಡುವ ಶಕ್ತಿ ಇದೆ. ಲಭ್ಯವಿರುವ ದಾಖಲೆಗಳನ್ನು ಮಾತ್ರ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಲಭ್ಯವಿದ್ದಲ್ಲಿ ಅವುಗಳನ್ನು ಸಹ ನೀಡಬಹುದು. ಹೊಸದಾಗಿ ದಾಖಲೆ ಸೃಷ್ಟಿಸಿ ದಾಖಲೆ ನೀಡಲು ಅವಕಾಶವಿಲ್ಲ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಹರೀಶ್‌ಕುಮಾರ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಹಕ್ಕು ಕಾಯ್ದೆಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅಧಿಕಾರಿಗಳು ಆಡಳಿತದಲ್ಲಿ ಪಾರದರ್ಶಕ ಆಡಳಿತ ಅಳವಡಿಸಿಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ ಸಹಕಾರಿಯಾಗಿದೆ ಎಂದರು.

ಕಂದಾಯ ಇಲಾಖೆ ಹಾಗೂ ಆರ್‌ಡಿಪಿಆರ್ ಇಲಾಖೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಮೇಲ್ಮನವಿ ಬರುವುದೇ ಹೆಚ್ಚು. ಪಂಚತಂತ್ರ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪಾರದರ್ಶಕವಾಗಿ ಅನಾವರಣ ಮಾಡಿದರೆ ಬಹಳಷ್ಟು ಅರ್ಜಿಗಳು ಮೂಲ ಹಂತದಲ್ಲೇ ವಿಲೇವಾರಿಯಾಗುತ್ತದೆ. ಆಯೋಗಕ್ಕೆ ಬಂದ ೪೫೦೦೦ ಮೇಲ್ಮನವಿಗಳಲ್ಲಿ ೨೫೦೦೦ ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರಿರುತ್ತದೆ ಎಂದರು.

ರಾಜ್ಯ ಮಾಹಿತಿ ಆಯೋಗದ ಮತ್ತೋರ್ವ ಆಯುಕ್ತ ಕೆ.ಬದ್ರುದ್ದೀನ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಯನ್ನು ಉಡಾಫೆ ಮಾಡಬೇಡಿ, ಅಧಿಕಾರಿಗಳು ಆರ್‌ಟಿಐ ಕಾಯ್ದೆಯ ಕುರಿತು ಮೊದಲು ಸಮರ್ಪಕವಾಗಿ ತಿಳಿದುಕೊಳ್ಳಿ, ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವುದಾಗಿದೆ. ಅರ್ಜಿದಾರರು ಆರ್‌ಟಿಐನಡಿ ಮಾಹಿತಿ ಕೋರಿದ ೩೦ ದಿನದೊಳಗಾಗಿ ಅಗತ್ಯ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಸರಳವಾಗಿದೆ. ಕಾಯ್ದೆಯನ್ನು ಓದಿ ಅರ್ಥೈಸಿಕೊಳ್ಳಿ, ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕೇಳಿರುವ ಮಾಹಿತಿಯನ್ನು ಒದಗಿಸಿ, ನೀಡಬಹುದಾದ ಹಾಗೂ ನೀಡಲಾಗದ ಮಾಹಿತಿಗಳನ್ನು ಬೇರ್ಪಡಿಸಿ ಇಟ್ಟುಕೊಳ್ಳಿ, ಅರ್ಜಿದಾರರ ಅರ್ಜಿ ಓದಿ ನಿಮ್ಮ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೂ ಎಂದು ಮೊದಲು ಖಚಿತ ಪಡಿಸಿಕೊಳ್ಳಿ, ನಿಮ್ಮ ವ್ಯಾಪ್ತಿಗೆ ಬಾರದಿರುವ ಅರ್ಜಿಗಳನ್ನು ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಸಲ್ಲಿಕೆಯಾದ ೫ ದಿನದೊಳಗಾಗಿ ವರ್ಗಾಯಿಸಿ ಅರ್ಜಿದಾರರ ಗಮನಕ್ಕೆ ತನ್ನಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಆಧಿಕಾರಿಗಳ ಪ್ರಮುಖ ಕರ್ತವ್ಯ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಭಯಪಡುವ ಅಗತ್ಯವಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದ ನಿರ್ವಹಣೆ ಮಾಡುವುದು ಅಧಿಕಾರಿಗಳ ಹೊಣೆಗಾರಿಕೆ ಎಂದರು.

ಜಿಲ್ಲೆಯ ಪ್ರಸಕ್ತ ಸಾಲಿನ ೧೦ ಸಾವಿರಕ್ಕೂ ಹೆಚ್ಚು ಅರ್ಜಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದೆ, ಈಗಾಗಲೇ ೯ ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ, ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಂದರು.

ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಆಫ್‌ಲೈನ್ ನಲ್ಲಿ ಬರುವ ಅರ್ಜಿಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಆನ್‌ಲೈನ್ ಅರ್ಜಿಗಳಿಗೂ ನೀಡಬೇಕು. ಬಹಳಷ್ಟು ಅಧಿಕಾರಿಗಳು ಆನ್‌ಲೈನ್ ನಲ್ಲಿ ಬರುವ ಮಾಹಿತಿ ಹಕ್ಕು ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ ಮೂರ್ತಿ ಸೇರಿದಂತೆ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