ಶಿಗ್ಗಾಂವಿ: ಶಿಗ್ಗಾಂವಿ- ಸವಣೂರು ಹಾಗೂ ಬಂಕಾಪುರ ಪಟ್ಟಣದಲ್ಲಿ ರಸ್ತೆಗಳು ಹದಗೆಟ್ಟಿವೆ. ರಸ್ತೆ ತುಂಬ ತಗ್ಗುಗಳು ಬಿದ್ದಿವೆ. ಗುಂಡಿಗಳಲ್ಲಿ ಸಾಕಷ್ಟು ಜನ ಬಿದ್ದು ಗಾಯಗೊಂಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಮುಗಿಯಬೇಕಿದ್ದ ಕಾಮಗಾರಿ ಇನ್ನೂವರೆಗೂ ಪೂರ್ಣಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮೇಲಧಿಕಾರಿಗೆ ಸೂಚಿಸುವುದಾಗಿ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ಕರ್ನಾಟಕ ಅಭಿವೃದ್ಧಿ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಮಾತನಾಡಿದರು.ಮೇ ೧೦ರ ಒಳಗೆ ರಸ್ತೆಯಲ್ಲಿ ಸಣ್ಣಪುಟ್ಟ ತಗ್ಗುಗಳನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರ ಮತ್ತು ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಳೆದ ೨೦೨೨- ೨೩ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆ ಮೂಲಕ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಸುಮಾರು ₹೧೫ ಕೋಟಿ ಅನುದಾನದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಈ ಕುರಿತು ವಿಚಾರಣೆ ನಡೆಸಿದಾಗ ಸುಮಾರು ₹೫ ಕೋಟಿ ಅನುದಾನ ನಡೆದಿರುವುದನ್ನು ತೋರಿಸಿದ್ದಾರೆ. ಆದರೆ ಇನ್ನು ₹೧೦ ಕೋಟಿ ಅನುದಾನ ದುರ್ಬಳಕೆ ಆಗಿದೆ. ಈ ಅವ್ಯವಹಾರದಲ್ಲಿ ಶಾಮೀಲಾದ ಗುತ್ತಿಗೆದಾರರು, ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅದರ ಕುರಿತು ಸಂಪೂರ್ಣ ತನಿಖೆಯಾಗಬೇಕು. ಶಿಕ್ಷೆ ಮತ್ತು ದಂಡ ವಿಧಿಸಬೇಕು ಎಂದರು.ತಾಲೂಕಿನ ನಾರಾಯಣಪುರ ಕೆಪಿಎಸ್ ಶಾಲೆಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಆದರೆ ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಮುಖ್ಯಶಿಕ್ಷಕ ಮತ್ತು ಶಾಲಾಭಿವೃದ್ಧಿ ಸಮಿತಿ ಕೆಲವು ಸದಸ್ಯರು ಶಾಮೀಲಾಗಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ತಕ್ಷಣ ತಪ್ಪಿತಸ್ಥರ ಮೇಲೆ ಕಾನೂನು ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.