ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ಶಾಸಕ ಜೆ.ಎನ್.ಗಣೇಶ್ ಸೂಚನೆ
ಕನ್ನಡಪ್ರಭ ವಾರ್ತೆ ಕಂಪ್ಲಿಪಟ್ಟಣದ ಅಮೃತಶಿಲಾ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಇಲ್ಲಿನ ನಡುವಲ ಮಸೀದಿಯಿಂದ ಜೋಗಿಕಾಲುವೆತನಕದ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕುರಿತು ಅಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕರ ಸಭೆ ಜರುಗಿತು.
ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು ಮಾತನಾಡಿ, ಇದು ನಿವಾಸಿಗಳು ತುಂಬಿರುವ ರಸ್ತೆಯಾಗಿದ್ದು 60ಅಡಿ ರಸ್ತೆ ಅಗಲೀಕರಣದಿಂದ ಸ್ಥಳೀಯರಿಗೆ ಸಮಸ್ಯೆಯಾಗಲಿದೆ ಹೀಗಾಗಿ ಚರಂಡಿ ಸೇರಿ ಒಟ್ಟಾರೆ 30ಅಡಿ ರಸ್ತೆ ನಿರ್ಮಿಸಬೇಕು. ಪಾದಚಾರಿ ರಸ್ತೆ ನಿರ್ಮಿಸಬಾರದು. ರಸ್ತೆಯನ್ನು ಎತ್ತರಿಸಬಾರದು. ಕುಡಿವನೀರಿನ ಪೈಪುಗಳನ್ನು ಅಚ್ಚುಕಟ್ಟಾಗಿ ರಸ್ತೆ ಎರಡು ಬದಿಗೆ ದುರಸ್ತಿಗೆ ಅನುವಾಗುವಂತೆ ಜೋಡಿಸಿಕೊಡಬೇಕು. ಚರಂಡಿ ಮೇಲೆ ಸ್ಲ್ಯಾಬ್ ಹಾಕಿಕೊಡಬೇಕು. ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು. ತೆರವುಗೊಳಿಸಿದ ನಂತರದ ಭಾಗ ಕಟ್ಟಿಸಿಕೊಳ್ಳಲು ಕೆಲವರು ಅಶಕ್ತರಿದ್ದು ಸಹಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಬಳಿಕ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ರಸ್ತೆ ಮಧ್ಯದಿಂದ ಎರಡು ಬದಿಗೆ ತಲಾ 17.5ಅಡಿ ತೆರವುಗೊಳಿಸಲಾಗುವುದು. ಇದರಲ್ಲಿ ಎರಡು ಬದಿಗೆ ಎರಡೂವರೆ ಅಡಿಚರಂಡಿ ನಿರ್ಮಿಸಲಾಗುವುದು. ಪಿ ಡಬ್ಲ್ಯೂ ಡಿ, ಜೆಸ್ಕಾಂ, ಪುರಸಭೆ, ಪೊಲೀಸ್ ಅಧಿಕಾರಿಗಳು ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಇಂದೇ ಅಳತೆಯ ಮೂಲಕ ರಸ್ತೆ ಮಧ್ಯದಿಂದ ತಲಾ17.5ಅಡಿ ಗುರುತಿಸಿ ಮಾರ್ಕ್ ಮಾಡಲಾಗುವುದು. ಸ್ವಯಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳಿ. ಇಲ್ಲದಿದ್ದಲ್ಲಿ ಪುರಸಭೆಯಿಂದ ತೆರವುಗೊಳಿಸಲಾಗುವುದು. ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಸೂಚನೆ ನೀಡಿದೆ. ರಸ್ತೆ ಅಗಲೀಕರಣ ಕಾಮಗಾರಿಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಪಿಐ ಕೆ.ಬಿ.ವಾಸುಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ನಿವಾಸಿಗಳಾದ ರಮೇಶ ಬಬಲೇಶ್ವರ, ವಿ.ವಿದ್ಯಾಧರ, ಗೌಡ್ರು ಗೋಪಾಲಕೃಷ್ಣ, ನಿರಂಜನಗುಪ್ತ, ಡಿ.ವಿ.ಸುಬ್ಬಾರಾವ್, ಎಸ್.ರಾಘವೇಂದ್ರ, ಜಿ.ರಾಜಾರಾವ್, ಗೋವರ್ಧನಗಿರಿ, ಜಿ.ಬಿ.ಕೋಟೇಶ್ವರ, ಗೋಟುರು ರವೀಂದ್ರನಾಥ ಸೇರಿ ಇತರರಿದ್ದರು.