ನದಿ ವಿವಾದ ಪ್ರಧಾನಿಗೆ ಮನವರಿಕೆ: ದೇವೇಗೌಡ

KannadaprabhaNewsNetwork |  
Published : Jun 22, 2025, 11:47 PM ISTUpdated : Jun 23, 2025, 08:46 AM IST
Deve gowda  3 | Kannada Prabha

ಸಾರಾಂಶ

ಅಂತರ್‌ ರಾಜ್ಯ ನದಿ ನೀರಿನ ವಿವಾದಗಳಿಗೆ ಸಂಬಂಧಿಸಿ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ. ಪ್ರಧಾನಿ ಮೋದಿ ಅವರಿಗೆ ವಾಸ್ತವ ಮನವರಿಕೆ ಮಾಡಿಕೊಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಭರವಸೆ ನೀಡಿದ್ದಾರೆ.

 ಬೆಂಗಳೂರು :  ಅಂತರ್‌ ರಾಜ್ಯ ನದಿ ನೀರಿನ ವಿವಾದಗಳಿಗೆ ಸಂಬಂಧಿಸಿ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ. ಪ್ರಧಾನಿ ಮೋದಿ ಅವರಿಗೆ ವಾಸ್ತವ ಮನವರಿಕೆ ಮಾಡಿಕೊಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಭರವಸೆ ನೀಡಿದ್ದಾರೆ.

ಎಚ್‌.ಡಿ.ದೇವೇಗೌಡ ಅಭಿನಂದನಾ ಸಮಿತಿಯಿಂದ ಸುಮ್ಮನಹಳ್ಳಿ ಜಂಕ್ಷನ್‌ ಸಮೀಪದ ಡಾ। ಬಾಬು ಜಗಜೀವನ್‌ ರಾಮ್‌ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ವಯೋಸಹಜತೆಯಿಂದ ನನಗೆ ಕಾಲು ನೋವು ಇದೆ. ಆದರೆ ಪಾರ್ಲಿಮೆಂಟ್‌ನಲ್ಲಿ ಹೋರಾಡುವ ಶಕ್ತಿ ಇನ್ನೂ ಇದೆ. ರಾಜ್ಯದ ನದಿ ನೀರಿನ ವಿವಾದಗಳಿಗೆ ಸಂಬಂಧಿಸಿ ಮೋದಿ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ವಾಸ್ತವಾಂಶವನ್ನು ಅವರ ಮುಂದಿಟ್ಟು ನನ್ನ ಜನರಿಗೆ ಆಗುವ ಅನ್ಯಾಯ ಬಗೆಹರಿಸಿ ಎನ್ನುತ್ತೇನೆ. ಯಾರಾದರೂ ವಿವಾದಗಳನ್ನು ಬಗೆಹರಿಸಬಹುದು ಎಂದಿದ್ದರೆ, ಅದು ಮೋದಿ ಅವರೊಬ್ಬರಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ಮೆದುಳಿಗೆ ನೋವಿಲ್ಲ:

ಕಾಲು ನೋವೆಂದು ನನ್ನನ್ನು ಇಲ್ಲಿಗೆ ಎತ್ತಿಕೊಂಡು ಬಂದು ಕೂರಿಸಿದ್ದೀರಿ, ನನ್ನ ಕಾಲಿಗೆ ನೋವಿರಬಹುದು, ಆದರೆ ಮೆದುಳಿಗೆ ನೋವಿಲ್ಲ. ವಿಶ್ವದಲ್ಲೇ ಮೋದಿ ಅವರನ್ನು ಗುರುತಿಸಲಾಗಿದೆ. ಗೋದಾವರಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ಶನಿವಾರ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಸಂಸತ್‌ನಲ್ಲೂ ಹೋರಾಟ ನಡೆಸುತ್ತೇನೆ. ಭಿನ್ನಾಭಿಪ್ರಾಯ ಮರೆತು ಎಲ್ಲ ಪಕ್ಷದವರೂ ಹೋರಾಡೋಣ. ಇಲ್ಲದಿದ್ದರೆ, ನಾನು ಹೋದ ಮೇಲೆ ನನ್ನ ಜನ ತಲೆತಲಾಂತರದವರೆಗೂ ನೋವು ಅನುಭವಿಸುವುದನ್ನು ಈ ಆತ್ಮ ನೋಡಬೇಕಾಗುತ್ತದೆ ಎಂದು ಭಾವುಕರಾಗಿ ನುಡಿದರು.

ದೇವೇಗೌಡರ ಬದುಕು ಮತ್ತು ಸಾಧನೆ ಕುರಿತ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ವಿವಿಧ ಕ್ಷೇತ್ರಗಳ 93 ಸಾಧಕರಿಗೆ ಎಚ್‌.ಡಿ.ದೇವೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದಿಚುಂಚನಗಿರಿ ಮಠದ ಡಾ। ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ, ತುಮಕೂರಿನ ರಾಮಕೃಷ್ಣಾಶ್ರಮದ ವೀರೇಶಾನಂದ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ। ನಿಶ್ಚಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಪತ್ರಕರ್ತ ಸುಗತ ಶ್ರೀನಿವಾಸರಾಜು ಉಪಸ್ಥಿತರಿದ್ದರು.

ಪತ್ನಿ ಸಹಕಾರ ನೆನೆದು ಕಣ್ಣೀರು

ತಮ್ಮ ಜೀವನದಲ್ಲಿ ಪತ್ನಿ ಚನ್ನಮ್ಮ ಅವರು ನೀಡಿದ ಸಹಕಾರ ನೆನೆದು ದೇವೇಗೌಡರು ವೇದಿಕೆಯಲ್ಲಿ ಕಣ್ಣೀರಾದರು. ‘ಶ್ರೀಮತಿ ಚನ್ನಮ್ಮ ಅವರು ಎಲ್ಲ ಹಂತದಲ್ಲೂ ನನ್ನ ಜೊತೆ ನಿಂತಿದ್ದಾರೆ. ಅನೇಕ ಕಷ್ಟದಲ್ಲಿ ಗೌರವ ಉಳಿಸಿದ್ದಾರೆ. ನನ್ನ ಬೆಳವಣಿಗೆಗೆ ಸಾಕಷ್ಟು ಗೌರವ ನೀಡಿದ್ದಾರೆ’ ಎಂದು ಗೌಡರು ಗದ್ಗದಿತರಾದರು.

PREV
Read more Articles on

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