ಕನ್ನಡಪ್ರಭ ವಾರ್ತೆ ಹಾಸನ
ಇದೇ ವೇಳೆ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರದೀಪ್ ಮಾತನಾಡಿ, ತಾಲೂಕಿನ ಸಾಲಗಾಮೆ ಹೋಬಳಿಯ ಸೊಪ್ಪಿನಹಳ್ಳಿ ಗ್ರಾಮದಲ್ಲಿ ಸುಮಾರು ೨೫-೩೦ ವರ್ಷಗಳಿಂದ ಸರ್ಕಾರಿ ಅನುದಾನದಲ್ಲಿ ನಿರ್ಮಿತ ಮನೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಸ್ವಾಮಿ ರಾಮಯ್ಯ ಮತ್ತು ರಮೇಶ್ ರಾಮಯ್ಯ ಅವರ ಕುಟುಂಬಗಳು ಗಂಭೀರ ತೊಂದರೆ ಎದುರಿಸುತ್ತಿವೆ. ಇವರ ಮನೆಗಳಿಗೆ ಹೋಗುವ ದಾರಿಯನ್ನು ಗ್ರಾಮದ ಕೆಲವರು ತಡೆ ಮಾಡುತ್ತಿರುವುದನ್ನು ಖಂಡಿಸಿದರು.
ಮಕ್ಕಳು ಶಾಲೆಗೆ ಹೋಗಲು ದಾರಿ ಬಿಡದೇ ತೊಂದರೆ ನೀಡಿದ್ದು, ಹಲವಾರು ಬಾರಿ ಮಕ್ಕಳಿಗೆ ಹೊಡೆದಿರುವ ಘಟನೆ ನಡೆದಿದ್ದು, ಮಹಿಳೆಯರ ಮೇಲೂ ಅವಾಚ್ಯ ನಿಂದನೆ ಮಾಡಲಾಗಿದೆ ಎನ್ನಲಾಗಿದೆ. ಮನೆ ಹತ್ತಿರದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಸಾಗಾಟ ಮಾಡಲು ಸಹ ಅಡ್ಡಿಪಡಿಸಿರುವುದರಿಂದ ಬೆಳೆ ಹಾನಿಯಾದ ಘಟನೆಗಳೂ ಸಂಭವಿಸಿವೆ. ಇದಲ್ಲದೆ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವುಗೊಂಡಿರುವುದಾಗಿ ದೂರಿದರು. ದಿನನಿತ್ಯ ನಡೆಯುತ್ತಿರುವ ಈ ಅಡ್ಡಿಪಡಿವುದರಿಂದ ಕುಟುಂಬಗಳು ತಮ್ಮ ಮನೆಗಳಿಗೆ ಹೋಗುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವೆ ನಂ. ೨ರಲ್ಲಿ ಇರುವ ಸುಮಾರು ಒಂದು ಗುಂಟೆ ಖಾರಾಬು ಜಾಗವನ್ನು ರಸ್ತೆಗಾಗಿ ಬಳಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಸಂಘಟನೆಯ ಉಪಾಧ್ಯಕ್ಷ ನವೀನ್ ಕುಮಾರ್, ವರುಣ್ ಕುಮಾರ್, ಚನ್ನರಾಯಪಟ್ಟಣ ತಾಲೂಕು ಉಪಾಧ್ಯಕ್ಷ ಸಂತೋಷ್, ತಾಲೂಕು ಅಧ್ಯಕ್ಷ ರವಿ, ಸಿದ್ದೇಶ್, ಕಿರಣ್ ಹಾಗೂ ಸಂಬಂಧಪಟ್ಟ ಕುಟುಂಬದವರು ಉಪಸ್ಥಿತರಿದ್ದರು.