ಕೊಪ್ಪಳ: ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ಕಾಮಗಾರಿಗಳ ಕೆಲಸ ಗುಣಾತ್ಮಕವಾಗಿ ಮಾಡಬೇಕು ಜನರ ಶಾಪಕ್ಕೆ ಗುರಿಯಾಗಬಾರದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ರಸ್ತೆಗಳು ಬಹಳ ಕಡೆ ಹಾಳಾಗಿದ್ದು, ರಸ್ತೆಯ ಮಧ್ಯದಲ್ಲಿ ಎಲ್ಲಿ ಗುಂಡಿ ಬಿದ್ದಿವೆ, ಅವುಗಳನ್ನು ಮುಚ್ಚಲು ಮೊದಲ ಆದ್ಯತೆ ನೀಡಬೇಕು. ಲೋಕೋಪಯೋಗಿ ಇಲಾಖೆ ಈಗಾಗಲೇ ₹15 ಕೋಟಿ 71 ಲಕ್ಷ ಅನುದಾನ ಬಂದಿದ್ದು ಅದನ್ನು ಆದಷ್ಟು ಬೇಗನೆ ಟೆಂಡರ್ ಕರೆದು ಅವಶ್ಯಕತೆ ಇರುವಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ಕೆಲವು ಕಡೆ ಸರ್ವಿಸ್ ರೋಡಗಳು ಹಾಳಾಗಿದ್ದು ಅವುಗಳನ್ನು ಸಹ ಸರಿಪಡಿಸಬೇಕೆಂದರು.
ರಸ್ತೆ ಅಪಘಾತಗಳಲ್ಲಿ ಏನಾದರೂ ಆದರೆ ಸಂಬಂಧಿಸಿದ ಇಲಾಖೆಯ ಜತೆಗೆ ಆಯಾ ಕಾಮಗಾರಿಗಳ ಗುತ್ತಿಗೆದಾರರಿಗೆ ಜವಾಬ್ದಾರನ್ನಾಗಿ ಮಾಡಲಾಗುತ್ತಿದೆ. ಈ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಿ. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ರಸ್ತೆಗಳು ಎಲ್ಲಿ ಹಾಳಾಗಿವೆ ಅವುಗಳನ್ನು ಸರಿಪಡಿಸಿ. ಎನ್.ಎಚ್ 67 ಮಂಗಳಾಪುರ ಮತ್ತು ಬಸಾಪುರ ಹತ್ತಿರದ ರಸ್ತೆ ಸಮಸ್ಯೆ ಬಗೆಹರಿಸಲು ಎಷ್ಟು ದಿನ ಬೇಕು. ಆದಷ್ಟು ಬೇಗನೆ ಅಲ್ಲಿಯ ಸಮಸ್ಯೆ ಸರಿಪಡಿಸಬೇಕೆಂದು ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗಂಗಾವತಿಯಲ್ಲಿ ಕೆ.ಆರ್.ಐ.ಡಿ.ಎಲ್ ನವರು ರಸ್ತೆ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎನ್ನುವ ದೂರುಗಳಿಗೆ ಅಲ್ಲಿ ಎಷ್ಟು ರಸ್ತೆಗಳಲ್ಲಿ ತಾವು ಕೆಲಸ ಮಾಡಿದ್ದಿರಾ ಆದಷ್ಟು ಬೇಗನೆ ಅವು ಸರಿಪಡಿಸಬೇಕು. ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ರಸ್ತೆಯ ಯಾವುದೇ ಕೆಲಸ ಕಾಮಗಾರಿ ಕಾಲಮಿತಿಯಲ್ಲಿ ಮುಗಿಸುವುದರ ಜತೆಗೆ ಅವುಗಳನ್ನು ಗುಣಾತ್ಮಕವಾಗಿ ಮಾಡಬೇಕೆಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್.ಅರಸಿದ್ದಿ ಮಾತನಾಡಿ, ಹೈವೇ ಟೋಲಗಳಲ್ಲಿ ಬೈಕ್‌ಗಳು ಹೋಗುವಾಗ ಅವು ತಮ್ಮ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗುತ್ತಿಲ್ಲ. ಅದನ್ನು ಸರಿಪಡಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸ್ಪೀಡ್ ರಡಾರಗಳನ್ನು ಅಳವಡಿಸುವುದರ ಜತೆಗೆ ಸೈನೇಜ ಮತ್ತು ಬ್ಯಾರಿಕೇಡಗಳನ್ನು ಅಳವಡಿಸಬೇಕೆಂದು ಹೇಳಿದರು.ಈ ಸಭೆಯಲ್ಲಿ ಜಿಪಂ ಸಿಇಒ ವರ್ಣಿತ್ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹೇಮಂತ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕ ಮಂಜುನಾಥ ಗುಂಡೂರ, ರಾಷ್ಟ್ರೀಯ ಹೆದ್ದಾರಿ ಮತ್ತು ಕೆ.ಆರ್.ಐ.ಡಿ.ಎಲ್. ನ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.