ಕುರ್ಕೆ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಿಂದ ಸಂಕಷ್ಟ

KannadaprabhaNewsNetwork |  
Published : Mar 01, 2026, 01:30 AM IST
 ಸೋಮಶೇಖರ್, ರೋಡ್‌ನ ಒಂದು ಚಿತ್ರಣ | Kannada Prabha

ಸಾರಾಂಶ

ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಜನರಿಗೆ ದಿನನಿತ್ಯದ ಜೀವನವೇ ಕಷ್ಟಕರವಾಗಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ವಿಳಂಬವಾಗಿದ್ದು, ತಿಂಗಳುಗಳಾದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಪ್ರದೇಶದಲ್ಲಿ ಧೂಳು ತೀವ್ರವಾಗಿ ಕಂಡುಬರುತ್ತಿದ್ದು, ಅದನ್ನು ನಿಯಂತ್ರಿಸಲು ನಿಯಮಿತವಾಗಿ ನೀರು ಹಾಯಿಸುವ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಡಿ.ಎಂ. ಕುರ್ಕೆ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಗ್ರಾಮಸ್ಥರಿಗೆ ಅಭಿವೃದ್ಧಿಯ ಆಶಾಕಿರಣವಾಗಿರದೇ ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಸಂಪರ್ಕಕ್ಕಾಗಿ ಪ್ರಮುಖವಾಗಿರುವ ಈ ರಸ್ತೆಯು ತಾಲೂಕಿನಿಂದ ಹಾದುಹೋಗುವ ಪ್ರಮುಖ ಮಾರ್ಗವಾಗಿದೆ. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಜನರಿಗೆ ದಿನನಿತ್ಯದ ಜೀವನವೇ ಕಷ್ಟಕರವಾಗಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ವಿಳಂಬವಾಗಿದ್ದು, ತಿಂಗಳುಗಳಾದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಪ್ರದೇಶದಲ್ಲಿ ಧೂಳು ತೀವ್ರವಾಗಿ ಕಂಡುಬರುತ್ತಿದ್ದು, ಅದನ್ನು ನಿಯಂತ್ರಿಸಲು ನಿಯಮಿತವಾಗಿ ನೀರು ಹಾಯಿಸುವ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪ್ರತಿದಿನ ಡಿ.ಎಂ. ಕುರ್ಕೆಯಿಂದ ಹಾಸನ, ತಿಪಟೂರು ಹಾಗೂ ಅರಸೀಕೆರೆ ಕಡೆಗೆ ಸಂಚರಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿ ಧೂಳಿನಲ್ಲಿ ನಿಂತು ವಾಹನಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿತ ರೋಗಗಳು ಹೆಚ್ಚುತ್ತಿರುವುದಾಗಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ರಸ್ತೆ ಬದಿ ಹಾದುಹೋಗಿರುವ ಹೇಮಾವತಿ ಕುಡಿಯುವ ನೀರಿನ ಪೈಪ್‌ಲೈನ್ ಸಹ ಕಾಮಗಾರಿ ವೇಳೆ ಹಾನಿಗೊಳಗಾಗಿ ವಾರಗಳಾದರೂ ಸರಿಪಡಿಸಿಲ್ಲ. ಪರಿಣಾಮವಾಗಿ ಅನೇಕ ಮನೆಗಳಿಗೆ ನೀರು ಸರಬರಾಜು ಸ್ಥಗಿತಗೊಂಡಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಬೋರ್‌ವೆಲ್ ಇರುವ ಮನೆಗಳವರು ಇತರರಿಗೆ ನೀರು ನೀಡುವ ಮೂಲಕ ತಾತ್ಕಾಲಿಕ ಪರಿಹಾರ ಒದಗಿಸುತ್ತಿದ್ದಾರೆ.

ಓದಲು ತೊಂದರೆ:ಗ್ರಾಮದಲ್ಲಿ ಐದು ಶಾಲೆಗಳಿದ್ದು, ಮೂರು ಸರ್ಕಾರಿ ಹಾಗೂ ಎರಡು ಖಾಸಗಿ ಶಾಲೆಗಳು, ಜೊತೆಗೆ ಒಂದು ಕಾಲೇಜು ಇರುವುದರಿಂದ ವಿದ್ಯಾರ್ಥಿಗಳ ಸಂಚಾರ ಹೆಚ್ಚಾಗಿದೆ. ಈಗ ಪರೀಕ್ಷಾ ಕಾಲವಾಗಿರುವುದರಿಂದ ವಿದ್ಯುತ್ ವ್ಯತ್ಯಯವೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಕೃಷಿಗೂ ತೊಂದರೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪರ್ಕ ರಸ್ತೆಗಳಲ್ಲಿಯೂ ಗುಂಡಿಗಳನ್ನು ತೋಡಿ ತಿಂಗಳಾದರೂ ಮುಚ್ಚದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಹಾಗೂ ಮೂಲಸೌಕರ್ಯಗಳನ್ನು ಗಮನಿಸದೆ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗ್ರಾಮಸ್ಥರು ಸಂಬಂಧಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ, ನಿಯಮಾನುಸಾರ ಮತ್ತು ವೇಗವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.ಇನ್ನಾದರೂ ಸಂಬಂಧಿತ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚೆತ್ತುಕೊಂಡು, ರಸ್ತೆ ಕಾಮಗಾರಿಯಿಂದ ಉಂಟಾಗುತ್ತಿರುವ ಧೂಳನ್ನು ನಿಯಂತ್ರಿಸಲು ನಿಯಮಿತವಾಗಿ ನೀರು ಸಿಂಪಡಿಸುವುದು, ಹಾನಿಗೊಳಗಾದ ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ತುರ್ತಾಗಿ ದುರಸ್ತಿ ಮಾಡುವುದು, ಸಮರ್ಪಕ ವಿದ್ಯುತ್ ಪೂರೈಕೆ ಒದಗಿಸುವುದು ಹಾಗೂ ರಸ್ತೆ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕರ ಆರೋಗ್ಯ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಕ್ರಮ ಜರುಗಿಸಬೇಕೆಂದು ಕಾಮಗಾರಿಯಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು ಮನವಿ ಮಾಡಿದರು.=================* ಹೇಳಿಕೆ:

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಗ್ರಾಮಸ್ಥರ ಜೀವನಮಟ್ಟವನ್ನು ಕುಗ್ಗಿಸುವಂತಾಗಬಾರದು. ಅಭಿವೃದ್ಧಿ ಕಾರ್ಯಗಳು ಸಾರ್ವಜನಿಕರಿಗೆ ಅನುಕೂಲವಾಗಬೇಕು ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಜನರಿಗೆ ಆರೋಗ್ಯ ಸಮಸ್ಯೆ ಒಡ್ಡುತ್ತಿರುವುದು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಕಾರಣವಾಗುತ್ತಿರುವುದು ದುರದೃಷ್ಟಕರ.

- ಸೋಮಶೇಖರ್, ಮಾಡಾಳು ಗ್ರಾಮಸ್ಥರು

==ಫೋಟೋ :

ಸೋಮಶೇಖರ್,

ರಸ್ತೆ ಕಾಮಗಾರಿ ಚಿತ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ: ಮಾದಿಗ ಸಮಾಜದಿಂದ ದಿಢೀರ್ ರಸ್ತೆ ತಡೆ
ಬಿಜೆಪಿಗೆ ಬಿಎಸ್‍ವೈ ಕೊಡುಗೆ ಅಪಾರ: ಮಾಜಿ ಶಾಸಕ ಎಂ.ವಿ.ನಾಗರಾಜು