ಕುಣಿಗಲ್: ಕ್ಯಾಂಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟ ಘಟನೆ ತಾಲೂಕಿನ ರಾಜ್ಯ ಹೆದ್ದಾರಿಯ 33 ಗಿರಿಗೌಡನಪಾಳ್ಯ ಗೇಟ್ ಬಳಿ ನಡೆದಿದೆ. ಮೃತರನ್ನು ಟಿ. ಹೊಸಹಳ್ಳಿ ಗ್ರಾಮದ ಯೋಗನಂದ (25) ಹಾಗೂ ಶ್ರೀನಿವಾಸ್ ಗೌಡ (22) ಎಂದು ಗುರುತಿಸಲಾಗಿದೆ. ಕುಣಿಗಲ್ ಕಡೆಗೆ ಪಲ್ಸರ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹುಲಿಯೂರು ದುರ್ಗದ ಕಡೆಯಿಂದ ಬಂದ ಕ್ಯಾಂಟರ್ ವಾಹನ ಬೈಕ್ ಸವಾರರಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.