ಯೋಜನೆಯ ಕ್ರೆಡಿಟ್‌ಗಾಗಿ ಹಾಲಿ ಮಾಜಿ ಶಾಸಕರ ನಡುವೆ ಪೈಪೋಟಿ

KannadaprabhaNewsNetwork |  
Published : Oct 01, 2026, 01:45 AM IST
30ಎಚ್ಎಸ್ಎನ್12ಎ : ತಮ್ಮ ಬೆಂಬಲಿಗರೊಂದಿಗೆ ನಿಂತಿದ್ದ ಮಾಜಿ ಶಾಸಕ ಪ್ರೀತಂ ಗೌಡ. | Kannada Prabha

ಸಾರಾಂಶ

ಶಾಸಕ ಎಚ್.ಪಿ. ಸ್ವರೂಪ್‌ ಪ್ರಕಾಶ್ ಅವರು ವಿಧಾನಸಭೆಯಲ್ಲಿಯೂ ಯೋಜನೆಗೆ ಶೀಘ್ರ ಚಾಲನೆ ನೀಡಿ ನೀರು ಹರಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಕ್ಯಾತನಹಳ್ಳಿ ಪಂಪ್‌ಹೌಸ್‌ನಲ್ಲಿ ಸಾಂಕೇತಿಕವಾಗಿ ನೀರು ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿತ್ತು. ಹಾಲಿ ಶಾಸಕ ಎಚ್. ಪಿ. ಸ್ವರೂಪ್‌ ಪ್ರಕಾಶ್ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಇಬ್ಬರೂ ತಮ್ಮ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿದ್ದರಿಂದ ಪಂಪ್‌ಹೌಸ್ ಸುತ್ತ ಹಠಾತ್‌ ರಾಜಕೀಯ ಬೆಳವಣಿಗೆಗಳು ಉಂಟಾದವು.

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಂತೆ ಕ್ಯಾತನಹಳ್ಳಿ ಏತನೀರಾವರಿ ಯೋಜನೆಯಿಂದ ಬುಧವಾರ ಸಾಂಕೇತಿಕವಾಗಿ ನೀರು ಹರಿದಿದೆ. ಆದರೆ, ಯೋಜನೆಯ ಕ್ರೆಡಿಟ್‌ ಪಡೆಯುವಲ್ಲಿ ಹಾಲಿ(ಸ್ವರೂಪ್‌) ಮತ್ತು ಮಾಜಿ (ಪ್ರೀತಂ ಗೌಡ) ಶಾಸಕರ ನಡುವೆ ಪೈಪೋಟಿ ಉಂಟಾಗಿದೆ.

