ಕನ್ನಡ ಪ್ರಭ ವಾರ್ತೆ ಹರಿಹರ
ಇದು ನಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದು, ಇಲ್ಲಿ ಕಾಮಗಾರಿ ನಡೆಸುವಂತಿಲ್ಲ ಎಂದು ಆಂಜನೇಯ ಬಾರ್ಕಿ ಮತ್ತು ರಾಜಪ್ಪ ಬಾರ್ಕಿ ಕಾಮಗಾರಿ ಪ್ರಾರಂಬಿಸುವುದಕ್ಕೆ ತಡೆ ಮಾಡಿದ್ದರು.
ಇಲ್ಲಿ ಮೂಲದಿಂದಲೂ ರಸ್ತೆ ಇದ್ದು, ರಾಮತೀರ್ಥ ಮುಖಾಂತರ ಹರಿಹರ ಸಂಪರ್ಕಿಸುವ ರಸ್ತೆಯಾಗಿದೆ. ರಸ್ತೆಗಳು ಸಾರ್ವಜನಿಕರು ಬಿಟ್ಟುಕೊಟ್ಟ ಆಸ್ತಿಗಳೇ ಆಗಿವೆ. ಈ ರೀತಿ ಮಾಡುತ್ತ ಹೋದರೆ ಸಾರ್ವಜನಿಕ ಆಸ್ತಿಗಳೇ ಇರುವುದಿಲ್ಲ. ದಯಮಾಡಿ ಅಡ್ಡಿ ಮಾಡಬೇಡಿ ಎಂದು ತಡೆ ಮಾಡಿದವರಿಗೆ ಗ್ರಾಮದ ಹಿರಿಯರು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರಯತ್ನ ಫಲಿಸಲಿಲ್ಲ.ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡು ಗ್ರಾಮದ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ವಿಷಯ ತಿಳಿಯುತಿದ್ದಂತೆ ಮಲೇಬೆನ್ನೂರು ಪಿಎಸ್ಐ ಹಾರೂನ್ ಅಖ್ತರ್ ಮತ್ತು ಪಿಡಿಒ ಕಾಳಮ್ಮ ಸ್ಥಳಕ್ಕೆ ಭೇಟಿ ನೀಡಿದರು. ಇದು ನಮ್ಮ ಪಿತ್ರಾರ್ಜಿತ ಆಸ್ತಿ. ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ತೀರ್ಪು ಬರುವವರೆಗೆ ರಸ್ತೆ ಕಾಮಗಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಆಂಜನೇಯ ಬಾರ್ಕಿ ಮತ್ತು ರಾಜಪ್ಪ ಬಾರ್ಕಿ ತಿಳಿಸಿದರು.
ಈ ರಸ್ತೆ ಮೂಲದಿಂದ ಇದೆ. ನೀವು ಪಿತ್ರಾರ್ಜಿತ ಆಸ್ತಿ ಎಂದು ರಸ್ತೆ ಕಾಮಗಾರಿ ತಡೆ ಮಾಡುವಂತಿಲ್ಲ. ರಸ್ತೆ ನಿಮ್ಮದೆ ಆಗಿದ್ದರೆ ನ್ಯಾಯಾಲಯದಿಂದ ತಡೆಯಾಜ್ಞೆ ತನ್ನಿ. ಈ ರೀತಿ ತಡೆ ಮಾಡಲು ಅವಕಾಶವಿಲ್ಲ ಎಂದು ಪಿಎಸ್ಐ ತಿಳಿಸಿದಾಗ ಒಪ್ಪಿಗೆ ನೀಡಿದರು. ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.ತಕರಾರು ಇದ್ದರೆ, ನೇರವಾಗಿ ಠಾಣೆಯನ್ನು ಸಂಪರ್ಕಿಸಿ. ಸಮಸ್ಯೆ ಉದ್ಬವಿಸುವಂತೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಇತ್ತು. ಪೋನ್ ಕರೆ ಸ್ವಿಕರಿಸಲು ಸಾಧ್ಯವಾಗಿಲ್ಲ. ಭಾನುವಳ್ಳಿಗೆ ಭೇಟಿ ನೀಡಿ ಘಟನೆ ಬಗ್ಗೆ ವಿವರ ಪಡೆಯುತ್ತೇನೆ ಎಂದು ಎಇಇ ಮರಿಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ರೆಡ್ಡಿ, ರೈತ ಸಂಘದ ಅಧ್ಯಕ್ಷ ಕೊಟ್ರೇಶ್, ರೈತ ಸಂಘದ ಮುಖಂಡ ಪ್ರಕಾಶ್, ಪಿಎಲ್‌ಡಿ ಬ್ಯಾಂಕಿನ ಮಾಜಿ ನಿರ್ದೇಶಕ ಪಟೇಲ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಕೊಟ್ರಪ್ಪ, ಗ್ರಾಮದ ಮುಖಂಡರಾದ ಸಿದ್ದಪ್ಪ, ಪಿ ಮಂಜಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸದಾನಂದಪ್ಪ, ಗುತ್ತಿಗೆದಾರ ಬಾಬು ಪಟೇಲ್, ಪ್ರಶಾಂತ್, ಬಸವರಾಜಪ್ಪ, ಸಂತೋಷ್ ಇತರರು ಇದ್ದರು.
ಗ್ರಾಮಸ್ಥರು ಕರೆ ಮಾಡಿದರೂ ಲೋಕೋಪಯೋಗಿ ಇಲಾಖೆ ಎಇಇ ಮರಿಸ್ವಾಮಿ ಮತ್ತು ಸೆಕ್ಷೆನ್ ಆಫೀಸರ್ ಗುರುಸ್ವಾಮಿ ಇಬ್ಬರೂ ಪೋನ್ ಕರೆ ಸ್ವೀಕರಿಸಿಲ್ಲ. ಈ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳಬೇಕಾದವರು ಸ್ಥಳಕ್ಕೂ ಬಂದಿಲ್ಲ, ಕರೆ ಸ್ವೀಕರಿಸಿಲ್ಲ ಎಂದು ಗ್ರಾಮಸ್ಥರು ಬೇಸರಗೊಂಡಿದ್ದಾರೆ. ನಾವು ಚಿಕ್ಕವರಿದ್ದಾಗಿನಿಂದಲೂ ಈ ರಸ್ತೆ ಇದೆ. ಹಲವು ಬಾರಿ ದುರಸ್ತಿ ಕಾರ್ಯವು ನಡೆದಿದೆ.ಕೆ.ಎಸ್.ಬೀರಪ್ಪ ಮಾಜಿ ಸೈನಿಕ ಭಾನುವಳ್ಳಿ.