ಪರ್ಯಾಯ ರಸ್ತೆಯಿಲ್ಲದೆ ರಸ್ತೆ ಕಾಮಗಾರಿ: ಸಂಚಾರ ಸಂಕಷ್ಟ

KannadaprabhaNewsNetwork |  
Published : Oct 01, 2026, 01:30 AM IST
ಶಿರ್ಷಿಕೆ-೩೦.ಎಂ.ಎಲ್.ಆರ್.೧-ಮಾಲೂರಿನಲ್ಲಿ ಮೇಲ್ಸೇತುವೆ ಕಾಮಗಾರಿಯಿಂದ ಎಳುತ್ತಿರುವ ಧೂಳನ್ನು ನಿಯಂತ್ರಿಸಲು ಹೋಟೆಲ್ ಸೇರಿದಂತೆ ಅಂಗಡಿ ಮಾಲೀಕರು ಪ್ಲಾಸ್ಟಿಕ್ ಹೊದಿಕೆಯ ಮೊರೆ ಹೋಗಿರುವುದು. | Kannada Prabha

ಸಾರಾಂಶ

ದಾಬಸ್‌ಪೇಟೆಯಿಂದ ಹೊಸೂರು ಗಡಿವರೆಗೆ ಕೈಗಾರಿಕಾ ಕಾರಿಡಾರ್ ಯೋಜನೆಗಾಗಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ೩೨೦೦ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ.

ದಾಬಸ್‌ಪೇಟೆಯಿಂದ ಹೊಸೂರು ಗಡಿವರೆಗೆ ಕೈಗಾರಿಕಾ ಕಾರಿಡಾರ್ । ಮಾಲೂರು ಪಟ್ಟಣದಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್‌ ಜಾಂ

ಕನ್ನಡಪ್ರಭ ವಾರ್ತೆ ಮಾಲೂರು

ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಮಾಡದೆ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ಕಿರಿದಾದ ರಸ್ತೆ, ಅದರಲ್ಲೂ ಹೊಂಡಗಳಿರುವ ಅಪಾರ ಧೂಳಿನಿಂದ ಕೂಗಿದ ಸಂಚಾರದಿಂದ ಜನರು ಬೇಸತ್ತು ಹೋಗಿದ್ದಾರೆ.

ದಾಬಸ್‌ಪೇಟೆಯಿಂದ ಹೊಸೂರು ಗಡಿವರೆಗೆ ಕೈಗಾರಿಕಾ ಕಾರಿಡಾರ್ ಯೋಜನೆಗಾಗಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ೩೨೦೦ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ಮಾಲೂರು ಪಟ್ಟಣದಲ್ಲಿ ಮೂರೂವರೆ ಕಿ.ಮೀ. ಉದ್ದ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ.

ಕಾಮಗಾರಿ ಪ್ರಾರಂಭಕ್ಕೂ ಮುನ್ನ ದಿನನಿತ್ಯ ಪಟ್ಟಣದಲ್ಲಿ ಸಂಚರಿಸುತ್ತಿರುವ ಸಾವಿರಾರು ಸಂಖ್ಯೆಯ ವಾಹನಗಳನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ರಸ್ತೆಗಳ ಅವಕಾಶವನ್ನು ಕಲ್ಪಿಸಿ ಕಾಮಗಾರಿ ಪ್ರಾರಂಭಿಸಬೇಕಾಗಿತ್ತು. ಅದಲ್ಲದೇ ರಸ್ತೆ ಅಗಲೀಕರಣಕ್ಕೆ ರಸ್ತೆ ಬದಿ ಕಟ್ಟಡಗಳನ್ನು ಯೋಜನೆಯಂತೆ ತೆರವುಗೊಳಿಸಬೇಕಾದ ಗುತ್ತಿಗೆದಾರರು ರಸ್ತೆ ಅಗಲೀಕರಣ ಮಾಡದೆ ಇದ್ದ ರಸ್ತೆ ಹಾಗೂ ಪುಟ್‌ಪಾತನ್ನು ಬಳಸಿ ಕಾಮಗಾರಿ ಪ್ರಾರಂಭಿಸಿರುವುದರಿಂದ ರಸ್ತೆ ಕಿರಿದಾಗಿ ಹಳ್ಳ ಕೊಳ್ಳ ರಸ್ತೆಗಳಲ್ಲೇ ವಾಹನ ಸಂಚರಿಸಬೇಕಾಗಿ ಬಂದಿದೆ.

ಪುಟ್‌ಪಾತ್ ಇಲ್ಲದೇ ಪಾದಾಚಾರಿಗಳು ರಸ್ತೆ ಯಲ್ಲಿ ಪ್ರಾಣವನ್ನು ಕೈನಲ್ಲಿ ಇಟ್ಟುಕೊಂಡು ಸಂಚರಿಸಬೇಕಾಗಿ ಬಂದಿದೆ. ಈಗ ರಸ್ತೆಗೆ ಅಲ್ಲಲ್ಲಿ ರಾತ್ರೋ ರಾತ್ರಿ ಡಾಂಬರೀಕರಣ ಮಾಡಿದ್ದರೂ ಧೂಳು ಹೆಚ್ಚಾಗಿದ್ದು, ಆ ರಸ್ತೆಯಲ್ಲಿರುವ ಹೋಟೆಲ್ ಅಂಗಡಿಯವರು ಅಂಗಡಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಧೂಳಿನಿಂದ ಬಚಾವ್ ಆಗುವ ಪ್ರಯತ್ನ ನಡೆಸುತ್ತಿದ್ದಾರೆ.

