ವೃದ್ಧಾಶ್ರಮಗಳ ಹೆಚ್ಚಳ ಅನಾಗರಿಕ ಸಂಸ್ಕೃತಿಯ ಪ್ರತೀಕ

KannadaprabhaNewsNetwork |  
Published : Sep 16, 2026, 02:15 AM IST
ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಬಳ್ಳಾರಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ’ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಮಾತನಾಡಿದರು.  | Kannada Prabha

ಸಾರಾಂಶ

ಎಲ್ಲ ಧರ್ಮಗಳ ದಾರ್ಶನಿಕರು ಹಾಗೂ ಆದರ್ಶ ವ್ಯಕ್ತಿಗಳ ಸಂದೇಶಗಳಲ್ಲಿರುವ ಮೌಲ್ಯ ಸಮಾಜಕ್ಕೆ ಪರಿಚಯಿಸುವುದು ಜಮಾತೆ ಇಸ್ಲಾಮಿ ಹಿಂದ್‌ನ ಉದ್ದೇಶವಾಗಿದೆ. ಪರಸ್ಪರರನ್ನು ಅರ್ಥ ಮಾಡಿಕೊಂಡು ಸಹಬಾಳ್ವೆ ನಡೆಸಬೇಕು

ಬಳ್ಳಾರಿ: ಒಂದು ಸುಳ್ಳನ್ನು ಹಲವು ಬಾರಿ ಹೇಳಿ ಅದನ್ನೇ ಸತ್ಯವೆಂದು ಬಿಂಬಿಸುವಂತಹ ಸಮಾಜದಲ್ಲಿ ನಾವಿದ್ದೇವೆ. ಹೀಗಾಗಿ ಸತ್ಯ, ನ್ಯಾಯ ಹಾಗೂ ಶಾಂತಿಯ ಮೌಲ್ಯ ಎತ್ತಿ ಹಿಡಿಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಬಳ್ಳಾರಿ ಜಿಲ್ಲಾ ಘಟಕದಿಂದ ಸೋಮವಾರ ಆಯೋಜಿಸಿದ್ದ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾದಕ ವಸ್ತು ಸೇವನಾ ಮುಕ್ತ ಸಮಾಜ ನಿರ್ಮಾಣ, ಬಡ್ಡಿ ವ್ಯವಹಾರದ ವಿರೋಧ, ಮಹಿಳೆಯರ ಸ್ವಾತಂತ್ರ್ಯ ಹಾಗೂ ಪ್ರತಿಯೊಬ್ಬ ಮಾನವನ ಹಕ್ಕುಗಳ ಪ್ರತಿಪಾದನೆ ಸೇರಿದಂತೆ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದರು ಒತ್ತು ನೀಡಿದ್ದರು. ಕರುಣೆ ಮತ್ತು ಪ್ರೀತಿ ಬತ್ತಿ ಹೋಗುತ್ತಿರುವ ಸಮಾಜ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ವಿದ್ಯಾವಂತರು ಹೆಚ್ಚಾದಂತೆ ವೃದ್ಧಾಶ್ರಮಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಅನಾಗರಿಕ ಸಂಸ್ಕೃತಿಯ ಪ್ರತೀಕ ಎಂದು ಹೇಳಿದರು.

ಕ್ರೈಸ್ತ ಧರ್ಮಗುರು ಫಾದರ್ ಮ್ಯಾಕ್ಸಿಮ್ ಮಾತನಾಡಿ, ಎಲ್ಲ ಧರ್ಮಗಳ ದಾರ್ಶನಿಕರು ಹಾಗೂ ಆದರ್ಶ ವ್ಯಕ್ತಿಗಳ ಸಂದೇಶಗಳಲ್ಲಿರುವ ಮೌಲ್ಯ ಸಮಾಜಕ್ಕೆ ಪರಿಚಯಿಸುವುದು ಜಮಾತೆ ಇಸ್ಲಾಮಿ ಹಿಂದ್‌ನ ಉದ್ದೇಶವಾಗಿದೆ. ಪರಸ್ಪರರನ್ನು ಅರ್ಥ ಮಾಡಿಕೊಂಡು ಸಹಬಾಳ್ವೆ ನಡೆಸಬೇಕು ಎಂದರು.

ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಕೆ.ವಿ. ರವಿಶಂಕರ್ ಮಾತನಾಡಿದರು.

ವಾಲ್ಮೀಕಿ ಗುರುಕುಲಾಶ್ರಮ ಜೀರ್ಣೋದ್ಧಾರ ಸಂಸ್ಥೆಯ ಅಧ್ಯಕ್ಷ ಯು.ಶಿವಾನಂದ ಮಾತನಾಡಿ, ನೆರೆಯವರೊಂದಿಗೆ ಉತ್ತಮ ಸಂಬಂಧ ಹೊಂದದೆ ಯಾವುದೇ ಧಾರ್ಮಿಕ ಕೈಂಕರ್ಯ ಮಾಡಿದರೂ ಅದು ವ್ಯರ್ಥ ಎಂದರು.

ಎ.ಎಸ್.ಎಂ.ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಗೋವಿಂದರಾಜ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗಳು ಮನುಷ್ಯನ ಮನಸ್ಸನ್ನು ಸಂಸ್ಕರಿಸುವ ಮಾರ್ಗ ತೋರಿಸಿವೆ. ಆದರೆ ಧರ್ಮದ ಮೂಲ ಉದ್ದೇಶ ಅರಿಯದೆ ಸ್ವಾರ್ಥ ಸಾಧನೆಗಾಗಿ ಧರ್ಮ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಮುಸ್ಲಿಂ ಧರ್ಮಗುರು ಖಾಜಿ ಮೊಹಮ್ಮದ್ ಸಿದ್ದಿಕಿ ಮಕ್ಕಳು ತಂದೆ-ತಾಯಿಯ ಮಾತನ್ನು ಪಾಲಿಸುವಂತೆ ಸಂಸ್ಕಾರವಂತರಾಗಿ ಬೆಳೆಸುವುದು ಪೋಷಕರ ದೊಡ್ಡ ಜವಾಬ್ದಾರಿ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವುದೇ ತಂದೆ-ತಾಯಿಗಳು ಗಳಿಸುವ ಪುಣ್ಯದ ಸಂಪಾದನೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಮಾತನಾಡಿದರು. ವೇದಿಕೆಯಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ಲು ಬಿ. ಚಂದ್ರಶೇಖರ ಆಚಾರ್, ಬೌದ್ಧ ಧರ್ಮಗುರು ಕಮಲ ರತ್ನ ಬಂತೇಜಿ, ಶ್ವೇತಾಂಬರ ತೇರಾಪಂಥ್ ಅಧ್ಯಕ್ಷ ಹರೀಶ್ ಜೈನ್, ಸಿಖ್ ಸಮಾಜದ ಮುಖಂಡ ಸುರೀಂದರ್ ಸಿಂಗ್, ಜಮಾತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಅನ್ವರ್ ಪಾಷ ಉಮರಿ, ಜಿಲ್ಲಾ ಸಂಚಾಲಕ ಸೈಯದ್ ಜೈನುಲ್ಲಾಬಿದೀನ್ ಖಾದ್ರಿ ಹಾಗೂ ತಾಲೂಕು ಘಟಕದ ಅಧ್ಯಕ್ಷ ಸೈಯದ್ ನಿಜಾಮುದ್ದೀನ್ ಉಪಸ್ಥಿತರಿದ್ದರು.

ಮುಹಮ್ಮದ್ ಖಲೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಯದ್ ಮಿಸ್ಬಾಹುದ್ದೀನ್ ಖಾದ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಪಂಚಾಯತ್ ಮಹಿಳಾ ಕಬಡ್ಡಿ ತಂಡಕ್ಕೆ ದ್ವಿತೀಯ ಸ್ಥಾನ
ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