ರಾಮಮೂರ್ತಿ ನವಲಿ ಗಂಗಾವತಿ
ನಗರದ ಒಂದನೇ ವಾರ್ಡ್, ಮೂರನೇ ವಾರ್ಡ್ ಸತ್ಯನಾರಾಯಣ ಪೇಟೆ, ರಾಮಮಂದಿರ ರಸ್ತೆ, ಚಂದ್ರಹಾಸ ಚಿತ್ರ ಮಂದಿರದ ರಸ್ತೆ, ಸಿದ್ದಿಕೇರಿ ರಸ್ತೆ ಕಾಮಗಾರಿಯ ಗೋಜಿಗೆ ಗುತ್ತಿಗೆದಾರರು ಬರುತ್ತಿಲ್ಲ. ವಿವಿಧ ವಾರ್ಡ್‌ಗಳಲ್ಲಿ ಕೆಲವು ಸಿಸಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಈ ರಸ್ತೆಗಳು ಬಹುತೇಕವಾಗಿ ಪೂರ್ಣಗೊಂಡಿವೆ. ಆದರೆ ಡಾಂಬರೀಕರಣ ಕೈಗೊಂಡಿರುವ ರಸ್ತೆ ಮಾತ್ರ ವಿಳಂಬವಾಗಿದೆ. ಗುತ್ತಿಗೆ ಪಡೆದ ಬಾಲಾಜಿ ಕೃಪಾ ಕನಸ್ಟ್ರಕ್ಷನ್ ಕಂಪನಿಯವರು ಗಂಗಾವತಿಯ ಕೆಲ ಉಪ ಗುತ್ತಿಗೆದಾರರಿಗೆ ಕೆಲಸ ನೀಡಿ ಕೈ ತೊಳೆದುಕೊಂಡಿದ್ದಾರೆ.
₹21.38 ಕೋಟಿ ಅನುದಾನ: ನಗರೋತ್ಥಾನ ಯೋಜನೆಯಲ್ಲಿ ನಗರದ 35 ವಾರ್ಡ್‌ಗಳಲ್ಲಿ 65 ಕಾಮಗಾರಿಯನ್ನು ನಗರಸಭೆಯಿಂದ ಕೈಗೊಂಡಿದ್ದಾರೆ. ರಸ್ತೆ ಡಾಂಬರೀಕರಣ, ಸಿಸಿ ರಸ್ತೆ, ಬಿಟಿ ರಸ್ತೆ, ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಬೇಕಾಗಿದೆ. ಆದರೆ ಗುತ್ತಿಗೆದಾರರು ಈ ಕಾಮಗಾರಿಯ ಕಡೆಗೆ ಗಮನಹರಿಸದೆ ಬಿಲ್‌ಗಾಗಿ ನಗರಸಭೆಗೆ ಹಾಜರಾಗಿ ಹೋಗುತ್ತಿದ್ದಾರೆಂದು ಹೇಳಲಾಗುತ್ತಿದೆ.ಡಿಸಿ ಸೂಚನೆ ಏನಾಯ್ತು?: ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಜಿಲ್ಲಾಧಿಕಾರಿ ಆಗಮಿಸಿ ಕಾಮಗಾರಿ ವೀಕ್ಷಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ಥಳದಲ್ಲಿ ಗುತ್ತಿಗೆದಾರರಿಗೆ ಮತ್ತು ನಗರಸಭೆಯ ಅಭಿಯಂತರರಿಗೆ ಸೂಚನೆ ನೀಡಿ ಕೂಡಲೆ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದರು. ಆದರೆ ಗುತ್ತಿಗೆದಾರ ಜಿಲ್ಲಾಧಿಕಾರಿ ಸೂಚನೆಗೆ ಕ್ಯಾರೇ ಎನ್ನದೆ, ನಗರಸಭೆಯಲ್ಲಿ ಬಿಲ್ ಪಾವತಿಸಿಕೊಂಡು ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪರ್ಯಾಯ ವ್ಯವಸ್ಥೆ ಕಲ್ಪಿಸಿ:ರಸ್ತೆ ದುರಸ್ತಿಯಾಗುವವರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಕಲ್ಲುಗಳನ್ನು ತೆಗೆದು ಮೊದಲಿನಂತೆ ಮಾಡಬೇಕು ಎಂದು ವಾರ್ಡ್‌ನ ಜನರು ಒತ್ತಾಯಿಸಿದ್ದಾರೆ.
ಕಳೆದ 6 ತಿಂಗಳಿನಿಂದ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ದಿನನಿತ್ಯ ಸಂಚಾರ ಮಾಡುವುದು ದುಸ್ತರವಾಗಿದೆ. ನಗರಸಭೆಯವರಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ. ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜಯನಗರ ನಿವಾಸಿ ದೊಡ್ಡಪ್ಪ ತಿಳಿಸಿದ್ದಾರೆ.