ಯಗಚಿ ಜಲಾಶಯದಿಂದ ಹಾಸನ ತಾಲೂಕಿನ ೧೩ ಗ್ರಾಮಗಳ ೨೧ ಕೆರೆಗಳಿಗೆ ನೀರು ಹರಿಸುವ ಉದ್ದೇಶದಿಂದ ರೂಪಿಸಲಾಗಿರುವ ಕ್ಯಾತನಹಳ್ಳಿ ಏತನೀರಾವರಿ ಯೋಜನೆ ೨೦೧೯ರವರೆಗೆ ಕಾರ್ಯನಿರ್ವಹಿಸಿತ್ತು. ಬಳಿಕ ಸುಮಾರು ₹೧.೮೯ ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿದ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿತ್ತು. ಇದರಿಂದ ಯೋಜನೆ ವ್ಯಾಪ್ತಿಯ ರೈತರು ಹಲವು ವರ್ಷಗಳಿಂದ ನೀರಿಗಾಗಿ ಕಾಯುವಂತಾಗಿತ್ತು. ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಕೆರೆಗಳಿಗೆ ನೀರು ಹರಿಸಬೇಕೆಂದು ರೈತರು ಒತ್ತಾಯಿಸಿದ್ದರು. ಸೆಪ್ಟೆಂಬರ್‌ ೩೦ರೊಳಗೆ ನೀರು ಹರಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದರು. ರೈತರ ಹೋರಾಟಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ಅವರು ಧರಣಿ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಶಾಸಕ ಎಚ್.ಪಿ. ಸ್ವರೂಪ್‌ ಪ್ರಕಾಶ್ ಅವರು ವಿಧಾನಸಭೆಯಲ್ಲಿಯೂ ಯೋಜನೆಗೆ ಶೀಘ್ರ ಚಾಲನೆ ನೀಡಿ ನೀರು ಹರಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಕ್ಯಾತನಹಳ್ಳಿ ಪಂಪ್‌ಹೌಸ್‌ನಲ್ಲಿ ಸಾಂಕೇತಿಕವಾಗಿ ನೀರು ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿತ್ತು. ಹಾಲಿ ಶಾಸಕ ಎಚ್. ಪಿ. ಸ್ವರೂಪ್‌ ಪ್ರಕಾಶ್ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಇಬ್ಬರೂ ತಮ್ಮ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿದ್ದರಿಂದ ಪಂಪ್‌ಹೌಸ್ ಸುತ್ತ ಹಠಾತ್‌ ರಾಜಕೀಯ ಬೆಳವಣಿಗೆಗಳು ಉಂಟಾದವು. ಮಾಜಿ ಶಾಸಕ ಪ್ರೀತಂ ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಪಂಪ್‌ಹೌಸ್ ಒಳಗೆ ತೆರಳಿ ಕುಳಿತಿದ್ದರೆ, ಶಾಸಕ ಸ್ವರೂಪ್‌ ಪ್ರಕಾಶ್ ಅವರು ಆರಂಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಂಪ್‌ ಹೌಸ್ ಹೊರಭಾಗದಲ್ಲಿ ನಿಂತಿದ್ದರು. ನೀರು ಬಿಡುಗಡೆಗೆ ಚಾಲನೆ ನೀಡುವ ಬಟನ್ ಒತ್ತುವ ಅವಕಾಶ ಯಾರಿಗೆ ಸಿಗಬೇಕು ಎಂಬ ವಿಚಾರದಲ್ಲಿ ಎರಡೂ ಬಣಗಳ ನಡುವೆ ಪೈಪೋಟಿ ಕಂಡುಬಂದಿತು. ಈ ನಡುವೆ ವಿದ್ಯುತ್ ಸಂಪರ್ಕದಲ್ಲಿದ್ದ ತಾಂತ್ರಿಕ ಸಮಸ್ಯೆ ನಿವಾರಿಸಲು ಎಲೆಕ್ಟ್ರಿಷಿಯನ್‌ಗಳು ಹರಸಾಹಸಪಟ್ಟರು. ಇದರಿಂದ ನಿಗದಿತ ಸಮಯಕ್ಕೆ ನೀರು ಹರಿಸುವ ಕಾರ್ಯ ಆರಂಭವಾಗುವುದೇ ಎಂಬ ಕುತೂಹಲವೂ ರೈತರಲ್ಲಿ ಮೂಡಿತ್ತು. ಸ್ವಾಮೀಜಿ ಮಧ್ಯಸ್ಥಿಕೆ:ಸಾಂಕೇತಿಕವಾಗಿ ನೀರು ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಪುಷ್ಟಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಆಗಮಿಸಿದ್ದರು. ಸ್ವಾಮೀಜಿ ಪಂಪ್‌ಹೌಸ್‌ಗೆ ಆಗಮಿಸಿದ ಬಳಿಕ ಶಾಸಕ ಸ್ವರೂಪ್‌ ಪ್ರಕಾಶ್ ಒಳಗೆ ತೆರಳಿ ಅವರೊಂದಿಗೆ ಕುಳಿತರು. ನಂತರ ಸ್ವಾಮೀಜಿ ಅವರು ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಕರೆತಂದು ಇಬ್ಬರನ್ನೂ ಒಂದೇ ಕಡೆ ಕೂರಿಸಿದರು. ಕೊನೆಗೆ ಸ್ವಾಮೀಜಿ ಅಲ್ಲಿಂದ ವಾಪಸ್ ನಡೆದರು. ಈ ವೇಳೆ ಉಭಯ ನಾಯಕರ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರವಾಗಿ ಜೈಕಾರ ಕೂಗಿ, ಶಿಳ್ಳೆ ಹಾಗೂ ಚಪ್ಪಾಳೆ ತಟ್ಟಿದರು. ಹಾಲಿ-ಮಾಜಿ ಶಾಸಕರ ಜಟಾಪಟಿಯ ನಡುವೆ ನೀರಾವರಿ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಹರಸಾಹಸಪಟ್ಟರು. ಅಂತಿಮವಾಗಿ ತಾಂತ್ರಿಕ ಸಮಸ್ಯೆ ನಿವಾರಿಸಿ ಸಾಂಕೇತಿಕ ನೀರು ಬಿಡುಗಡೆಗೆ ಚಾಲನೆ ನೀಡುವ ಕ್ಷಣಕ್ಕಾಗಿ ಸ್ಥಳದಲ್ಲಿ ಎರಡೂ ಬಣಗಳ ಬೆಂಬಲಿಗರು ಕಾದು ಕುಳಿತಿದ್ದರು. ಕೊನೆಯಲ್ಲಿ ಹಾಲಿ ಶಾಸಕರೇ ಬಟನ್‌ ಒತ್ತಿ ನೀರು ಬಿಡುಗಡೆ ಮಾಡಿದ್ದಾರೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು: ಪಿ.ಎಂ.ನರೇಂದ್ರಸ್ವಾಮಿ
ಅಂಕಗಳು ಕಲಿಕೆಯ ಒಂದು ಭಾಗವೇ ಹೊರತು ಅದೇ ಶಿಕ್ಷಣದ ಮೂಲ ಗುರಿಯಲ್ಲ