ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತುಂಬಿದ ಹತ್ತರಕಿ ಹಳ್ಳ:
ಮಳೆಯಿಂದಾಗಿ ಯರನಾಳದಿಂದ ಬರುವ ತಾಲೂಕಿನ ಹತ್ತರಕಿಹಾಳ ಗ್ರಾಮದ ಬಳಿ ಹತ್ತರಕಿ ಹಳ್ಳ ತುಂಬಿ ಹರಿಯುತ್ತಿದ್ದು, ಶನಿವಾರ ಸಂಜೆ ಅಪಾರ ಪ್ರಮಾಣದ ಮಳೆಯಿಂದಾಗಿ ಗ್ರಾಮದ ಬಳಿಯ ಸೇತುವೆ ಮೇಲೆ ನೀರು ನುಗ್ಗಿತ್ತು. ಇದರಿಂದ ಸುಮಾರು 4-5 ಗಂಟೆಗಳ ಕಾಲ ಗ್ರಾಮಕ್ಕೆ ವಾಹನ ಸಂಪರ್ಕ ಕೂಡ ಕಡಿತಗೊಂಡಿತ್ತು. ವಾಹನ ಸಂಚಾರ ಬಂದ್ ಆದ ಕಾರಣ ಬಸ್ ಮೂಲಕ ಸೇತುವೆವರೆಗೂ ಗ್ರಾಮಕ್ಕೆ ಬಂದ ಜನರನ್ನು ಜೆಸಿಬಿ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆ ಸ್ಥಳಾಂತರ ಮಾಡಲಾಯಿತು.ಮಳೆಯಿಂದಾಗಿ ಹೊಲಗಳಲ್ಲಿನ ಒಡ್ಡು ಒಡೆದಿದ್ದು, ಅಪಾರ ಪ್ರಮಾಣ ಹಾನಿಯಾಗಿದೆ. ಅದರಲ್ಲೂ ಡೋಣಿ ನದಿ ಪಕ್ಕದಲ್ಲಿರುವ ಜಮೀನುಗಳ ಒಡ್ಡು ಒಡೆದು ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಗ್ರಾಮದ ಬಳಿಯಿರುವ ಹತ್ತರಕಿ ಹಳ್ಳದ ಸೇತುವೆಯ ಎತ್ತರವನನ್ನು ಜಾಸ್ತಿ ಮಾಡಿದರೆ ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಗ್ರಾಮದ ಈರಣ್ಣ ಕಲ್ಯಾಣಿ, ಸಂಗಪ್ಪ ಕೌಜಲಗಿ ತಿಳಿಸಿದರು.
ಮಳೆ ವಿವರ:ತಾಲೂಕಿನ ಮಳೆ ಮಾಪನ ಕೇಂದ್ರದಲ್ಲಿ ಭಾನುವಾರ ಬಸವನಬಾಗೇವಾಡಿ ಕೇಂದ್ರದಲ್ಲಿ 41.2 ಎಂ.ಎಂ, ಹೂವಿನಹಿಪ್ಪರಗಿ ಕೇಂದ್ರದಲ್ಲಿ 5.4 ಎಂಎಂ ಮಳೆ ದಾಖಲಾಗಿದೆ. ತಾಲೂಕಿನಲ್ಲಿ ಯರನಾಳ ಗ್ರಾಮದಲ್ಲಿ ಸುರಿದ ಮಳೆಗೆ ಸಿದ್ದವ್ವ ಶ್ರೀಶೈಲ ವಾಲಿಕಾರ, ತಂಗೆವ್ವ ಮಹದೇವಪ್ಪ ಒಂಟಗುಡಿ ಎಂಬುವರ ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ತಿಳಿಸಿದ್ದಾರೆ.