;Resize=(412,232))
ಬೆಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಸಮಾಧಿ ಮಾಡಲಾಗಿದೆ ಎಂಬ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ. ಇದರಿಂದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದ ತನಿಖೆಗೆ ಸದ್ಯಕ್ಕೆ ತಡೆ ಬಿದ್ದಿದೆ.
ಪ್ರಕರಣದ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (ಎಫ್‌ಐಆರ್ ಸಂಖ್ಯೆ- 39/2025) ಮತ್ತು ಪ್ರಕರಣದ ವಿಚಾರಣೆಗೆ ಹಾಜರಾಗಲು ಸೂಚಿಸಿ ತಮಗೆ ನೀಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿ ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ, ವಿಠ್ಠಲಗೌಡ ಮತ್ತು ಟಿ.ಜಯಂತ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಅರ್ಜಿ ಇತ್ಯರ್ಥವಾಗುವವರೆಗೆ ತಮ್ಮ ವಿರುದ್ಧದ ನೋಟಿಸ್‌ಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದರು.
ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕ ಸದಸ್ಯ ಪೀಠ, ಪ್ರಕರಣದ ಎಫ್‌ಐಆರ್‌ಗೆ ಸಂಬಂಧಿಸಿ ಮುಂದಿನ ಪ್ರಕ್ರಿಯೆಗೆ (ತನಿಖೆಗೆ) ನ.12ರವರೆಗೆ ತಡೆ ನೀಡಿತು. ಜತೆಗೆ, ಅರ್ಜಿದಾರರನ್ನು ಬಂಧಿಸಬಾರದು, ಕಿರುಕುಳ ನೀಡಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿತು. ಇದೇ ವೇಳೆ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಧರ್ಮಸ್ಥಳ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯ ತನಿಖಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತು. ಹಾಗೆಯೇ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಸ್. ಬಾಲನ್ ಹಾಗೂ ಹಿರಿಯ ವಕೀಲ ದೀಪಕ್ ಕೋಸ್ಲಾ ಅವರು, ಎಸ್‌ಐಟಿ ಪೊಲೀಸರು ಅರ್ಜಿದಾರರಿಗೆ 10 ನೋಟಿಸ್ ನೀಡಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಅವರು ಆರೋಪಿಗಳಲ್ಲ, ಸಾಕ್ಷಿಗಳೂ ಅಲ್ಲ. ಆದರೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಖುದ್ದಾಗಿ ನೋಟಿಸ್ ಜಾರಿ ಮಾಡದೆ ವಾಟ್ಸಪ್ ಹಾಗೂ ಇ-ಮೇಲ್ ಮೂಲಕ ನೋಟಿಸ್ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಿದ್ಯುನ್ಮಾನ ವಿಧಾನ ಜೊತೆಗೆ ಖುದ್ದಾಗಿ ನೋಟಿಸ್ ನೀಡಬೇಕಿದೆ. ಇನ್ನು ಎಸ್‌ಐಟಿಯು ಮೂಲ ಪ್ರಕರಣಕ್ಕೆ ಹೆಚ್ಚುವರಿ ಅಪರಾಧಗಳನ್ನು ಅಳವಡಿಸಿ, ಅರ್ಜಿದಾರರಿಗೆ ಸಮನ್ಸ್/ನೋಟಿಸ್ ನೀಡಿದೆ. ಅಂತಹ ಅಧಿಕಾರ ಪೊಲೀಸರಿಗೆ ಇಲ್ಲವಾಗಿದೆ. ಹಾಗಾಗಿ, ಆ ನೋಟಿಸ್ ರದ್ದುಗೊಳಿಸಬೇಕು ಎಂದು ಕೋರಿದರು.
