ಈ ಬಾರಿ ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಅಣೆಕಟ್ಟೆ ಸಹ ಭರ್ತಿಯಾಗದೆ ಬರದ ಛಾಯೆ ಆವರಿಸಿದೆ. ಇಂತಹ ಪರಿಸ್ಥಿತಿಯನ್ನು ಮಂಡಳಿ ಅವಲೋಕಿಸದೆ ಏಕಾಏಕಿ 15 ದಿನಗಳ ಕಾಲ 4 ಟಿಎಂಸಿ ನೀರು ಹರಿಸುವಂತೆ ಹೇಳಿರುವುದು ಸರಿಯಲ್ಲ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಜಲಾಶಯದಿಂದ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯುಸೆಕ್ ನೀರು ಹರಿಸಲು ಕಾವೇರಿ ನಿರ್ವಹಣಾ ಮಂಡಳಿ ಆದೇಶ ಮಾಡಿರುವ ವಿರುದ್ಧ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ತಟ್ಟೆ, ಬಟ್ಟಲು ಹಿಡಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಕುವೆಂಪು ವೃತ್ತದ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸೇರಿದ ಕಾರ್ಯಕರ್ತರು, ಕೈಯಲ್ಲಿ ತಟ್ಟೆ ಹಾಗೂ ಬಟ್ಟಲು ಹಿಡಿದು ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದರು.
ನಂತರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್‌ಬಾಬು ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಅಣೆಕಟ್ಟೆ ಸಹ ಭರ್ತಿಯಾಗದೆ ಬರದ ಛಾಯೆ ಆವರಿಸಿದೆ. ಇಂತಹ ಪರಿಸ್ಥಿತಿಯನ್ನು ಮಂಡಳಿ ಅವಲೋಕಿಸದೆ ಏಕಾಏಕಿ 15 ದಿನಗಳ ಕಾಲ 4 ಟಿಎಂಸಿ ನೀರು ಹರಿಸುವಂತೆ ಹೇಳಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಈ ಬಾರಿ ಸಂಪೂರ್ಣವಾಗಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅಣೆಕಟ್ಟೆ ಭರ್ತಿಯಾಗದೆ ಸ್ಥಳೀಯ ರೈತರ ಬೆಳೆಗಳು ಒಣಗುವ ಜೊತೆಗೆ ಮುಂದೆ ಕುಡಿಯುವ ನೀರಿನ ಪರಿಸ್ಥಿತಿ ಹೇಗೆ ಎಂಬ ಚಿಂತೆಯಲ್ಲಿರುವಾಗಲೇ ಈ ಆದೇಶ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ ನೀಡಿರುವ ಈ ಆದೇಶವನ್ನು ಹಿಂಪಡೆದು ಇಲ್ಲಿನ ವಸ್ತು ಸ್ಥಿತಿ ಪರಶೀಲಿಸಬೇಕು. ಅಲ್ಲದೇ, ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ರಾಜ್ಯದ ರೈತರು ಹಾಗೂ ಸಾರ್ವಜನಿಕರ ಪರವಾಗಿ ನಿಂತು ಈ ಹಿಂದೆ ಬಂಗಾರಪ್ಪ ಅವರು ತೆಗೆದುಕೊಂಡಿದ್ದ ನಿಲುವಿನ ರೀತಿಯಲ್ಲೇ ರಾಜ್ಯದ ಜನರಿಗೆ ನ್ಯಾಯ ಕೊಡಿಸಬೇಕು. ಒಂದು ವೇಳೆ ರೈತರಿಗೆ ದ್ರೋಹ ಬಗೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಲಕ್ಷ್ಮಿ, ಜಯಲಕ್ಷ್ಮಿ, ಯಳವಮ್ಮ, ಲಲಿತಮ್ಮ, ಗೌರಮ್ಮ, ಜಯಮ್ಮ, ರಾಜಮ್ಮ. ಲಲಿತಮ್ಮ, ಮಾದಮ್ಮ, ರಾಜಮ್ಮ, ಜಗದೀಶ್, ಟಿ.ಎಂ. ಹೊಸೂರು ಕುಮಾರ್ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.