ಒಟ್ಟು 72 ಅಡಿಗಳಷ್ಟು ಅಗಲಕ್ಕೆ ಸರ್ಕಾರದಿಂದ ನೋಟಿಫಿಕೇಶನ್ ವೇಳೆ ಸೋಷಿಯಲ್ ಆಡಿಟ್ ಮಾಡದೇ ಉದ್ದೇಶಪೂರ್ವಕವಾಗಿ ತಪ್ಪುಗಳನ್ನೆಸಗಿ ಅಗಲೀಕರಣ ವಿರೋಧಿಗಳಿಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಗುವಂತೆ ಮಾಡಿದ್ದಾಗಿ ಸಾರ್ವಜನಿಕರು ಆರೋಪಿಸಿದರು.
ಬ್ಯಾಡಗಿ: ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ- ಸೊರಬ ರಾಜ್ಯ ಹೆದ್ದಾರಿ- 136(ಮುಖ್ಯರಸ್ತೆ) ಅಗಲೀಕರಣ ವಿಳಂಬಕ್ಕೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯ ಎಂ.ಎಲ್. ಕಿರಣಕುಮಾರ ಅವರು ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ ಅವರಿಗೆ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೂರು ಸಲ್ಲಿಸಿದರು.
ಒಟ್ಟು 72 ಅಡಿಗಳಷ್ಟು ಅಗಲಕ್ಕೆ ಸರ್ಕಾರದಿಂದ ನೋಟಿಫಿಕೇಶನ್ ವೇಳೆ ಸೋಷಿಯಲ್ ಆಡಿಟ್ ಮಾಡದೇ ಉದ್ದೇಶಪೂರ್ವಕವಾಗಿ ತಪ್ಪುಗಳನ್ನೆಸಗಿ ಅಗಲೀಕರಣ ವಿರೋಧಿಗಳಿಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಗುವಂತೆ ಮಾಡಿದ್ದಾಗಿ ಆರೋಪಿಸಿದರು. ಸರ್ಕಾರದ ಪರ ಕೆಲಸ ಮಾಡಬೇಕಾದ ಅಧಿಕಾರಿಗಳು ಅದರ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಹೈಕೋರ್ಟನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇವಲ 6 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಲಿಖಿತ ಹೇಳಿಕೆ ನೀಡಿದ್ದ ಅಧಿಕಾರಿಗಳು ಅದಕ್ಕೆ ತಪ್ಪಿದ್ದಾರೆ ಎಂದರು.ಮುಖ್ಯಾಧಿಕಾರಿಗಳಿಂದಲೂ ಮೋಸ: ಒಟ್ಟು 85 ವರ್ಷಕ್ಕೂ ಅಧಿಕ ಆಯುಷ್ಯವಾಗಿರುವ ಶಿಥಿಲಾವಸ್ಥೆ ತಲುಪಿರುವ ಮುಖ್ಯರಸ್ತೆಯಲ್ಲಿನ 15 ಕಟ್ಟಡಗಳನ್ನು ತೆರವುಗೊಳಿಸುವಂತೆ ನಿರ್ದೇಶನವಿದ್ದರೂ ಮುಖ್ಯಾಧಿಕಾರಿಗಳು ತಪ್ಪೆಸಗಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕಡೆಗೆ ಬೆರಳು ತೋರುತ್ತಿದ್ದು, ಒಟ್ಟಾರೆ ಅಧಿಕಾರಿಗಳಿಂದಲೇ ಅಗಲೀಕರಣಕ್ಕೆ ವಿಳಂಬವಾಗುತ್ತಿದೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಲಿಖಿತ ದೂರು ಸಲ್ಲಿಸಿದರು.