ಹೊರವಲಯ ಸಂಪರ್ಕಿಸುವ ವರ್ತುಲ ರೈಲು ಕಾರ್ಯ ಸಾಧುವಲ್ಲ : ಸೋಮಣ್ಣ

KannadaprabhaNewsNetwork |  
Published : Oct 31, 2025, 04:45 AM ISTUpdated : Oct 31, 2025, 06:58 AM IST
V Somanna

ಸಾರಾಂಶ

ಬೆಂಗಳೂರಿನ ಹೊರವಲಯದ ಸಂಪರ್ಕ ಸುಲಭವಾಗುವಂತೆ ಯೋಜಿಸಲಾಗಿದ್ದ ವರ್ತುಲ ರೈಲು ಯೋಜನೆಯ ವೆಚ್ಚ ₹1 ಲಕ್ಷ ಕೋಟಿಗೆ ತಲುಪಿ ಅಂದಾಜಿಗಿಂತ ಭಾರೀ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಅದನ್ನು ಅನುಷ್ಠಾನ ಮಾಡುವುದು ಸದ್ಯಕ್ಕೆ ಇಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

  ಬೆಂಗಳೂರು :  ಬೆಂಗಳೂರಿನ ಹೊರವಲಯದ ಸಂಪರ್ಕ ಸುಲಭವಾಗುವಂತೆ ಯೋಜಿಸಲಾಗಿದ್ದ ವರ್ತುಲ ರೈಲು ಯೋಜನೆಯ ವೆಚ್ಚ ₹1 ಲಕ್ಷ ಕೋಟಿಗೆ ತಲುಪಿ ಅಂದಾಜಿಗಿಂತ ಭಾರೀ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಅದನ್ನು ಅನುಷ್ಠಾನ ಮಾಡುವುದು ಸದ್ಯಕ್ಕೆ ಇಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ರೈಲ್ವೆ ಇಲಾಖೆಯ ಒಂದು ತಿಂಗಳ ಸ್ವಚ್ಛತಾ ಅಭಿಯಾನದ ಹಿನ್ನೆಲೆಯಲ್ಲಿ ನಗರದ ಯಶವಂತಪುರ ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ಡಿಪೋಗೆ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.

ಸುಮಾರು ₹ 1 ಲಕ್ಷ ಕೋಟಿ ಬೇಕಾಗಬಹುದು

ವರ್ತುಲ ರೈಲು ಯೋಜನೆಗೆ ಮೊದಲು ₹ 81 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಇದಕ್ಕಾಗಿ 2500 ಎಕರೆ ಭೂಸ್ವಾದೀನ ಮಾಡಿಕೊಳ್ಳಬೇಕಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ಸುಮಾರು ₹ 1 ಲಕ್ಷ ಕೋಟಿ ಬೇಕಾಗಬಹುದು. ಆದ್ದರಿಂದ ಈ ಯೋಜನೆ ನಿರ್ಮಾಣ ಸದ್ಯಕ್ಕಿಲ್ಲ ಎಂದು ಅವರು ಹೇಳಿದರು.

ಈಗಾಗಲೇ ಮೆಟ್ರೋವನ್ನು ಕನಕಪುರ, ತುಮಕೂರಿಗೆ ವಿಸ್ತರಣೆ ಮಾಡುವ ಯೋಜನೆ ಇದೆ. ನಗರದ ಸುತ್ತಲಿನ ರೈಲ್ವೆ ಮಾರ್ಗಗಳ ಡಬ್ಲಿಂಗ್ ಯೋಜನೆ ನಡೆಯುತ್ತಿದ್ದು, ಹೊರಭಾಗವನ್ನು ಸಂಪರ್ಕಿಸಲು ಸಾಕಷ್ಟು ಯೋಜನೆಗಳಿವೆ. ಹೀಗಿರುವಾಗ ಮುಂದೆ ಇದರ ಬಗ್ಗೆ ಯೋಚಿಸಲಾಗುವುದು. ಸದ್ಯಕ್ಕೆ ಕಾರ್ಯಸಾಧುವಲ್ಲ ಎಂದು ಅವರು ಹೇಳಿದರು.

