ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಐದು ದೀಪದ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ದ ಘೋಷಣೆ ಕೂಗಿದರು. ಮಳೆ ಇಲ್ಲದೆ ಕೆಆರ್ ಎಸ್ ಜಲಾಶಯ ಬರಿದಾಗಿದ್ದು, ಕುಡಿಯುವ ನೀರಿಗಾಗಿಯೇ ಇಲ್ಲಿನ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದು ಆದೇಶ ಸರಿಯಲ್ಲ. ಸಮಿತಿ ಈ ಆದೇಶವನ್ನು ಮರು ಪರಿಶೀಲನೆ ನಡೆಸಬೇಕು. ರಾಜ್ಯ ಸರಕಾರ ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಒತ್ತಾಯಿಸಿದರು.ಕೆಆರ್ ಎಸ್ ಜಲಾಶಯದ ಹಿನ್ನೀರಿನಲ್ಲಿ ಜಲಾಶಯ ಒತ್ತುವರಿಯಾಗಿದ್ದು, ಮೊದಲಿನಷ್ಟು ನೀರು ಸಂಗ್ರಹವಾಗುತ್ತಿಲ್ಲ. ಜತೆಗೆ ಬೆಂಗಳೂರು, ಮೈಸೂರು, ಮಂಡ್ಯ ಹೀಗೆ ಹಲವು ಜಿಲ್ಲೆಗಳಿಗೆ ಇಲ್ಲಿಂದ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಲಾಗಿದೆ. ಜತೆಗೆ ಮತ್ತೆ 6 ಟಿಎಂಸಿ ನೀರನ್ನು ಬೆಂಗಳೂರು ನಗರಕ್ಕೆ ತೆಗೆದುಕೊಂಡು ಹೋಗಲು ಸರಕಾರ ಯೋಜನೆ ರೂಪಿಸುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಮಂಜುನಾಥ್, ನಾಗರಾಜು, ಅಮೃತಿರಾಜಶೇಖರ, ರಾಮಕೃಷ್ಣ, ವಿಜಿಕುಮಾರ್, ರಘು, ಶಿವಕುಮಾರ್, ಸಂತೋಷ್, ಸೇರಿದಂತೆ ಹಲವರು ಹಾಜರಿದ್ದರು.