ತಪ್ಪು ಮಾಹಿತಿ ನೀಡುತ್ತಿದ್ದಾರೆ: ಕಳೆದ 2023ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸಕಲ ಸಿದ್ಧತೆ ನಡೆದಿತ್ತು. ಆದರೆ ವಿನಾಕಾರಣ ಭೂಸ್ವಾಧೀನಕ್ಕೆ 1 ವರ್ಷ ಅವಧಿ ಕೇಳಿದ್ದಾರೆ. ಆದರೆ ಇದೀಗ ಅವಧಿ ಪೂರ್ಣಗೊಂಡಿದೆ. ಯಾವುದೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇಲ್ಲ. ಹೀಗಿದ್ದರೂ ಮುಖ್ಯರಸ್ತೆಯಲ್ಲಿನ 750 ಮೀಟರ್ ರಸ್ತೆ ಅಗಲೀಕರಣಕ್ಕೆ ಮುಂದಾಗುತ್ತಿಲ್ಲ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ವರ್ತಕರು, ರೈತರು, ಕೂಲಿ ಕಾರ್ಮಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಉಪವಿಭಾಗಾಧಿಕಾರಿ, ಮುಖ್ಯಾಧಿಕಾರಿ ಮತ್ತು ಲೋಕೊಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಲಿಖಿತ ದೂರು ಸಲ್ಲಿಸಿದರು.ಗೃಹ ಮಂಡಳಿಯಿಂದ ಬದುಕು ನರಕ: ಪಟ್ಟಣದ ರಟ್ಟೀಹಳ್ಳಿ ರಸ್ತೆಯಲ್ಲಿರುವ ಗೃಹ ಮಂಡಳಿಯಲ್ಲಿ ಮನೆ ಪಡೆದಿರುವ ಜನರಿಗೆ ಮೂಲ ಸೌಲಭ್ಯಗಳಿಲ್ಲದೇ ಬದುಕು ದುಸ್ತರವಾಗಿದೆ. ಗೃಹ ಮಂಡಳಿ ಅಧಿಕಾರಿಗಳು ಮನೆಗಳನ್ನು ಪುರಸಭೆಗೆ ಹಸ್ತಾಂತರ ಮಾಡಿಲ್ಲ. ಗೃಹ ಮಂಡಳಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ವಿಶೇಷಚೇತನರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ದೂರು ಸಲ್ಲಿಸಿದರು.ಶಾಲೆಗೆ ರಕ್ಷಣೆ ಕೊಡಿ: ಬೆಟ್ಟದ ಮಲ್ಲೇಶ್ವರ ನಗದಲ್ಲಿರುವ ಸರ್ಕಾರಿ ಶಾಲೆ ಸೂಕ್ತ ರಕ್ಷಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಶಾಲೆಗೆ ಸೂಕ್ತ ರಕ್ಷಣೆ ಒದಗಿಸಿ ಸರ್ಕಾರಿ ಶಾಲೆ ಉಳಿಸುವಂತೆ ಫರೀದಾಬಾನು ನದೀಮುಲ್ಲಾ ದೂರು ಸಲ್ಲಿಸಿದರು.
ದುಪ್ಪಟ್ಟು ಹಣ ವಸೂಲಿ: ಪಟ್ಟಣದಲ್ಲಿ ಆಧಾರ ಕಾರ್ಡ್ ತಿದ್ದುಪಡಿ, ಹೊಸ ಕಾರ್ಡ್ ನೀಡಲು ಟೆಂಡರ್ ಪಡೆದವರು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಸಾಕಷ್ಟು ಹೊರೆಯಾಗುತ್ತಿದೆ ಹಾಗೂ ನಿಗದಿತ ಸಮಯದಲ್ಲಿ ಆಧಾರ ಕಾರ್ಡ್ ತಿದ್ದುಪಡಿ ಆಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ, ಕೇಳಿದಷ್ಟು ಹಣ ನೀಡಿಲ್ಲವೆಂದು ನಿಜವಾದ ಫಲಾನುಭವಿಗಳ ಕಾರ್ಡ್ ರದ್ದು ಮಾಡಲಾಗುತ್ತಿದೆ ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿಯಾಜ್ ಹಮ್ಮದ್ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಲೋಕಾಯಕ್ತ ಇನ್ಸ್‌ಪ್ಸೆಕ್ಟರ್ ಮಂಜುನಾಥ ಪಂಡಿತ್, ಟಿಇಒ ಕೆ.ಎಂ. ಮಲ್ಲಿಕಾರ್ಜುನ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.