ಭೂಪರಿಹಾರ ನೀಡದೆ ರಸ್ತೆ ನಿರ್ಮಾಣಕ್ಕೆ ಬಿಡಲ್ಲ: ಆಕ್ರೋಶ

KannadaprabhaNewsNetwork | Published : May 23, 2025 12:08 AM
ದಾಬಸ್‍ಪೇಟೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಅಭಿವೃದ್ಧಿ ನಿರ್ಮಾಣಕ್ಕಾಗಿ ಜಮೀನನ್ನು ವಶಪಡಿಸಿಕೊಂಡು ಹಲ ವರ್ಷ ಕಳೆದರೂ ಭೂಪರಿಹಾರ ನೀಡಿಲ್ಲ. ಭೂ ಪರಿಹಾರ ನೀಡುವವರೆಗೂ ರಸ್ತೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಯಂತ್ರಗಳ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ನಡೆದಿದೆ.
Follow Us

ದಾಬಸ್‍ಪೇಟೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಅಭಿವೃದ್ಧಿ ನಿರ್ಮಾಣಕ್ಕಾಗಿ ಜಮೀನನ್ನು ವಶಪಡಿಸಿಕೊಂಡು ಹಲ ವರ್ಷ ಕಳೆದರೂ ಭೂಪರಿಹಾರ ನೀಡಿಲ್ಲ. ಭೂ ಪರಿಹಾರ ನೀಡುವವರೆಗೂ ರಸ್ತೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಯಂತ್ರಗಳ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಂಗಲ್ ಕೆಂಪೋಹಳ್ಳಿ ಗ್ರಾಮದ ಸರ್ವೇ ನಂಬರ್ 33/2ಸಿ ರಲ್ಲಿ ರಾಷ್ಟ್ರೀಯ ಹೆದ್ದಾರಿ-4ರ ಚತುಷ್ಪಥದ ರಸ್ತೆ ಅಭಿವೃದ್ದಿಗಾಗಿ 2003ರಲ್ಲಿ 2222 ಮೀಟರ್ ಜಮೀನನ್ನು ಭೂಸ್ವಾದೀನ ಪಡಿಸಿಕೊಂಡಿದ್ದು, ಮತ್ತೆ 2019ರಲ್ಲಿ ಮತ್ತೆ ಹತ್ತು ಪಥದ ರಸ್ತೆ ನಿರ್ಮಾಣಕ್ಕೆ 514 ಮೀಟರ್ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದು ಸದರಿ ಭೂಮಿಗೆ ಪರಿಹಾರ ನೀಡದೆ ರೈತ ಮಹಿಳೆ ಜಯಮ್ಮ ಕುಟುಂಬಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.

ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಘಟನಾ ಸ್ಥಳಕ್ಕೆ ತಹಸೀಲ್ದಾರ್ ಅಮೃತ್ ಅತ್ರೇಶ್, ವಿಶೇಷ ಭೂಸ್ವಾಧೀನಾಧಿಕಾರಿ ಅಪೇಕ್ಷಾ ಸತೀಶ್ ಪವಾರ್ ದಾಬಸ್‍ಪೇಟೆ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ರೈತರ ನಡುವೆ ವಾಗ್ವಾದ ಉಂಟಾಗಿ ಪರಿಹಾರ ನೀಡದೆ ಕೆಲಸ ನಿರ್ವಹಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಕುಳಿತರು.

ತಹಸೀಲ್ದಾರ್ ಅಮೃತ್ ಆತ್ರೇಶ್ ಪ್ರತಿಭಟನಾಕಾರರಿಗೆ ಒಂದು ವಾರ ಕಾಲಾವಕಾಶ ನೀಡಿ ಅಷ್ಟರಲ್ಲಿ ಪರಿಹಾರಕ್ಕೆ ಸಂಬಂಧಿಸಿದ ಪ್ರಕ್ರಿಯೆ ಬಗೆಹರಿಸಿಕೊಳ್ಳಬೇಕು. ಇಲ್ಲವೇ ರಸ್ತೆ ನಿರ್ಮಿಸಲು ತೊಂದರೆ ಕೊಡಬಾರದೆಂದು ತಾಕೀತು ಮಾಡಿದರು.

ರೈತ ವೆಂಕಟೇಶ್ ಮಾತನಾಡಿ, ನಾವು ರಸ್ತೆ ನಿರ್ಮಿಸಲು ತೊಂದರೆ ನೀಡುತ್ತಿಲ್ಲ. ಬದಲಾಗಿ ನಮ್ಮ ಜಮೀನಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರವನ್ನು ನೀಡಿ ಕೆಲಸ ಮಾಡುವ ಬದಲು ಪೊಲೀಸರನ್ನು ಕರೆತಂದು ದೌರ್ಜನ್ಯ ಎಸಗುತ್ತಿದ್ದಾರೆ. ಅಲ್ಲದೆ, 2003ರಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೂ ಪರಿಹಾರ ನೀಡಿಲ್ಲ. ಮತ್ತೆ 2019ರಲ್ಲಿ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು ನಾವು ಕಚೇರಿಗೆ ಅಲೆದ ನಂತರ 2023ರಲ್ಲಿ ಕೋರ್ಟ್‍ಗೆ ಹಣ ಸಂದಾಯ ಮಾಡಿದ್ದಾರೆ. ಈ ಕುರಿತಂತೆ ನಾವು ಹೈಕೋರ್ಟ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ದಾವೆ ಹೂಡಿದ್ದೇವೆ. ಕಳೆದ ಡಿಸೆಂಬರ್‌ನಲ್ಲಿ 2013ರ ಪ್ರಕಾರ ಎರಡು ತಿಂಗಳಲ್ಲಿ ಪರಿಹಾರ ಒದಗಿಸುವಂತೆ ಕೋರ್ಟ್‌ ಆದೇಶ ನೀಡಿದ್ದರೂ ಅಧಿಕಾರಿಗಳು ಅದಕ್ಕೂ ಲೆಕ್ಕಿಸದೆ ನಮಗೆ ಅನ್ಯಾಯ ಮಾಡುತ್ತಿದ್ದು ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಅಮೃತ್ ಅತ್ರೇಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಅಪೇಕ್ಷಾ ಪವಾರ್, ಉಪ ತಹಸೀಲ್ದಾರ್ ಶಶಿಧರ್, ಇನ್ಸ್‌ಪೆಕ್ಟರ್ ರಂಜನ್, ಎಎಸ್‍ಐಗಳಾದ ಗಂಗಾಧರ್, ಮಲ್ಲೇಶ್, ರಾಜಸ್ವ ನಿರೀಕ್ಷಕ ಸುಂದರ್ ರಾಜ್, ವಿಎ ಬಾಲಕೃಷ್ಣ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಪೋಟೋ 5 :

ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣ ವಿಚಾರದಲ್ಲಿ ತಹಸೀಲ್ದಾರ್ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಪೋಟೋ 6 :

ರಸ್ತೆ ನಿರ್ಮಾಣ ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು ಯಂತ್ರಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು.