ಕನ್ನಡ ನಾಡು-ನುಡಿ ಸೇವೆಗಾಗಿ ಬಣಗಳ ಪೈಪೋಟಿ!

KannadaprabhaNewsNetwork |  
Published : May 07, 2025, 12:52 AM IST
ಕರ್ನಾಟಕ ವಿದ್ಯಾವರ್ಧಕ ಸಂಘ. | Kannada Prabha

ಸಾರಾಂಶ

ನಾಡು- ನುಡಿ ಸೇವೆಯನ್ನೇ ಪ್ರಧಾನ ಉದ್ದೇಶವಾಗಿಟ್ಟು 130 ವರ್ಷಗಳ ಹಿಂದೆ ಶುರುವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಮುಂದಿನ ಮೂರು ವರ್ಷಗಳ ಅವಧಿಗಾಗಿ ನಡೆಯಲಿರುವ ನೂತನ ಪದಾಧಿಕಾರಿಗಳ ಚುನಾವಣೆಗೆ ಮೇ 25ರಂದು ಮಹೂರ್ತ ನಿಗದಿಯಾಗಿದ್ದು, ಕನ್ನಡದ ಸೇವೆಗಾಗಿ ವಿವಿಧ ಬಣಗಳ ಪೈಪೋಟಿ ಶುರುವಾಗಿದೆ.

ಧಾರವಾಡ: ಸಮಾಜ ಸೇವೆ ಮಾಡಲು ರಾಜಕಾರಣಿಗಳು ಚುನಾವಣೆಗೆ ಹೇಗೆ ಪೈಪೋಟಿ ನಡೆಸುತ್ತಾರೆಯೋ ಅದೇ ಮಾದರಿಯಲ್ಲಿ ಧಾರವಾಡದ ಐತಿಹಾಸಿಕ ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕವೇ ಕನ್ನಡದ ಸೇವೆಗೆ ಅಣಿಯಾಗಲು ಇದೀಗ ದೊಡ್ಡ ದೊಡ್ಡ ಪಡೆಗಳು ಸಂಘದ ಸದಸ್ಯರುಗಳ ಎದುರು ಪರೇಡ್‌ ನಡೆಸುತ್ತಿವೆ.

ನಾಡು- ನುಡಿ ಸೇವೆಯನ್ನೇ ಪ್ರಧಾನ ಉದ್ದೇಶವಾಗಿಟ್ಟು 130 ವರ್ಷಗಳ ಹಿಂದೆ ಶುರುವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಮುಂದಿನ ಮೂರು ವರ್ಷಗಳ ಅವಧಿಗಾಗಿ ನಡೆಯಲಿರುವ ನೂತನ ಪದಾಧಿಕಾರಿಗಳ ಚುನಾವಣೆಗೆ ಮೇ 25ರಂದು ಮಹೂರ್ತ ನಿಗದಿಯಾಗಿದ್ದು, ಕನ್ನಡದ ಸೇವೆಗಾಗಿ ವಿವಿಧ ಬಣಗಳ ಪೈಪೋಟಿ ಶುರುವಾಗಿದೆ.

ಮಾಜಿ ಶಾಸಕ, ಸಂಘದ ಹಾಲಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಹಾಲಿ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನೇತೃತ್ವದ ಒಂದು ತಂಡ, ಹಿರಿಯ ರಾಜಕಾರಣಿ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮೋಹನ ಲಿಂಬಿಕಾಯಿ, ಪ್ರಧಾನ ಕಾರ್ಯದರ್ಶಿ ಆಕಾಂಕ್ಷಿ, ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ನೇತೃತ್ವದಲ್ಲಿ ಮತ್ತೊಂದು ತಂಡ ಚುನಾವಣೆಗೆ ಏನೆಲ್ಲಾ ಸಿದ್ಧತೆ ನಡೆಸಬೇಕೋ ಅದೆಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದು, ಸಂಘದ ಮತದಾರರ ಮನವೊಲಿಸಲು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ.

