;Resize=(412,232))
ಬೆಂಗಳೂರು ದಕ್ಷಿಣ : ಬಾರ್ ಬಿಲ್ ಕಟ್ಟುವ ವಿಚಾರವಾಗಿ ಸ್ನೇಹಿತರಿಂದ ಹಲ್ಲೆಗೆ ಒಳಗಾದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಗಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಿಗಣಿ ವಡ್ಡರ ಪಾಳ್ಯದ ನಿವಾಸಿ ಸಂದೀಪ್ (23) ಮೃತ. ಈ ಸಂಬಂಧ ಮೃತನ ತಂದೆ ನೀಡಿದ ದೂರಿನ ಮೇರೆಗೆ ಸಂದೀಪ್ ಸ್ನೇಹಿತರಾದ ಸಂತೋಷ್ ಮತ್ತು ಸಾಗರ್ ಇಬ್ಬರನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.
ಅ.16ರಂದು ಸಂದೀಪ್ ಜನ್ಮದಿನ ಆಚರಣೆ ಮಾಡಿಕೊಳ್ಳಲು ಕುಂಬಾರನಹಳ್ಳಿ ಸಮೀಪದ ಬಾಂಗ್ಲೋ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಸ್ನೇಹಿತರ ಜೊತೆ ತೆರಳಿದ್ದ. ಈ ವೇಳೆ ಕಂಠಪೂರ್ತಿ ಕುಡಿದು ಕೊನೆಯಲ್ಲಿ ಬಿಲ್ ಕಟ್ಟುವ ವಿಚಾರಕ್ಕೆ ಸಂದೀಪ್ ಮತ್ತು ಸಂತೋಷ್ ನಡುವೆ ಜಗಳ ಆಗಿದ್ದು, ಉಳಿದ ಸ್ನೇಹಿತರು ಗಲಾಟೆ ಬಿಡಿಸಿ ಕಳುಹಿಸಿದ್ದರು. ಈ ವೇಳೆ ಮನೆಗೆ ಹೋಗದ ಸಂದೀಪ್ ಊರಿನ ಸಮೀಪದ ವಾಲಿಬಾಲ್ ಮೈದಾನದ ಬಳಿ ಬೇರೆ ಸ್ನೇಹಿತರ ಜೊತೆ ಮತ್ತೆ ಮದ್ಯ ಸೇವನೆ ಮಾಡುತ್ತಿದ್ದ. ಈ ವಿಚಾರ ತಿಳಿದ ಸಂತೋಷ್ ಮತ್ತು ಸಾಗರ್ ಅಲ್ಲಿಗೆ ಆಗಮಿಸಿ ಏಕಾಏಕಿ ಸಂದೀಪ್ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ಸಂದೀಪ್ ಅಂದೇ ಜಿಗಣಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಮನೆಗೆ ಹೋಗಿದ್ದ.
ಮನೆಗೆ ಬಂದ ಸಂದೀಪನಿಗೆ ವಾಂತಿ, ತಲೆನೋವು ಶುರುವಾಗಿದೆ. ಹತ್ತಿರದ ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆ ಪಡೆದಿದ್ದರೂ ಕಮ್ಮಿಯಾಗಿರಲಿಲ್ಲ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ತಲೆಯೊಳಗೆ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಪೆಟ್ಟು ಬಿದ್ದ ವಿಷಯ ತಿಳಿದಿದೆ. ಆ ಬಳಿಕ ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಿದರೂ ಚಿಕಿತ್ಸೆ ಫಲಿಸದೆ ಅ.28ರಂದು ಸಂದೀಪ್ ಮೃತಪಟ್ಟಿದ್ದಾನೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಗೆ ಮೃತ ಸಂದೀಪ್ ತಂದೆ ದೂರು ನೀಡಿದ್ದಾರೆ.