ಹೂವಿನಹಡಗಲಿ: ಹಿಂದಿನ ಕಾಲದಲ್ಲಿ ಸುಶಿಕ್ಷಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇತ್ತು, ಆದರೂ ಅನಾಥಾಶ್ರಮ, ವೃದ್ಧಾಶ್ರಮಗಳ ಸಂಖ್ಯೆಯ ಕಡಿಮೆಯಾಗಿತ್ತು. ಆದರೆ ಇಂದು ಸುಶಿಕ್ಷಿತರೂ ಸಂಖ್ಯೆ ಹೆಚ್ಚಿದೆ, ಅಷ್ಟೇ ಪ್ರಮಾಣದಲ್ಲಿ ಅನಾಥಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ತೀರಾ ಕಳವಳಕಾರಿ ವಿಷಯ ಎಂದು ನಿವೃತ್ತ ಪ್ರಾಚಾರ್ಯ ಎಂ.ಪಿ.ಎಂ. ಶಾಂತವೀರಯ್ಯ ಹೇಳಿದರು.
ಇಂದು ಯುವಕರಲ್ಲಿ ಮನೆಯಲ್ಲಿನ ಹಿರಿಯ ಸ್ಮರಣೆ, ಗೌರವ ಕಡಿಮೆಯಾಗುತ್ತಿದೆ, ತಂದೆ, ತಾಯಿ ಹಾಗೂ ಗುರುಗಳೇ ನಮ್ಮ ಮುಂದಿರುವ ಜೀವಂತ ದೇವರುಗಳು, ಎಲ್ಲರಲ್ಲಿಯೂ ತ್ಯಾಗ ಮನೋಭಾವನೆ ಹಾಗೂ ಕರುಣೆ ಇಲ್ಲದಂತಾಗಿದೆ. ಮೊಬೈಲ್ ಸಂಸ್ಕೃತಿಯಿಂದ ದೂರ ಉಳಿಯಬೇಕು, ಅದನ್ನು ಜ್ಞಾನಾರ್ಜನೆಗೆ ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಜಿಬಿಆರ್ ಪದವಿ ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಮಾತನಾಡಿ, ಈವರೆಗೂ ಜಿಬಿಆರ್ ಕಾಲೇಜಿಗೆ ಶಿಕ್ಷಣ ಪ್ರೇಮಿಗಳಿಂದ ₹7 ಲಕ್ಷಗಳ ನಿಧಿ ಸಂಗ್ರಹವಾಗಿದೆ. ಪಟ್ಟಣದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಿರ್ಮಾಣಕ್ಕೆ ದಾನಿಗಳ ಕೊಡುಗೆ ಅಪಾರವಾಗಿದೆ. ಜಿಬಿಆರ್ ಕಾಲೇಜು, ಜಿಪಿಜಿ ಕಾಲೇಜು, ಎಸ್‌ಕೆಜಿಜಿ ಕಾಲೇಜು, ಟಿಡಿವಿ ಶಾಲೆ, ಎಸ್‌ಪಿವಿ ಶಾಲೆ, ಪಾಟೀಲ್ ಅಂದಾನಗೌಡ್ರ ಶಾಲೆ ಹೀಗೆ ಅನೇಕ ಶಾಲೆಗಳಿಗೆ ಭೂದಾನ ಮಾಡಿದ್ದಾರೆ. ಇದರಿಂದ ಬಡ ಮಕ್ಕಳು ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ ಎಂದರು.ನಿವೃತ್ತ ಪ್ರಾಚಾರ್ಯ ಡಾ. ಕೆ.ರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದತ್ತಿ ನಿಧಿ ಪ್ರೋತ್ಸಾಹ ಧನ ಸಹಕಾರಿಯಾಗುತ್ತದೆ. ವಿವಿಧ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯೆ ಕಮಲಾ ಸೊಪ್ಪಿನ, ತತ್ವಗೀತೆ ಗಾಯಕ ಪರಮೇಶ್ವರಪ್ಪ, ಡಾ. ಸೊಪ್ಪಿನ ಬಸಲಿಂಗಪ್ಪ, ಪಿಯು ಕಾಲೇಜು ಪ್ರಾಚಾರ್ಯ ಅಮರೇಗೌಡ ಅನ್.ಪಾಟೀಲ್, ವಿಜಯ ಪಂಪಣ್ಣ, ಡಿ.ಕೆ.ಎನ್.ಚೆನ್ನಬಸಯ್ಯ ಸೇರಿದಂತೆ ಸೊಪ್ಪಿನ ಕುಟುಂಬಸ್ಥರು ಇತರರಿದ್ದರು.