ಅಲ್ಲದೆ ರಾಜಕೀಯ ವೈರತ್ವ, ಧಾರ್ಮಿಕ ವೈರತ್ವ, ಸಂಘಟನಾತ್ಮಕ ವೈರತ್ವದಿಂದ ನೋಟಿಸ್‌ಗಳನ್ನು ನೀಡಲಾಗಿದೆ. ತನಿಖಾಧಿಕಾರಿಗಳು ಅರ್ಜಿದಾರರನ್ನು ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಕೂರಿಸುತ್ತಾರೆ. 150 ಗಂಟೆಗೂ ಅಧಿಕ ಸಮಯ ವಿಚಾರಣೆ ಎದುರಿಸಿದ್ದಾರೆ. ಆರಂಭಲ್ಲಿ 211(ಎ) ಅಡಿ ಎಫ್‌ಐಆರ್ ದಾಖಲಿಸಿ ನಂತರ ವಿವಿಧ ಸೆಕ್ಷನ್‌ಗಳ ಅಪರಾಧಗಳನ್ನು ಸೇರಿಸಿದ್ದಾರೆ. ಅದೂ ಎರಡೂವರೆ ತಿಂಗಳ ನಂತರ ಹೊಸ ಸೆಕ್ಷನ್ ಸೇರ್ಪಡೆ ಮಾಡಲಾಗಿದೆ. ಅವು ಗಂಭೀರ ಸ್ವರೂಪವಲ್ಲದ ಅಪರಾಧಗಳಾಗಿವೆ. ಎಫ್‌ಐಆರ್ ದಾಖಲಿಸಿ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್‌ರಿಂದ ಅನುಮತಿ ಸಹ ಪಡೆದಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ಅದಕ್ಕೆ ಪೀಠವು ಸರ್ಕಾರಿ ಅಭಿಯೋಜಕರಿಗೆ, ಒಂದೇ ಪ್ರಕರಣ ಸಂಬಂಧ ಇಷ್ಟೊಂದು ಪೊಲೀಸ್ ನೋಟಿಸ್ ಏಕೆ ನೀಡಲಾಗಿದೆ? ಮ್ಯಾಜಿಸ್ಟ್ರೇಟ್‌ರಿಂದ ಅನುಮತಿ ಪಡೆಯಲಾಗಿದೆಯೇ? ಪ್ರತಿದಿನವೂ ಒಂದೊಂದು ನೋಟಿಸ್ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು.
ಎಸ್‌ಐಟಿ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಉತ್ತರಿಸಿ, ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್‌ರಿಂದ ಅನುಮತಿ ಪಡೆಯಲಾಗಿದೆ. ನಿನ್ನೆ ಅರ್ಜಿ ದಾಖಲಿಸಿ, ಇಂದು ವಿಚಾರಣೆಗೆ ನಿಗದಿಯಾಗಿದೆ. ಕಾಲಾವಕಾಶ ನೀಡಿದರೆ ಮ್ಯಾಜಿಸ್ಟ್ರೇಟ್ ಅನುಮತಿಸಿದ ಪ್ರತಿ ಸಲ್ಲಿಸಲಾಗುವುದು. ಹಾಗೆಯೇ, ಅರ್ಜಿದಾರರ ಪ್ರಚೋದನೆ, ಒತ್ತಾಯದ ಮೇಲೆಯೇ ಚಿನ್ನಯ್ಯ ದೂರು ನೀಡಿದ್ದಾನೆ. ಈ ಸಂಬಂಧ ಚಿನ್ನಯ್ಯನೇ ಪ್ರಮಾಣೀಕೃತ (ಸಿಆರ್‌ಪಿಸಿ ಸೆಕ್ಷನ್ 164 ಅಡಿ) ಹೇಳಿಕೆ ದಾಖಲಿಸಿದ್ದಾನೆ ಎಂದು ಆಕ್ರೋಶದಿಂದ ನ್ಯಾಯಪೀಠಕ್ಕೆ ವಿವರಿಸಿದರು.
ಅಲ್ಲದೆ, ಚಿನ್ನಯ್ಯನೇ ಅರ್ಜಿದಾರರ ಮೇಲೆ ಆರೋಪ ಮಾಡಿದ್ದಾನೆ. ಅರ್ಜಿದಾರರೇ ಪ್ರಕರಣದ ತನಿಖೆ ನಡೆಸಲು ಕೋರಿದ್ದರು. ಅವರ ದೂರು/ಮನವಿ ಆಧರಿಸಿಯೇ ಎಫ್‌ಐಆರ್ ದಾಖಲಿಸಿ ಎಸ್‌ಐಟಿ ತನಿಖೆ ನಡೆಸಲಾಗುತ್ತಿದೆ. ಆರಂಭದಲ್ಲಿ ಸಾಕ್ಷಿಗಳಾಗಿ ಅರ್ಜಿದಾರರ ಪ್ರಚೋದನೆ ನಡೆಸಲಾಗಿತ್ತು. ಧರ್ಮಸ್ಥಳ ಗ್ರಾಮದ 20 ಕಡೆ ಅಗೆದು ಪರಿಶೀಲನೆ ನಡೆಸಲಾಯಿತು. ಚಿನ್ನಯ್ಯ ತನ್ನ ದೂರಿನಲ್ಲಿ ಮಾಡಿರುವ ಆರೋಪಗಳು ಬಹುತೇಕ ಸುಳ್ಳೆಂದು ದೃಢಪಟ್ಟ ಹಿನ್ನೆಲೆಯಲ್ಲಿ ಆತನಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರುದಾರರನ್ನು ಆರೋಪಿಗಳನ್ನಾಗಿ ಮಾಡಿ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದರು.