ಪಟ್ಟಣದ ಹೂರವಲಯದ ದೊಡ್ಡಕೆರೆ-ಹಾರೋಹಳ್ಳಿ ಕ್ರಾಸ್‌ನಿಂದ ಹೊಸೂರು ರಸ್ತೆಯಲ್ಲಿರುವ ಕೈಗಾರಿಕಾ ಪ್ರಾಂಗಾಣದ ವರೆಗೆ ಕಿ.ಮೀ.ಗಟ್ಟಲೆ ಉದ್ದದ ವಾಹನಗಳು ತಾಸುಗಟ್ಟಲೆ ನಿಲ್ಲುತ್ತಿದ್ದು, ವಿದ್ಯಾರ್ಥಿಗಳು ,ಕೆಲಸಕ್ಕೆ ಹೋಗುವ ಕಾರ್ಮಿಕರು ಸಕಾಲಕ್ಕೆ ನಿಗದಿತ ಸ್ಥಳ ತಲುಪಲು ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಹೊಸೂರು ರಸ್ತೆಯಲ್ಲಂತೂ ಸಾಲು ಸಾಲು ಟಿಪ್ಪರ್‌ಗಳು ಇದೇ ಕಿರಿದಾದ ರಸ್ತೆಯಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನ ಸಂಚಾರ ಇನ್ನಷ್ಟು ನಿಧಾನವಾಗುತ್ತಿದೆ.

ಪಟ್ಟಣವನ್ನು ಬೇರ್ಪಡಿಸುವ ಮುಖ್ಯ ರಸ್ತೆಯಲ್ಲೇ ಮೇಲ್ಸೇತುವೆ ನಿರ್ಮಾಣ ವಾಗುತ್ತಿರುವುದರಿಂದ ಪಟ್ಟಣದ ಮೇಲ್ಬಾಗದಲ್ಲಿರುವ ಮಾರುತಿ ಬಡಾವಣೆ, ಆರಳೇರಿ ರಸ್ತೆ ಭಾಗದ ಜನರು ನಗರಸಭೆ,ತರಕಾರಿ ಮಾರುಕಟ್ಟೆ ದೇವಾಲಯಗಳಿಗೆ ಕೆಳ ಭಾಗದ ಮಾಲೂರು ಪಟ್ಟಣಕ್ಕೆ ಬರಬೇಕಾದರೆ ಪ್ರಾಣಭಯದಿಂದಲ್ಲೇ ಸಂಚರಿಸಬೇಕಾಗಿ ಬಂದಿದೆ. ಈಗಾಗಲೇ ಪಟ್ಟಣದಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ ದಿನ ನಿತ್ಯ ದ್ವಿಚಕ್ರ ವಾಹನ ಹಾಗೂ ಪಾದಾಚಾರಿಗಳು ಅಫಘಾತಕ್ಕೆ ಒಳಗಾಗುವುದು ಸಾಮಾನ್ಯ ದೃಶ್ಯವಾಗುತ್ತಿದೆ. ಧೂಳಿನಿಂದಾಗಿ ಇಲ್ಲಿನ ಆಸ್ವತ್ರೆಯಲ್ಲಿ ಕಣ್ಣಿನ ಸಮಸ್ಯೆ ಇರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ರಸ್ತೆಯ ಒತ್ತುವರಿ ಕೊಡಲೇ ತೆರವುಗೊಳಿಸಿ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಧಕ್ಕೆ ಯಾಗದಂತೆ ವ್ಯವಸ್ಥೆ ಕಲ್ಪಿಸಿ ಎಂದು ಶಾಸಕರು ಆದೇಶಿಸಿ ತಿಂಗಳಾದರೂ ಅದು ಕಾರ್ಯಗತವಾಗದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜಾಮ್ ನಿರಂತರವಾಗಿದೆ ಎನ್ನುವ ಕಾಂಗ್ರೆಸ್ ಕಾರ್ಯಕರ್ತ ನಾರಾಯಣಪ್ಪ ಅವರು ಅಧಿಕಾರಿಗಳಿಂದಲ್ಲೇ ಶಾಸಕರಿಗೆ ಕೆಟ್ಟ ಹೆಸರು ಬರುತ್ತಿದೆ ಎನ್ನುತ್ತಾರೆ.ಕಳೆದ ಆರೇಳು ತಿಂಗಳ ಹಿಂದೆ ಹಾರೋಹಳ್ಳಿ ಕ್ರಾಸ್‌ನಿಂದ ಕೋಲಾರ ರಸ್ತೆಯನ್ನು ಸಂಪರ್ಕಿಸುವ ರಿಂಗ್ ರೋಡ್ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನಡೆಸಿದರು. ಆದರೆ ಇದುವರಗೂ ಒಂದು ಮೀಟರ್ ಉದ್ದದ ರಸ್ತೆ ನಿರ್ಮಾಣವಾಗದಿರುವುದರಿಂದ ಪಟ್ಟಣದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಕಾಮಗಾರಿ ಹೆಸರಿಗೆ ಮಾತ್ರನಾ ಅಥವಾ ಪ್ರಾಧಿಕಾರದಿಂದ ಹಣ ಬಿಡುಗಡೆಯಾಗಲಿಲ್ಲವಾ ಎಂದು ಗೊತ್ತಾಗುತ್ತಿಲ್ಲ.

ಮಣಿ, ಮಾಲೂರು ದ್ವಿಚಕ್ರ ಸವಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನ ದರಕ್ಕಿಂತ ನೀರು ದುಬಾರಿ ಕಾಲ ದೂರವಿಲ್ಲ: ಬೌದ್ಧೆ
ಎನ್‌ಡಿಆರ್‌ಎಫ್ ತಂಡದವರಿಂದ ಮುಂಜಾಗ್ರತೆ ಕುರಿತು ಪ್ರಾತ್ಯಕ್ಷಿಕೆ