ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ವಲಯದ ದೇವದಾರಿ ಅರಣ್ಯ ಪ್ರದೇಶಕ್ಕೆ ಶನಿವಾರ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್, ಅಧ್ಯಕ್ಷ ಎಂ.ಸಿ. ಹಾವೇರಿ, ಆಶಾ ಕಾರ್ಯಕರ್ತರ ಸಂಘಟನೆಯ ಮುಖ್ಯಸ್ಥರಾದ ನಾಗಲಕ್ಷ್ಮೀ ಮುಂತಾದವರು ಭೇಟಿ ನೀಡಿ, ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಮತ್ತು ಅಲ್ಲಿನ ಪರಿಸರ ಸಂರಕ್ಷಣೆಗೆ ಹೋರಾಟ ನಡೆಸುತ್ತಿರುವ ರೈತರು, ಪರಿಸರವಾದಿಗಳನ್ನು ಭೇಟಿ ಮಾಡಿದರು.ದೇವದಾರಿ ಅರಣ್ಯ ಪ್ರದೇಶದಲ್ಲಿ ಕೆಐಒಸಿಎಲ್ ಕಂಪನಿಯವರು ಗಣಿಗಾರಿಕೆ ನಡೆಸಲು ಮತ್ತು ಅದಿರು ಸಾಗಾಣಿಕೆಗಾಗಿ ಸಂಪರ್ಕ ರಸ್ತೆ ಸರ್ವೇಗಾಗಿ ಶುಕ್ರವಾರ ಮುಂದಾದಾಗ, ಜನ ಸಂಗ್ರಾಮ ಪರಿಷತ್, ರೈತ ಸಂಘ ಹಾಗೂ ಕೆಆರ್‌ಎಸ್ ಪಕ್ಷದ ಮುಖಂಡರು ಹಾಗೂ ಕಂಪನಿ ಪರವಾದವರು ನಡುವೆ ಮಾತಿನ ಚಕಮಕಿ ಹಾಗೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಮಾಜ ಪರಿವರ್ತನ ಸಮುದಾಯ ಮತ್ತಿತರ ಸಂಘಟನೆಗಳ ಮುಖಂಡರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ರೈತ ಸಂಘ, ಜನ ಸಂಗ್ರಾಮ ಪರಿಷತ್, ಕೆಆರ್‌ಎಸ್ ಪಕ್ಷದ ಮುಖಂಡರಾದ ಟಿ.ಎಂ. ಶಿವಕುಮಾರ್, ಶ್ರೀಶೈಲ ಅಲ್ದಳ್ಳಿ, ಕಾಡಪ್ಪ ಮುಂತಾದವರು ಮಾತನಾಡಿ, ಇಲ್ಲಿ ವರ್ಜಿನ್ ಅರಣ್ಯ ಪ್ರದೇಶವಿದೆ. ಜೀವ ವೈವಿದ್ಯವಿದೆ. ಇಲ್ಲಿ ಗಣಿಗಾರಿಕೆ ಆರಂಭವಾದರೆ, ಇಲ್ಲಿನ ಪರಿಸರ, ಜೀವವೈವಿದ್ಯ, ಪುರಾಣ ಪ್ರಸಿದ್ಧ ಸ್ಮಾರಕಗಳಿಗೆ ತೊಂದರೆಯಾಗಲಿದೆ. ಅರಣ್ಯ ಪ್ರದೇಶದ ಸನಿಲಹದಲ್ಲಿಯೇ ರೈತರ ಜಮೀನುಗಳಿವೆ. ಆದ್ದರಿಂದ ಇಲ್ಲಿ ಗಣಿಗಾರಿಕೆ ನಡೆಯಲು ಬಿಡುವುದಿಲ್ಲ. ಒಂದುವೇಳೆ ಗಣಿಗಾರಿಕೆಗಾಗಿ ಮರಗಳನ್ನು ಕಡಿಯುವುದಾದರೆ, ಮೊದಲು ನಮ್ಮನ್ನು ಕಡಿದು ನಂತರದಲ್ಲಿ ಮರಗಳನ್ನು ಕಡಿದುಕೊಳ್ಳಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಎಸ್.ಆರ್. ಹಿರೇಮಠ್ ಅವರು ಮಾತನಾಡಿ, ನಾವು ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಿದ ಪರಿಣಾಮ ಹಲವರು ಜೈಲಿಗೆ ಹೋಗಬೇಕಾಯಿತು. ನಾವು ಪರಿಸರ ಸಂರಕ್ಷಣೆಗಾಗಿ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸೋಣ ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಜಿ.ಎನ್. ಸಿಂಹ, ಖಲೀಮ್, ಪರಮೇಶ್ವರಪ್ಪ, ಜಿ.ಕೆ. ನಾಗರಾಜ ಮುಂತಾದವರು ಉಪಸ್ಥಿತರಿದ್ದರು.ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥರಾದ ಎಸ್.ಆರ್. ಹಿರೇಮಠ್ ಮತ್ತಿತರ ಮುಖಂಡರು ಶನಿವಾರ ಸಂಡೂರು ತಾಲ್ಲೂಕಿನ ದೇವದಾರಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯರು, ರೈತ ಸಂಘ, ಜನ ಸಂಗ್ರಾಮ ಪರಿಷತ್, ಕೆಆರ್‌ಎಸ್ ಪಕ್ಷದ ಮುಖಂಡರೊಂದಿಗೆ ಅಲ್ಲಿನ ಪರಿಸರ ಸಂರಕ್ಷಣೆಯ ಕ್ರಮಗಳ ಕುರಿತು ಚರ್ಚಿಸಿದರು.