ನ್ಯಾಯಪೀಠ ಪ್ರತಿಕ್ರಿಯಿಸಿ, ಹಾಗಿದ್ದರೆ ಅರ್ಜಿದಾರರ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಬಹುದಿತ್ತಲ್ಲವೇ ಎಂದು ಕೇಳಿತು.
ಇದಕ್ಕೆ ಸರ್ಕಾರಿ ಅಭಿಯೋಜಕರು, ಈಗಾಗಲೇ ದಾಖಲಿಸಿರುವ ಎಫ್‌ಐಆರ್‌ನಲ್ಲೇ ತನಿಖೆ ಮುಂದುವರಿಸಬಹುದೆಂದು ಸುಪ್ರೀಂಕೋರ್ಟ್ ತೀರ್ಪಿದೆ. ಹಲವು ಬಾರಿ ನೋಟಿಸ್ ನೀಡಿದ್ದು ಅರ್ಜಿದಾರರು ವಿಚಾರಣೆಗೆ ಬಂದಿಲ್ಲ. ಆ ಕುರಿತು ಎಸ್‌ಐಟಿ ಕಚೇರಿಯ ದಾಖಲೆಗಳನ್ನು ಒದಗಿಸಲಾಗುವುದು. ವಾಟ್ಸಪ್ ಮತ್ತು ಇ-ಮೇಲ್ ಮೂಲಕ ನೀಡಲಾಗಿದ್ದ ನೋಟಿಸ್ ಹಿಂಪಡೆದು ಹೊಸದಾಗಿ ನೋಟಿಸ್ ಜಾರಿ ಮಾಡಿ. ನ.3ರಂದು ವಿಚಾರಣೆಗೆ ಕರೆಯಲಾಗಿದೆ. ಅರ್ಜಿದಾರರು ನ್ಯಾಯಾಲಯ, ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಪ್ರಚೋದನೆ ಮೇರೆಗೆ ಚಿನ್ನಯ್ಯ ದೂರು ನೀಡಿದ್ದ. ಇದೀಗ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಆ ಮೂಲಕ ರಾಜ್ಯದ ಆಡಳಿತಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ವ್ಯವಸ್ಥೆಯ ಮೇಲೆ ಸವಾರಿ ಮಾಡಲು ಹೊರಟಿರುವ ಇಂಥವರ ವಿರುದ್ಧ ತನಿಖೆ ಮುಂದುವರಿಸಲು ಅನುವು ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಪ್ರಕರಣಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಬಲವಾಗಿ ಕೇಳಿಕೊಂಡರು.
ಸರ್ಕಾರಿ ಅಭಿಯೋಜಕರ ಬಲವಾದ ಕೋರಿಕೆ ಬದಿಗೆ ಇರಿಸಿ ಪ್ರಕರಣಕ್ಕೆ ತಡೆಯಾಜ್ಞೆ ನೀಡುವ ಮೂಲಕ ನ್ಯಾಯಪೀಠ ಮಧ್ಯಂತರ ಆದೇಶ ಮಾಡಿತು.
ಮಂಗಳೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ನ.3ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಮತ್ತೆ ನೋಟಿಸ್ ನೀಡಿದೆ. ವಿಠಲಗೌಡ ಅವರಿಗೆ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಎಸ್‌ಐಟಿ ಪಿಎಸ್ಐ ಗುಣಪಾಲ್ ನೇತೃತ್ವದ ತಂಡ ಉಜಿರೆಯಲ್ಲಿರುವ ತಿಮರೋಡಿ ನಿವಾಸಕ್ಕೆ ನೋಟಿಸ್ ಅಂಟಿಸಿದ್ದಾರೆ. ವಿಠಲ ಗೌಡ ಮನೆಗೂ ನೋಟಿಸ್ ಅಂಟಿಸಲಾಗಿದೆ. ಉಳಿದಿಬ್ಬರ ಮನೆಗೂ ಗುರುವಾರವೇ ನೋಟಿಸ್ ನೀಡಲಾಗಿದೆ. ಈ ಬಾರಿಯಾದರೂ ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆಗೆ ಹಾಜರಾಗುತ್ತಾರಾ ಎನ್ನುವ ಕುತೂಹಲ ಇದೆ.