
ಕನ್ನಡಪ್ರಭ ವಾರ್ತೆ ತುಮಕೂರು
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿ, ಮಾಹಿತಿ ಹಕ್ಕು ಹೋರಾಟಗಾರ ಅರ್ಜುನ್ ಮುಳೆ ಆವರ ಸಿದ್ಧಪಡಿಸಿರುವ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಕ್ಕುಗಳಿಗಾಗಿ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಲ್ಲಾ ರೈತರ ಮಕ್ಕಳು ಸೇರಿ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದು ಭಾರತ ಸರ್ಕಾರದಲ್ಲಿ ನೊಂದಾಯಿತ ಸಂಸ್ಥೆಯಾಗಿದೆ. ಜನಸಾಮಾನ್ಯರಿಗೆ ಅಧಿಕಾರಿಗಳಿಂದ ಆಗುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದೇ ವೇದಿಕೆ ಉದ್ದೇಶವಾಗಿದೆ ಎಂದು ಹೇಳಿದರು.ತುಮಕೂರು ಜಿಲ್ಲೆ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ನಗರಗಳಲ್ಲಿ ಒಂದು. ಇಂತಹ ನಗರಗಳಲ್ಲಿಯೇ ಭ್ರಷ್ಟಾಚಾರ ಹೆಚ್ಚಾಗಿ, ಸಾರ್ವಜನಿಕರು, ಅದರಲ್ಲಿಯೂ ಬಡವರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅವರಿಗೆ ನ್ಯಾಯ ಕೊಡಿಸಬೇಕು. ಸರಕಾರದ ಸವಲತ್ತುಗಳ ಜೊತೆಗೆ, ಸಾರ್ವಜನಿಕರ ಕೆಲಸಗಳು ಪಾರದರ್ಶಕವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ತುಮಕೂರು ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಕೆಲಸ ಮಾಡಿಕೊಂಡು ಬರುತ್ತಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಇವುಗಳು ವೇದಿಕೆ ಅದ್ಯತೆ ವಿಷಯಗಳಾಗಿವೆ. ಗ್ರಾಮೀಣ, ನಗರದ ಎನ್ನದೆ ಎಲ್ಲೇ ಸಾರ್ವಜನಿಕರಿಗೆ ತೊಂದರೆಯಾಗಿದ್ದು ನಮ್ಮ ಗಮನಕ್ಕೆ ಬಂದರೆ, ಅವರ ಪರವಾಗಿ ಆರ್.ಟಿ.ಐ ಮೂಲಕ ಮಾಹಿತಿ ಕಲೆ ಹಾಕಿ,ತಪ್ಪುಗಳನ್ನು ಅಧಿಕಾರಿಗಳ ಮುಂದಿಟ್ಟು, ಸಂತ್ರಸ್ತರಿಗೆ ನ್ಯಾಯ ದೊರೆಯುವವರೆಗೂ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಹೋರಾಟ ನಡೆಸಲಿದೆ ಎಂದು ಹನುಮಂತರಾಯಪ್ಪ ತಿಳಿಸಿದರು.ತುಮಕೂರು ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಮಹಿಳಾ ಘಟಕ ಅಧ್ಯಕ್ಷೆ ಸುಮ ಮಾತನಾಡಿ, ನಮ್ಮ ಸಮಿತಿವತಿಯಿಂದ ಈಗಾಗಲೇ ಚಿಕ್ಕನಾಯಕನಹಳ್ಳಿ ತೀರ್ಥಪುರ ಗ್ರಾ.ಪಂ ಮತ್ತು ಗೋಡೆಕೆರೆ ಗ್ರಾಮಪಂಚಾಯಿತಿಗಳಲ್ಲಿ ಸೂರು ಇಲ್ಲದೆ ಪರದಾಡುತಿದ್ದ ಬಡವರಿಗೆ ಕಾನೂನು ಬದ್ಧವಾಗಿ ಹಕ್ಕುಪತ್ರ, ಕುಡಿಯುವ ನೀರು ಒದಗಿಸುವ ಕೆಲಸ ಆಗಿದೆ. ಅಲ್ಲದೆ ಮಕ್ಕಳಿಗೆ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಹತ್ತಾರು ವರ್ಷಗಳಿಂದ ಆಗದ ಕೆಲಸವನ್ನು ಕೆಲವೇ ದಿನಗಳಲ್ಲಿ ದೊರೆಯವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.ತುಮಕೂರು ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ನವೀನ್ ಮಾತನಾಡಿ, ಸರಕಾರದ ಕಾಯ್ದೆಗಳಾದ ಆರ್.ಟಿ.ಐ, ಸಕಾಲ ಮತ್ತು ಲೋಕಾಯುಕ್ತವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಡ್ಡುಗಟ್ಟಿರುವ ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ನಮ್ಮ ವೇದಿಕೆ ಕೆಲಸ ಮಾಡುತ್ತಿದೆ. ಅಧಿಕಾರಿಗಳಿಂದ ಯಾರಿಗಾದರೂ ತೊಂದರೆಯಾದರೆ, ವಿನಾಕಾರಣ ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಿದ್ದರೆ ಸಂತ್ರಸ್ತರ ಮಾಹಿತಿ ಜೊತೆಗೆ, ಭ್ರಷ್ಟ ಅಧಿಕಾರಿಗಳ ಮಾಹಿತಿಯನ್ನು ಪಡೆದು, ಆರ್.ಟಿ.ಐ, ಸಕಾಲ ಮತ್ತು ಲೋಕಾಯುಕ್ತ ಮೂರು ಸಂಸ್ಥೆಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ತರುವ ಕೆಲಸ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಸಂಚಾಲಕ ನಟರಾಜು,ಸಹ ಸಂಚಾಲಕರಾದ ರವಿ.ಎಸ್,ಮಹಿಳಾ ಉಪಾಧ್ಯಕ್ಷರಾದ ದಾಕ್ಷಾಯಣಮ್ಮ,ರವಿ ಅವರು ಉಪಸ್ಥಿತರಿದ್ದರು.