ಬೆಂಗಳೂರು- ಮಂಗಳೂರು ಹಾಗೂ ಚಾಮರಾಜನಗರ- ಜೀವರ್ಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಕೂಡುವ ನೆಲ್ಲಿಗೆರೆ ಕ್ರಾಸ್ ಜಂಕ್ಷನ್ನಲ್ಲಿ ಬೆಂಗಳೂರು, ಮುಂಬೈನಂತಹ ದೊಡ್ಡ ನಗರ ಪ್ರದೇಶದಲ್ಲಿರುವ ಮಾದರಿಯಲ್ಲಿ ಅತ್ಯಾಧುನಿಕ ಶೈಲಿಯ ವರ್ತುಲ ರಸ್ತೆ ನಿರ್ಮಾಣ ಮಾಡಿಸಬೇಕೆಂಬುದು ಬಹುದಿನಗಳ ಕನಸಾಗಿತ್ತು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಎರಡು ರಾಷ್ಟ್ರೀಯ ಹೆದ್ದಾರಿ ಕೂಡುವ ಜಂಕ್ಷನ್ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಆದಿಚುಂಚನಗಿರಿ ಕ್ಷೇತ್ರಕ್ಕೆ ಬರುವ ಅಪಾರ ಸಂಖ್ಯೆಯ ಭಕ್ತರ ಅನುಕೂಲಕ್ಕಾಗಿ ವರ್ತುಲ ರಸ್ತೆ ನಿರ್ಮಾಣ ಮಾಡಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಕ್ರಾಸ್ ಜಂಕ್ಷನ್ನಲ್ಲಿ 500 ಕೋಟಿ ರು. ವೆಚ್ಚದ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬೆಂಗಳೂರು- ಮಂಗಳೂರು ಹಾಗೂ ಚಾಮರಾಜನಗರ- ಜೀವರ್ಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಕೂಡುವ ನೆಲ್ಲಿಗೆರೆ ಕ್ರಾಸ್ ಜಂಕ್ಷನ್ನಲ್ಲಿ ಬೆಂಗಳೂರು, ಮುಂಬೈನಂತಹ ದೊಡ್ಡ ನಗರ ಪ್ರದೇಶದಲ್ಲಿರುವ ಮಾದರಿಯಲ್ಲಿ ಅತ್ಯಾಧುನಿಕ ಶೈಲಿಯ ವರ್ತುಲ ರಸ್ತೆ ನಿರ್ಮಾಣ ಮಾಡಿಸಬೇಕೆಂಬುದು ಬಹುದಿನಗಳ ಕನಸಾಗಿತ್ತು. ಇದಕ್ಕಾಗಿ ಕಳೆದ ಮೂರು ವರ್ಷದಿಂದ ಪ್ರಯತ್ನಿಸಲಾಗುತ್ತಿತ್ತು ಎಂದರು.
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ಸಲಹೆ ಮಾರ್ಗದರ್ಶನ ಪಡೆದು ಸ್ಥಳೀಯ ಜನರಿಗೆ ತೊಂದರೆಯಾಗದಂತೆ ವರ್ತುಲ ರಸ್ತೆ ನಿರ್ಮಸಲಾಗುತ್ತಿದೆ. ಇದರಿಂದ ಹೆದ್ದಾರಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಕ್ರಾಸ್ ಜಂಕ್ಷನ್ನಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಈ ಎರಡೂ ಕಾಮಗಾರಿಗಳು ಪೂರ್ಣಗೊಂಡಲ್ಲಿ ನೆಲ್ಲಿಗೆರೆ ಕ್ರಾಸ್ ಜಂಕ್ಷನ್ ದೊಡ್ಡ ನಗರ ಪ್ರದೇಶದಂತೆ ಕಂಗೊಳಿಸಲಿದೆ ಎಂದರು.
ನಾಗಮಂಗಲ ಪಟ್ಟಣ ವ್ಯಾಪ್ತಿಯಲ್ಲಿ ಹಾಯ್ದುಹೋಗಿರುವ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಲ್ಲಲ್ಲಿ ಹಾಳಾಗಿರುವ ಹಿನ್ನಲೆಯಲ್ಲಿ ದುರಸ್ಥಿಪಡಿಸಲು ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ರಸ್ತೆಯ ದುರಸ್ಥಿಗಾಗಿ 7ಕೋಟಿ ರು. ಅನುದಾನ ಮಂಜೂರಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಈ ವೇಳೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ಕನ್ನಾಘಟ್ಟ ವೆಂಕಟೇಶ್, ಎಚ್.ಟಿ.ಕೃಷ್ಣೇಗೌಡ, ಯಶೋಧಮ್ಮ, ಚೇತನ್, ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಆರ್.ಕೃಷ್ಣೇಗೌಡ, ಕಾಮಗಾರಿ ನಿರ್ವಹಣೆಯ ಯೋಜನಾ ವ್ಯವಸ್ಥಾಪಕ ನಂದೀಶ್ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.