ಇದಲ್ಲದೆ ಬೆಂಗಳೂರು ಉಪನಗರ ರೈಲು ಯೋಜನೆಯ ಮರುಟೆಂಡರ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿ ಮುಗಿಸಲು ಆದ್ಯತೆ ನೀಡಲಾಗುವುದು . ಉಪನಗರ ರೈಲು ಯೋಜನೆಗೆ ನಿರ್ಮಾಣಕ್ಕೆ ಮರು ಟೆಂಡರ್ ಕರೆಯುವ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ವರ್ತುಲ ರೈಲು ಯೋಜನೆ:

240 ಕಿಮೀ ವರ್ತುಲ ರೈಲು ಯೋಜನೆಯನ್ನು ಸ್ವತಃ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಬೆಂಗಳೂರಿನಲ್ಲಿ ಘೋಷಿಸಿದ್ದರು. ಮುಂದಿನ 50 ವರ್ಷವನ್ನು ಗಮನದಲ್ಲಿ ಇಟ್ಟುಕೊಂಡು ವರ್ತುಲ ರೈಲು ಯೋಜನೆ ರೂಪಿಸಲಾಗಿತ್ತು. ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಬೆಂಗಳೂರು ನಗರವನ್ನು ಸಂಪರ್ಕಿಸುವ ವೃತ್ತಾಕಾರದ ರೈಲ್ವೆ ಸಂಚಾರ ಇದಾಗಿತ್ತು. ಇದಕ್ಕಾಗಿ ₹ 7 ಕೋಟಿ ವೆಚ್ಚದಲ್ಲಿ ಕಳೆದ ವರ್ಷ ಡಿಸೆಂಬರ್‌ನಿಂದ ಸರ್ವೆ ನಡೆಸಲಾಗಿತ್ತು. ಇದರ ವಿಸ್ತ್ರತ ಯೋಜನಾ ವರದಿ ರೂಪಿಸಲಾಗುತ್ತಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಡವಂದ - ದೊಡ್ಡಬಳ್ಳಾಪುರ - ದೇವನಹಳ್ಳಿ- ಕೋಲಾರದ ಮಾಲೂರುವರೆಗೆ ಮೊದಲ ಹಂತ, ಕೋಲಾರದ ಮಾಲೂರು - ಬೆಂಗಳೂರು ಗ್ರಾಮಾಂತರದ ಆನೇಕಲ್ - ಬೆಂಗಳೂರು ನಗರದ ಹೆಜ್ಜಾಲವರೆಗೆ ಎರಡನೇ ಹಂತ ಹಾಗೂ ಹೆಜ್ಜಾಲ - ರಾಮನಗರ ಜಿಲ್ಲೆಯ ಸೋಲೂರು -ನಿಡವಂದದವರೆಗೆ ಮೂರನೇ ಹಂತದಲ್ಲಿ ಬೆಂಗಳೂರನ್ನು ಹೊರವಲಯದಲ್ಲಿ ವೃತ್ತಕಾರದಲ್ಲಿ ಈ ರೈಲು ಯೋಜನೆ ಬೆಸೆಯುತ್ತಿತ್ತು. ವರ್ತುಲ ರೈಲು ಯೋಜನೆಗೆ ಸಾಧ್ಯವಿರುವೆಡೆ ಉಪನಗರ ರೈಲನ್ನು ಜೋಡಣೆ ಮಾಡಲು ಯೋಜನೆ ರೂಪಿಸಲಾಗಿತ್ತು.

PREV
Read more Articles on

Recommended Stories

ಸರ್ಕಾರಿ ಸಭೆಗಳಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿಗೆ ನಿಷೇಧ
ಪ್ರತಿಕ್ಷಣವು ಕನ್ನಡ ನಾಡು-ನುಡಿ ಅಭಿಮಾನವಿರಲಿ