ಹುಣಸೀಮರದ ಸ್ಪರ್ಧೆ?: ಆದರೆ, ಈ ಎರಡು ತಂಡ ಹೊರತುಪಡಿಸಿ ಜೆಡಿಎಸ್‌ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹವಣಿಸುತ್ತಿದ್ದಾರೆ. ಸಂಘದ ಚುಕ್ಕಾಣಿ ಹಿಡಿಯುವವರು ಕನ್ನಡದ ಸೇವಕರಾಗಿರಬೇಕೆ ಹೊರತು ರಾಜಕಾರಣಿಗಳಲ್ಲ. ಅಲ್ಲೂ ರಾಜಕಾರಣಿಗಳು ಸ್ಪರ್ಧಿಸುವುದಾದರೆ ನಾನು ಸಹ ಸಿದ್ಧ. ಈ ಬಾರಿಯಾದರೂ ಸಂಘಕ್ಕೆ ರಾಜಕಾರಣಿಗಳನ್ನು ಬಿಟ್ಟುಕೊಳ್ಳದೇ ಸಂಘದ ಹಿತದೃಷ್ಟಿಯಿಂದ ನಾಡು-ನುಡಿಗಾಗಿ ಶ್ರಮಿಸಿದವರೆಗೆ ಅವಕಾಶ ಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಇವರನ್ನು ಹೊರತು ಪಡಿಸಿ ಸ್ವತಂತ್ರ್ಯವಾಗಿಯೂ ಕೆಲವರು ಚುನಾವಣೆ ಎದುರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

9ರಿಂದ ಚುನಾವಣಾ ಕಾರ್ಯ: ಇದೇ ಮೇ 25ರಂದು ಚುನಾವಣೆ ನಡೆಯಲಿದ್ದು, ಚುನಾವಣಾಧಿಕಾರಿಯಾಗಿ ಸಿ.ಎಸ್. ನೇಗಿನಹಾಳ ಅವರನ್ನು ನೇಮಿಸಲಾಗಿದೆ. ಮೇ 9ರಿಂದ ಅಧಿಕೃತವಾಗಿ ಚುನಾವಣಾ ಕಾರ್ಯಗಳು ಶುರುವಾಗಲಿವೆ.

ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಾಧ್ಯಕ್ಷ, ಕೋಶಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿ ಸಾಮಾನ್ಯ ಸದಸ್ಯರು 7 ಹಾಗೂ ಎಸ್.ಸಿ./ಎಸ್.ಟಿ-1, ಮಹಿಳೆ-1 ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ಜರುಗಲಿದೆ.

ಮೇ 9 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಮೇ 13 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮೇ 14 ಸಂಜೆ 4.30 ರಿಂದ 7ರ ವರೆಗೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಮೇ 16 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಮೇ 17 ರ ಬೆಳಗ್ಗೆ 10ಕ್ಕೆ ಅಂತಿಮವಾಗಿ ಕಣದಲ್ಲಿದ್ದವರ ಪಟ್ಟಿ ಪ್ರಕಟವಾಗಲಿದ್ದು ಮೇ 25 ಮುಂಜಾನೆ 7 ರಿಂದ ಸಂಜೆ 5ರ ವರೆಗೆ ಚುನಾವಣೆ ಸಂಘದ ಕಟ್ಟಡಗಳಲ್ಲಿ ನಡೆಯಲಿದೆ. ಮೇ 26 ಬೆಳಗ್ಗೆ 9 ರಿಂದ ಮತ ಎಣಿಕೆ ಕಾರ್ಯ ಸಂಘದ ಸಭಾಭವನಗಳಲ್ಲಿಯೇ ನಡೆಯಲಿದ್ದು, ಮತಗಳ ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

ಸಂಘದ ನಿಯಮಾವಳಿ ಪ್ರಕಾರ ಸದಸ್ಯತ್ವ ಸಂಖ್ಯೆ 9 ಸಾವಿರಕ್ಕೂ ಹೆಚ್ಚಿದ್ದು, ಸಂಘದ ಸದಸ್ಯತ್ವ ಪಡೆದು, ಮೂರು ವರ್ಷ ಅವಧಿ ಪೂರ್ಣಗೊಂಡ ಸದಸ್ಯರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ ಎಂದು ಚುನಾವಣಾಧಿಕಾರಿ ನೇಗಿನಹಾಳ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