ಜಿ.ಸೋಮಶೇಖರ ಕೊಟ್ಟೂರು
ದಿನದಿಂದ ದಿನಕ್ಕೆ ಕೊಟ್ಟೂರು ಪಟ್ಟಣದಲ್ಲಿ ವಾಹನಗಳ ಸಂಚಾರ ಮತ್ತು ಜನದಟ್ಟನೆ ಹೆಚ್ಚಿಸಿಕೊಂಡಿರುವ ಕಾರಣಕ್ಕೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದ್ದರು. ಕೊಟ್ಟೂರೇಶ್ವರ ಜಾತ್ರಾ ಮಹೋತ್ಸವ ಮತ್ತು ಕಾರ್ತಿಕ ಮಹೋತ್ಸವಗಳಲ್ಲಿ ಸಂಚಾರದ ಒತ್ತಡ ಮತ್ತಷ್ಟು ಹೆಚ್ಚಾಗಲಿದ್ದು, ಈ ಕಾರಣಕ್ಕೆ ಪಟ್ಟಣದಲ್ಲಿ ರಿಂಗ್ ರೋಡ್ ನಿರ್ಮಾಣ ಮಾಡಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸುತ್ತಲೇ ಬಂದಿದ್ದರು.
ಇದೀಗ ಸರ್ಕಾರ ನಗರ ಮತ್ತು ಪಪಂ ವ್ಯಾಪ್ತಿಯಲ್ಲಿ ವರ್ತುಲ ನಿರ್ಮಾಣದ ಮಹತ್ವದ ಕಾರ್ಯ ಯೋಜನೆ ರೂಪಿಸಿ ಕೊಟ್ಟೂರು ಸೇರಿದಂತೆ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಮತ್ತು ಕಮಲಾಪುರ ಪಟ್ಟಣಗಳನ್ನು ಆಯ್ಕೆ ಮಾಡಿಕೊಂಡು ವರ್ತುಲ ರಸ್ತೆ ನಿರ್ಮಾಣದ ರೂಪರೇಷ ತಯಾರಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯಗಳಿಗೆ ಸೂಚಿಸಿರುವ ಹಿನ್ನೆಲೆ ನಗರಾಭಿವೃದ್ಧಿ ಇಲಾಖೆ ಈ ಸಂಬಂಧ ಇಲ್ಲಿನ ಜನತೆಯ ಆಕ್ಷೇಪಣೆ ಸಲ್ಲಿಸಲು ಸಮಯ ನಿಗದಿಗೊಳಿಸಿತ್ತು. ಈ ಅವಧಿ ಈಗಾಗಲೇ ಮುಕ್ತಾಯಗೊಂಡಿರುವುದರಿಂದ ಈ ಯೋಜನೆ ಶೀಘ್ರ ಕಾರ್ಯ ರೂಪ ಪಡೆಯುತ್ತದೆ ಎಂಬ ಆಶಾ ಭಾವನೆ ಜನತೆ ಹೊಂದಿದ್ದಾರೆ.ಪಪಂ ವ್ಯಾಪ್ತಿಯಿಂದ ವರ್ತುಲ ರಸ್ತೆ ಬ್ರೀಡ್ ಪ್ಲಾನ್ ತಯಾರುಗೊಂಡಿದ್ದು, ಯಾವ ಯಾವ ಪ್ರದೇಶದ ಮೂಲಕ ಹಾದು ಹೋಗುತ್ತದೆ ಎಂಬ ವಿವರ ಸಾರ್ವಜನಿಕವಾಗಿ ಪ್ರಕಟಿಸಿದೆ. ಜತೆಗೆ ಯಾವ ಮಾರ್ಗದಲ್ಲಿ ರಿಂಗ್ ರೋಡ್ ನಿರ್ಮಾಣವಾಗುತ್ತದೆ ಎಂಬ ಪರಿಚಯ ವಿವರಿಸಿದೆ.
ಈಗಾಗಲೇ ಸರ್ಕಾರದ ಸೂಚಿಯಂತೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಗೆ ಪಪಂ ಕಾರ್ಯಾಲಯದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದರ ಕಾಲಾವಧಿ ಇದೀಗ ಮುಕ್ತಾಯಗೊಂಡಿದ್ದು, ಯೋಜನೆಯ ಸಂಪೂರ್ಣ ಮಾಹಿತಿ ಮತ್ತು ಗ್ರಿಡ್ ಯೋಜನೆಯ ಮತ್ತಷ್ಟು ವಿವರ ಪಡೆದುಕೊಳ್ಳಲು ಪ್ರತಿಯೊಬ್ಬರಿಗೂ ಪಪಂ ಕಾರ್ಯಾಲಯ ಅವಕಾಶ ಕಲ್ಪಿಸಿ ಕೊಟ್ಟಿದೆ.
ಕೊಟ್ಟೂರು ಜನತೆಯ ಬಹು ದಿನದ ಬೇಡಿಕೆಯಾಗಿದ್ದ ವರ್ತುಲ ರಸ್ತೆ ನಿರ್ಮಾಣ ಕಾರ್ಯ ಇದೀಗ ಕಾರ್ಯರೂಪ ಪಡೆಯುವತ್ತ ಮುಂದಾಗಿರುವುದು ಸಂತೋಷದ ಸಂಗತಿ. ಪದೇ ಪದೇ ಪಟ್ಟಣದ ರಸ್ತೆಗಳಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಮತ್ತು ವಾಹನಗಳ ಸಂಚಾರದ ದಟ್ಟನೆ ಈ ರಸ್ತೆಯ ಮೂಲಕ ಕಡಿಮೆಯಾಗಲಿದೆ ಎಂದು ಕೊಟ್ಟೂರು ವಾಹನ ಮಾಲೀಕ ಮಲ್ಲಿಕಾರ್ಜುನ ತಿಳಿಸಿದ್ದಾರೆ.